ಸ್ಪೀಕರ್‌ ವಿರುದ್ಧವೇ ಅವಿಶ್ವಾಸ ಮಂಡನೆಗೆ ವಿಪಕ್ಷ ನೋಟಿಸ್‌-ಸ್ಪೀಕರ್ ಪೀಠದಲ್ಲಿ ಕೂರಲ್ಲ: ಬಿರ್ಲಾ

Kannadaprabha News   | Kannada Prabha
Published : Feb 11, 2026, 04:53 AM IST
om birla

ಸಾರಾಂಶ

ಸದನ ನಡೆಸುವಲ್ಲಿ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಮತ್ತು ಕಾಂಗ್ರೆಸ್ ಸಂಸದರ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಸಾಂವಿಧಾನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್‌ ನೀಡಿವೆ.

ನವದೆಹಲಿ : ಸದನ ನಡೆಸುವಲ್ಲಿ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಮತ್ತು ಕಾಂಗ್ರೆಸ್ ಸಂಸದರ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಸಾಂವಿಧಾನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್‌ ನೀಡಿವೆ.

ಇದರ ಬೆನ್ನಲ್ಲೇ, ‘ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಅಂತಿಮ ನಿರ್ಧಾರ ಆಗುವವರೆಗೆ ನೈತಿಕತೆ ಆಧಾರದಲ್ಲಿ ಸದನಕ್ಕೆ ಹಾಜರಾಗುವುದಿಲ್ಲ ಎಂದು ಬಿರ್ಲಾ ನಿರ್ಣಯಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. ಹೀಗಾಗಿ ಸ್ಪೀಕರ್‌ ಪ್ಯಾನೆಲ್‌ನಲ್ಲಿರುವ ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ.ಸಿ. ಮೋಹನ್‌ ಅವರು ಮಧ್ಯಾಹ್ನದವರೆಗೂ ಸಭಾಧ್ಯಕ್ಷ ಪೀಠದಲ್ಲಿ ಕುಳಿತು ಮಂಗಳವಾರ ಕಲಾಪ ನಡೆಸಿದ್ದು ವಿಶೇಷವಾಗಿತ್ತು.

ಅವಿಶ್ವಾಸ ನೋಟಿಸ್:

ಅವಿಶ್ವಾಸ ಗೊತ್ತುವಳಿ ಮಂಡಿಸಲು ಮಂಡಿಸಲು ಕಾಂಗ್ರೆಸ್‌, ಡಿಎಂಕೆ, ಸಮಾಜವಾದಿ ಪಕ್ಷ ಸೇರಿದಂತೆ ವಿಪಕ್ಷಗಳು ಒಂದಾಗಿದ್ದು, ಲೋಕಸಭಾ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಅವರಿಗೆ ಮಂಗಳವಾರ ನೋಟಿಸ್‌ ಸಲ್ಲಿಸಿವೆ.

ವಿಪಕ್ಷಗಳ ಪರ ಲೋಕಸಭೆ ವಿಪಕ್ಷ ಉಪನಾಯಕ ಗೌರವ್‌ ಗೊಗೋಯ್‌, ಮುಖ್ಯ ಸಚೇತಕ ಕೆ. ಸುರೇಶ್ ಹಾಗೂ ಸಚೇತಕ ಮೊಹಮದ್‌ ಜಾವೇದ್‌ ನೋಟಿಸ್‌ ಸಲ್ಲಿಸಿದವರು. ವಿಪಕ್ಷಗಳ 118 ಸಂಸದರು ಇದಕ್ಕೆ ಸಹಿ ಹಾಕಿದ್ದಾರೆ. ಆದರೆ ನೋಟಿಸ್‌ ಪ್ರತಿಗೆ ಸಹಿ ಹಾಕಲು ಟಿಎಂಸಿ ಹಿಂದೇಟು ಹಾಕಿದೆ.

ತರುವಾಯ, ನೋಟಿಸ್ ಪರಿಶೀಲಿಸುವಂತೆ ಬಿರ್ಲಾ ಅವರು ಲೋಕಸಭೆಯ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಪಕ್ಷಗಳ ಆರೋಪವೇನು?:

‘ಫೆ.2ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರಿಗೆ ಮಾತನಾಡಲು ಸ್ಪೀಕರ್‌ ಅವಕಾಶ ನೀಡಲಿಲ್ಲ. ಫೆ.3ರಂದು, ವಿಪಕ್ಷದ 8 ಸಂಸದರನ್ನು ಇಡೀ ಬಜೆಟ್ ಅಧಿವೇಶನದಿಂದ ನಿರಂಕುಶವಾಗಿ ಅಮಾನತುಗೊಳಿಸಲಾಯಿತು. ಫೆ.4ರಂದು ಬಿಜೆಪಿಯ ಒಬ್ಬ ಸಂಸದರಿಗೆ (ನಿಶಿಕಾಂತ್ ದುಬೆ) ಇಬ್ಬರು ಮಾಜಿ ಪ್ರಧಾನಿಗಳ ಮೇಲೆ ಸಂಪೂರ್ಣವಾಗಿ ಆಕ್ಷೇಪಾರ್ಹ ಮತ್ತು ವೈಯಕ್ತಿಕ ದಾಳಿ ಮಾಡಲು ಅನುಮತಿ ನೀಡಲಾಯಿತು. ಆದರೆ ಅವರ ಮೇಲೆ ಒಮ್ಮೆಯೂ ಕ್ರಮ ಕೈಗೊಳ್ಳಲಿಲ್ಲ.’

‘ಕಾಂಗ್ರೆಸ್‌ ಸದಸ್ಯರು ಪ್ರಧಾನಿ ಮೋದಿಯವರ ಆಸನದ ಕಡೆಗೆ ತೆರಳಿ ಅನಿರೀಕ್ಷಿತ ಕೃತ್ಯ ಎಸಗಬಹುದು ಎಂಬ ಸ್ಪಷ್ಟ ಮಾಹಿತಿ ತಮಗೆ ಇತ್ತು ಎಂದು ಬಿರ್ಲಾ ಹೇಳಿಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮೋದಿ ಸದನಕ್ಕೆ ಬರದಂತೆ ಬಿರ್ಲಾ ಅವರೇ ಕೇಳಿಕೊಂಡಿದ್ದರು. ಸಂಸತ್ತಿನ ಶಿಷ್ಟಾಚಾರಗಳ ಪಾಲಕರಾಗಿರಬೇಕಾದ ಸ್ಪೀಕರ್, ಕಾಂಗ್ರೆಸ್ ಸದಸ್ಯರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ವಿಪಕ್ಷಗಳು ನೋಟಿಸ್‌ನಲ್ಲಿ ಆರೋಪಿಸಿವೆ.

ಸ್ಪೀಕರ್ ಪದಚ್ಯುತಿಯ 4ನೇ ಯತ್ನ ಇದುಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಸ್ಪೀಕರ್ ಪದಚ್ಯುತಿಗೆ ನೋಟಿಸ್ ಸಲ್ಲಿಸಲಾಗುತ್ತಿರುವುದು ಇದು ನಾಲ್ಕನೇ ಬಾರಿ. ಈ ಮುನ್ನ 1954, 1966 ಮತ್ತು 1987ರಲ್ಲಿ ಈ ಯತ್ನಗಳು ನಡೆದಿದ್ದವು. 1954 ರಲ್ಲಿ ಜಿ.ವಿ. ಮಾವಲಂಕರ್, 1966 ರಲ್ಲಿ ಹುಕಮ್ ಸಿಂಗ್ ಮತ್ತು 1987 ರಲ್ಲಿ ಬಲರಾಮ್ ಜಾಖಡ್‌ ವಿರುದ್ಧ ಅವಿಶ್ವಾಸ ನಿರ್ಣಯ ತರಲಾಗಿತ್ತು. ಆದರೆ ಯಾವುವೂ ಅಂಗೀಕಾರ ಆಗಿರಲಿಲ್ಲ. ಈಗಲೂ 292 ಸದಸ್ಯ ಬಲ ಎನ್‌ಡಿಎಗೆ ಇದ್ದು, ವಿಪಕ್ಷ ಕೂಟದಲ್ಲಿ 234 ಜನ ಇದ್ದಾರೆ. ಹೀಗಾಗಿ ಬಿರ್ಲಾ ವಿರುದ್ಧದ ಅವಿಶ್ವಾಸ ಅಂಗೀಕಾರ ಆಗುವುದು ಅನುಮಾನ.

ಅವಿಶ್ವಾಸಕ್ಕೆ ರಾಹುಲ್‌ ಸಹಿ ಇಲ್ಲ

ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷ ನೇತಾರ ರಾಹುಲ್‌ ಗಾಂಧಿ ಸಹಿ ಹಾಕಿಲ್ಲ. ವಿಪಕ್ಷ ನಾಯಕ ಹುದ್ದೆ ಸಾಂವಿಧಾನಿಕ ಹುದ್ದೆ ಆಗಿದ್ದು, ಹೀಗಾಗಿ ನಿಯಮಾನುಸಾರ ಅವಿಶ್ವಾಸಕ್ಕೆ ಸಹಿ ಹಾಕಲು ಬರುವುದಿಲ್ಲ.

ಅವಿಶ್ವಾಸ ವಿಪಕ್ಷಗಳು ನೀಡುತ್ತಿರುವ ಕಾರಣ

1. ಸದನದಲ್ಲಿ ರಾಹುಲ್‌ ಗಾಂಧಿ ಅವರು ಮಾತನಾಡಲು ಅವಕಾಶ ಕೊಟ್ಟಿಲ್ಲ

2. ಅದನ್ನು ಪ್ರಶ್ನಿಸಿದ್ದಕ್ಕೆ 8 ಕಾಂಗ್ರೆಸ್‌ ಸಂಸದರನ್ನು ಅಮಾನತು ಮಾಡಿದ್ದಾರೆ

3. ಬಿಜೆಪಿ ಸಂಸದ ದುಬೆ ಸದನದಲ್ಲಿ ಆಕ್ಷೇಪಾರ್ಹ ಆರೋಪ ಮಾಡಲು ಬಿಟ್ಟಿದ್ದಾರೆ

4. ಮೋದಿ ಮೇಲೆ ವಿಪಕ್ಷಗಳಿಂದ ಹಲ್ಲೆ ಯತ್ನ ನಡೆದಿತ್ತು ಎಂದು ಸುಳ್ಳು ಹೇಳಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಜೆಟ್‌ ಅಧಿವೇಶನಕ್ಕೆ ಮೋದಿ ಗೈರಾಗಿದ್ದು ಏಕೆ ? : ರಿಜಿಜುರಿಂದ ವಿಡಿಯೋ ಬಿಡುಗಡೆ
ಬಾಂಗ್ಲಾ ಚುನಾವಣೇಲೂ ಗ್ಯಾರಂಟಿ ಭರಾಟೆ - ಕರ್ನಾಟಕದ ಗೃಹಲಕ್ಷ್ಮಿ ರೀತಿ ಸ್ಕೀಂ