ಡಿಕೆಶಿ ಭದ್ರಕೋಟೆಗೆ ನುಗ್ಗಿದ ಆಪರೇಷನ್ ಕಮಲ; ಬಿಡದಿ ರೆಸಾರ್ಟ್‌ನಿಂದ ಖರ್ಗೆ ಕಣ್ಗಾವಲಿನಲ್ಲಿಡಲು ಬೆಂಗಳೂರಿಗೆ ಶಿಫ್ಟ್!

Published : Mar 15, 2026, 03:10 PM IST
Odisha Congress MLA's Operation BJP

ಸಾರಾಂಶ

ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರಿನ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿದ 'ಆಪರೇಷನ್ ಕಮಲ' ಯತ್ನ ವಿಫಲವಾಗಿದೆ. ಡಿ.ಕೆ. ಶಿವಕುಮಾರ್ ಈ ಪ್ರಯತ್ನವನ್ನು ವಿಫಲಗೊಳಿಸಿದ್ದು, ₹5 ಕೋಟಿ ರೂ. ಚೆಕ್ ಹಿಡಿದು ಬಂದವರನ್ನ ಪೊಲೀಸರಿಗೆ ಒಪ್ಪಿಸಲಾಗಿದೆ.

ಬೆಂಗಳೂರು (ಮಾ.15): ಒಡಿಶಾ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎಂಬ ಭಯದಿಂದ 8 ಶಾಸಕರನ್ನು ಡಿ.ಕೆ. ಶಿವಕುಮಾರ್ ಬಳಿ ಕಳಿಸಲಾಗಿದೆ. ಆದರೆ, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭದ್ರಕೋಟೆಯೊಳಗೆ ನುಗ್ಗಿದ ಆಪರೇಷನ್ ಕಮಲ ತಂಡ, ನೋಟಿನ ಮೂಲಕ ವೋಟು ಖರೀದಿಸುವಲ್ಲಿ ವಿಫಲವಾಗಿದೆ. ಇದೀಗ ಬಿಡದಿ ರೆಸಾರ್ಟ್‌ನಿಂದ ಕೈ ಶಾಸಕರನ್ನು ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಕರೆದೊಯ್ದು ನಂತರ, ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್‌ಗೆ ಶಿಫ್ಟ್ ಮಾಡುವುದಕ್ಕೆ ಕೈ ಹೈಕಮಾಂಡ್ ಮುಂದಾಗಿದೆ.

ಹೌದು, ಒಡಿಶಾ ರಾಜ್ಯಸಭಾ ಚುನಾವಣೆಗೂ ಮುನ್ನ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೈಡ್ರಾಮಾ ನಡೆದಿದೆ. ಕುದುರೆ ವ್ಯಾಪಾರದ ಭೀತಿಯಿಂದ ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನಡೆದ ಬಿಜೆಪಿಯ 'ಆಪರೇಷನ್ ಕಮಲ' ಯತ್ನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಫಲಗೊಳಿಸಿದ್ದಾರೆ. ಬ್ಲ್ಯಾಂಕ್ ಚೆಕ್ ಸಮೇತ ಬಂದಿದ್ದ ವ್ಯಕ್ತಿಗಳನ್ನು ರೆಸಾರ್ಟ್‌ನಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

5 ಕೋಟಿ ರೂ. ಆಫರ್ ಮತ್ತು ಬ್ಲ್ಯಾಂಕ್ ಚೆಕ್ ಹೂರಣ:

ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ನಮ್ಮ ಒಡಿಶಾ ಶಾಸಕರು ಬಿಡದಿಯ ರೆಸಾರ್ಟ್‌ನಲ್ಲಿದ್ದರು. ಬಿಜೆಪಿಯವರು ಬ್ಯಾಟರಾಯನಪುರ ಸುರೇಶ್ ಎಂಬ ವ್ಯಕ್ತಿಯ ಮೂಲಕ ಅದೇ ರೆಸಾರ್ಟ್‌ನಲ್ಲಿ ರೂಂ ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ನಮ್ಮ ಶಾಸಕರನ್ನು ಭೇಟಿಯಾಗಿ ತಲಾ 5 ಕೋಟಿ ರೂಪಾಯಿ ಹಣದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಒಡಿಶಾದ ಎಸ್‌ಬಿಐ ಬ್ಯಾಂಕಿನ ಸಹಿ ಮಾಡಿದ ಬ್ಲ್ಯಾಂಕ್ ಚೆಕ್‌ಗಳನ್ನು ತೋರಿಸಿ ಬಿಜೆಪಿಗೆ ಮತ ಹಾಕುವಂತೆ ಆಮಿಷ ಒಡ್ಡಿದ್ದಾರೆ. ಒಟ್ಟು ನಾಲ್ವರು ಬಂದಿದ್ದರು, ಅದರಲ್ಲಿ ಇಬ್ಬರನ್ನು ನಮ್ಮವರು ಬ್ಲ್ಯಾಂಕ್ ಚೆಕ್ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ' ಎಂದು ವಿವರಿಸಿದರು.

ಗುಜರಾತ್ ಶಾಸಕರ ಘಟನೆ ನೆನಪಿಸಿಕೊಂಡ ಡಿಕೆಶಿ:

ಶಾಸಕರ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಹಿಂದೆ ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಿದ್ದಾಗ ತಾವು ಎದುರಿಸಿದ ಐಟಿ ರೈಡ್ ಮತ್ತು ನೋವುಗಳನ್ನು ನೆನಪಿಸಿಕೊಂಡರು. 'ಅಂದು ಕೂಡ ನಾನು ಶಾಸಕರನ್ನು ರಕ್ಷಿಸಿದ್ದೆ. ಅದಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸಿದೆ. ಈಗ ಒಡಿಶಾ ಶಾಸಕರಿಗೆ ಆಮಿಷ ನೀಡಲು ಬಂದವರಿಗೆ ಯಾವ ರೀತಿ 'ರಿಪೇರಿ' ಮಾಡಬೇಕೋ ಅದನ್ನು ಮಾಡಿದ್ದೇವೆ. ನಮ್ಮ ಶಾಸಕರು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ' ಎಂದು ಗುಡುಗಿದರು.

ಖರ್ಗೆ ಭೇಟಿ ಮತ್ತು ಹೋಟೆಲ್ ಶಿಫ್ಟ್:

ಒಡಿಶಾ ಕಾಂಗ್ರೆಸ್ ಶಾಸಕರು ಇಂದು ಸಂಜೆ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ನಾಳಿನ ರಾಜ್ಯಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು. ಭದ್ರತೆಯ ದೃಷ್ಟಿಯಿಂದ ಹಾಗೂ ನಾಳೆ ಬೆಳಿಗ್ಗೆ ಒಡಿಶಾಗೆ ತೆರಳಲು ಅನುಕೂಲವಾಗುವಂತೆ ಶಾಸಕರನ್ನು ಬಿಡದಿಯಿಂದ ದೇವನಹಳ್ಳಿ ಏರ್‌ಪೋರ್ಟ್ ಬಳಿ ಇರುವ 'ಡಬಲ್ ಟ್ರೀ ಬೈ ಹಿಲ್ಟನ್' ಹೋಟೆಲ್‌ಗೆ ಶಿಫ್ಟ್ ಮಾಡಲಾಗಿದೆ. ಹೋಟೆಲ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉಪ ಚುನಾವಣೆ ಮತ್ತು ದಾವಣಗೆರೆ ಗೊಂದಲ:

ಇದೇ ವೇಳೆ ರಾಜ್ಯದ ಉಪ ಚುನಾವಣೆ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಚುನಾವಣೆ ಘೋಷಣೆಯಾದರೆ ಒಳ್ಳೆಯದೇ, ನಾವು ಸಿದ್ಧರಾಗಿದ್ದೇವೆ. ನಾಯಕರ ಜೊತೆ ಈಗಾಗಲೇ ಚರ್ಚಿಸಿದ್ದೇವೆ.ದಾವಣಗೆರೆ ಕಾಂಗ್ರೆಸ್‌ನಲ್ಲಿನ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಅಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಎಲ್ಲರೂ ಮಾಡಲೇಬೇಕು. ಪಕ್ಷದ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಒಡಿಶಾ ರಾಜ್ಯಸಭಾ ಚುನಾವಣೆಯ ಕಾವು ಈಗ ಬೆಂಗಳೂರಿನಲ್ಲಿ ಜೋರಾಗಿದ್ದು, ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ ಮತ್ತೊಮ್ಮೆ ಶಾಸಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ವೋಟಿಗೆ ₹5 ಕೋಟಿ ಆಫರ್; 'ಆಪರೇಷನ್ ಕಮಲ' ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ!
ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ, ಟಿವಿಕೆಗೆ 80 ಕ್ಷೇತ್ರ, ಕೋಲಾಹಲ ಸೃಷ್ಟಿಸಿದ ಬಿಜೆಪಿ ಆಫರ್ ವರದಿ