ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದುತ್ವದ ಆಧಾರದ ಮೇಲೆ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ. ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿಜಯಪುರ (ಮಾ.30): ಯುಗಾದಿ ಹಬ್ಬಕ್ಕೆ ಬಿಜೆಪಿಯಿಂದ ಉಚ್ಛಾಟನೆ ಮಾಡುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಹಿಯನ್ನು ನೀಡಿದರೂ, ಹಬ್ಬದಲ್ಲಿಯೇ ಕಾರ್ಯಕರ್ತರಿಗೆ ಸಿಹಿ ಸುದ್ದಿಯನ್ನು ನೀಡಲು ಮುಂದಾಗಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಹಿಂದುತ್ವದ ಹಿನ್ನೆಲೆಯುಳ್ಳ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರ್ಯಕರ್ತರೊಂದಿಗೆ ರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿದ್ದಾಗ ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲಿಯೇ ಯುಗಾದಿ ಹಬ್ಬಕ್ಕೆ ಮನೆಗೆ ಬಂದು ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಪೂಜೆಯನ್ನು ನೆರವೇರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಕಾರ್ಯಕರ್ತರು ಹಿಂದುತ್ವದ ಆಧಾರದ ಮೇಲೆ ಹೊಸಪಕ್ಷ ಕಟ್ಟಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಾಭಿಪ್ರಾಯ ಸಂಗ್ರಹವನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ. ಜನಾಭಿಪ್ರಾಯ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಿಂದುತ್ವದ ಆಧಾರದ ಮೇಲೆ ಜನರು ಹೊಸ ಪಕ್ಷ ಕಟ್ಟಬೇಕೆಂದು ತೀರ್ಪು ತೀರ್ಪು ನೀಡಿದರೆ ಹೊಸಪಕ್ಷ ಕಟ್ಟುತ್ತೇನೆ ಎಂದು ಹೇಳಿದರು.
ಅಶಿಸ್ತಿನ ಕಾರಣ ನೀಡಿ ಹುಚ್ಛಾಟನೆ ಮಾಡಿದ ಬಗ್ಗೆ ಮಾತನಾಡಿ, ನಾನು ಬಿಜೆಪಿ ಪಕ್ಷದ ವಿರುದ್ಧ ಯಾವುದೇ ಅಶಿಸ್ತು ತೋರಿಲ್ಲ. ಅದಕ್ಕೆ ಸಾಕ್ಷಿ ಇದ್ದರೆ ನೀಡಲಿ. ಯಡಿಯೂರಪ್ಪ, ವಿಜಯೇಂದ್ರ ಕುಟುಂಬ ರಾಜಕಾರಣ ಅವರ ಭ್ರಷ್ಟಾಚಾರ ಕುರಿತು ಮಾತನಾಡಿದ್ದೇನೆ. ಅವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಲೋಕಸಭಾ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಯಡಿಯೂರಪ್ಪ ವಿಜೇಂದ್ರ ಒಳ ಒಪ್ಪಂದ ಕಾರಣ. ದಾವಣಗೆರೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಯಡಿಯೂರಪ್ಪ ವಿಜಯೇಂದ್ರ ಒಳ ಒಪ್ಪಂದ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳನ್ನ ಸೋಲಿಸಲು ಯತ್ನ ನಡೆದಿತ್ತು. ಗೋವಿಂದ ಕಾರಜೋಳ ವಿರುದ್ಧವಾಗಿ ಪ್ರಚಾರ ಮಾಡಿದವರನ್ನೇ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ರಾಜಿಗೆ ಒಪ್ಪದೆ ಬಿಜೆಪಿಗೆ ಮಾಜಿಯಾದ ಯತ್ನಾಳ್: ತೂತು ಒಲೆ ಕೆಡಿಸಿತು, ಮಾತು ಶಾಸಕನ ರಾಜಕೀಯ ಕೆಡಿಸಿತು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸಿಗೂ , ಸಚಿವ ರಾಜಣ್ಣ ಹನಿ ಟ್ರ್ಯಾಪ್ ಯತ್ನಕ್ಕೂ ಡಿಕೆಶಿ ಕೈವಾಡವಿದೆ ಎಂದು ಮುನಿರತ್ನ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಆಗಬೇಕು. ಇದೆಲ್ಲದರ ಕುರಿತು ಸಿಬಿಐ ತನಿಖೆ ಆಗಬೇಕು. ಇನ್ನು ಉಚ್ಛಾಟನೆಯ ವಿಚಾರದಲ್ಲಿ ಯತ್ನಾಳ ರನ್ ಔಟ್, ಬೋಲ್ಡ್ ಆದರಾ, ಮ್ಯಾಚ್ ಫಿಕ್ಸಿಂಗ್ ಆಯ್ತಾ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ, ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ಆದರೆ ಇನ್ನು ಮುಂದೆ ಕೇವಲ ಸಿಕ್ಸರ್ ಹೊಡೆಯುವೆ. ಫೋರ್ ಡಬಲ್, ಸಿಂಗಲ್ ರನ್ ಇಲ್ಲ, ಕೇವಲ ಸಿಕ್ಸರ್ ಬಾರಿಸುವೆ. ಚಂಡು ಹೊಡೆದರೆ ಬಾಂಡರಿ ಗೆರೆ ದಾಟಿ ಹೋಗಬೇಕು ಎಂದರು.
ನನ್ನ ಹೋರಾಟ ಬಿಜೆಪಿಯ ವಿರುದ್ಧ ಅಲ್ಲ, ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ವಿರುದ್ಧ. ಜನಾಪ್ರಾಯ ಸಂಗ್ರಹ ಮಾಡಿ ಮುಂದೆ ಹೊಸ ಪಕ್ಷ ಕಟ್ಟುವ ತೀರ್ಮಾನ ತೆಗೆದುಕೊಳ್ಳುವೆ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯಿಂದ ಶಾಕ್, ನಮೋ ಆ್ಯಪ್‌ನಲ್ಲಿ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿದ ಬೆಂಬಲಿಗರು