ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಎಲ್ಲವನ್ನೂ ನೋಡಿ ಪಕ್ಷದ ವರಿಷ್ಠರು ಉಚ್ಚಾಟನೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ (ಮಾ.31): ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಎಲ್ಲವನ್ನೂ ನೋಡಿ ಪಕ್ಷದ ವರಿಷ್ಠರು ಉಚ್ಚಾಟನೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆರು ವರ್ಷಗಳ ಕಾಲ ಯತ್ನಾಳ್ ಅವರನ್ನು ಉಚ್ಚಾಟಿಸಿರುವ ಕುರಿತು ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್ ಅವರು, ಪಕ್ಷದಲ್ಲಿ ನಾವೆಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕಾಗುತ್ತದೆ ಎಂದಷ್ಟೇ ಹೇಳಿದರು. ಶಾಸಕ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರಗೆ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಈ ಇಬ್ಬರೂ ಶಾಸಕರಿಗೆ ನೋಟಿಸ್ ನೀಡಲಾಗಿದೆ. ಸಮಯ ಬಂದಾಗ ಖಂಡಿತ ಇವರ ವಿರುದ್ಧವೂ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದರು.
ದೊಡ್ಡವರ ಕೈವಾಡ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಅವರ ಪುತ್ರ ಶಾಸಕ ರಾಜೇಂದ್ರ ಅವರ ಹನಿಟ್ರ್ಯಾಪ್ ಯತ್ನ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಪ್ರಕರಣದಲ್ಲಿ ದೊಡ್ಡವರ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಿಂದೆ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿರುವ ಉದಾಹರಣೆಗಳಿವೆಯೇ? ಹಾಗೆಯೇ ಈ ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾವುದೇ ತನಿಖೆಯೂ ಆಗಲ್ಲ, ಶಿಕ್ಷೆಯೂ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಪತನ: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಒಳಗೊಳಗೆ ನಿತ್ಯ ಗುದ್ದಾಟ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಹೇಳಿಕೆ ನೀಡದೇ ತಮ್ಮ ಬೆಂಬಲಿಗರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಸರ್ಕಾರ ಬಿದ್ದುಹೋಗಲಿದೆ ಎಂದು ಭವಿಷ್ಯ ನುಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ಉಚಿತ ಯೋಜನೆ ನೀಡಿ, ಮತ್ತೊಂದು ಕಡೆ ಬೆಲೆ ಏರಿಕೆ ಬರೆ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರ ಆಡಳಿತದ ಮೇಲಿನ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ ಎಂದು ಆಪಾದಿಸಿದರು.
ಅಕ್ರಮ ಗಣಿ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ, ಹೈಕೋರ್ಟ್ ಹೇಳಿದ್ದೇನು?
ಗ್ಯಾರಂಟಿ ಮೂಲಕ ಜನರಿಗೆ ಉಚಿತ ಯೋಜನೆ ನೀಡುತ್ತಿರುವ ರಾಜ್ಯ ಸರ್ಕಾರ ರೈತರಿಗೂ ತಮ್ಮ ಖಜಾನೆಯಿಂದಲೇ ಲೀಟರ್ ಹಾಲಿಗೆ ₹4 ಪ್ರೋತ್ಸಾಹಧನ ನೀಡಲಿ. ಅದನ್ನು ಬಿಟ್ಟು ಜನಸಾಮಾನ್ಯರ ಮೇಲೆ ಏಕೆ ಬೆಲೆ ಏರಿಕೆ ಬರೆ ಹಾಕಬೇಕಿತ್ತು?
-ಜಗದೀಶ ಶೆಟ್ಟರ್, ಸಂಸದ.