ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ: ಸಚಿವರು

Published : Oct 06, 2023, 10:31 AM IST
ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ: ಸಚಿವರು

ಸಾರಾಂಶ

‘ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಮನೂರು ಶಿವಶಂಕರಪ್ಪ ಅವರೇ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. 

ಬೆಂಗಳೂರು (ಅ.06): ‘ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಮನೂರು ಶಿವಶಂಕರಪ್ಪ ಅವರೇ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. ಹೀಗಾಗಿ ಇದೊಂದು ಮುಗಿದ ಅಧ್ಯಾಯವಾಗಿದ್ದು, ಬಹಿರಂಗ ಹೇಳಿಕೆ ನೀಡುವ ಅಗತ್ಯವಿಲ್ಲ’ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಸೇರಿದಂತೆ ಲಿಂಗಾಯತ ಸಮುದಾಯದ ಕಾಂಗ್ರೆಸ್‌ ಸಚಿವರು ಹಾಗೂ ಮಾಜಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಮನೂರು ಅವರ ಪುತ್ರ ಹಾಗೂ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ‘ಶಾಮನೂರು ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆಗಿದ್ದರೂ ಸರಿಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಹಾಗೂ ಶಾಮನೂರು ಅವರು ಇಬ್ಬರೂ ಹಿರಿಯ ನಾಯಕರು. ಅವರಿಬ್ಬರೂ ಸೇರಿ ಮಾತನಾಡುತ್ತಾರೆ. ಹೀಗಾಗಿ ಇದು ಮುಗಿದು ಹೋದ ಅಧ್ಯಾಯ’ ಎಂದು ಹೇಳಿದ್ದಾರೆ. ಅಲ್ಲದೆ, 60 ಮಂದಿ ಲಿಂಗಾಯತ ಶಾಸಕರು ಸೇರಿ ಸರ್ಕಾರ ರಚಿಸುತ್ತೇವೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ, ‘ಈಗ ಎಲ್ಲರೂ ಸೇರಿಯೇ ಈ ಸರ್ಕಾರ ಮಾಡಿರುವುದು. ಇದರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ’ ಎಂದು ಹೇಳಿದರು.

300 ಕೋಟಿ ಕೆಎಸ್‌ಒಯು ಹಗರಣ: ಎಫ್ಐಆರ್ ದಾಖಲಿಸಿದ ಸಿಬಿಐ

ಶಾಮನೂರು ಜತೆ ಸಿಎಂ ಚರ್ಚೆ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮಾಜದ ಉತ್ಕೃಷ್ಟ ನಾಯಕರು. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾರೆ. ನಾನು ಕೂಡ ಶಾಮನೂರು ಶಿವಶಂಕರಪ್ಪ ಅವರ ಜತೆ ಮಾತನಾಡುತ್ತೇನೆ. ಅನ್ಯಾಯ ಆಗಿದ್ದರೆ ಸರಿಪಡಿಸುವ ಕೆಲಸ ಆಗುತ್ತದೆ. ನಾನು ಸಚಿವನೂ ಹೌದು, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯೂ ಹೌದು. ಹೀಗಾಗಿ ಎರಡೂ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಬಹಿರಂಗವಾಗಿ ಹೇಳಬೇಕಿರಲಿಲ್ಲ: ಮಾಜಿ ಸಚಿವ ವಿನಯ್‌ ಕುಲಕರ್ಣಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಹೇಳಿರುವುದು ಸತ್ಯವೇ ಇರಬಹುದು. ಆದರೆ ಅದನ್ನು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಹೇಳುವ ಅಗತ್ಯವಿರಲಿಲ್ಲ. ಸಮಸ್ಯೆಯಿದ್ದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಬಗೆಹರಿಸುವ ತಾಕತ್ತು ನಮಗಿತ್ತು. ಮುಖ್ಯಮಂತ್ರಿಗಳು ಅದನ್ನು ಬಗೆಹರಿಸುತ್ತಿದ್ದರು. ಮುಖ್ಯಮಂತ್ರಿಗಳು ಹೊರಗಿನವರಲ್ಲ ಎಂಬುದನ್ನು ತಿಳಿಯಬೇಕು ಎಂದರು.

Asian Games 2023: ನಾನು ನಂದಿನಿ ಕಂಚು ತಂದಿನಿ ಎಂದ ಬಳ್ಳಾರಿ ಯುವತಿ!

ಲಿಂಗಾಯತರು ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎನ್ನುವವರು ಮೂರ್ಖರು: ಲಿಂಗಾಯತರು ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎನ್ನುವವರು ಮೂರ್ಖರು. ವೀರೇಂದ್ರ ಪಾಟೀಲ್‌ ಬಳಿಕ ಈ ಬಾರಿಯೇ ಅತಿ ಹೆಚ್ಚು ಮಂದಿ ಲಿಂಗಾಯತರು ಕಾಂಗ್ರೆಸ್‌ ಪರ ನಿಂತಿದ್ದಾರೆ. ಇನ್ನು ಶಾಮನೂರು ಶಿವಶಂಕರಪ್ಪ ಅವರು ಹಿರಿಯರು ಹಾಗೂ ನಮ್ಮ ಯಜಮಾನರು. ಅವರಿಗೆ ಯಾರೂ ಕೌಂಟರ್‌ ಕೊಡುವುದು ಬೇಡ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ