
ಮಂಗಳೂರು (ಅ.06): ಬಿಜೆಪಿಯವರು ವೇಷ ಮರೆಸಿ ಕಿಡಿಗೇಡಿತನ ಮಾಡ್ತಾರೆ ಎನ್ನುವ ಹೇಳಿಕೆಗೆ ಸಂಬಂಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಆ ಹೇಳಿಕೆ ಶಿವಮೊಗ್ಗ ಘಟನೆಗೆ ಸಂಬಂಧಿಸಿದ್ದಲ್ಲ, ಶಿವಮೊಗ್ಗ ಘಟನೆಗೂ ಆ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಳೆಯ ಘಟನೆಗಳ ಕುರಿತಾಗಿ ಈ ಹೇಳಿಕೆ ನೀಡಿದ್ದೇನೆಯೇ ಹೊರತು ಶಿವಮೊಗ್ಗ ಘಟನೆ ಕುರಿತಾಗಿ ಅಲ್ಲ. ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡುತ್ತಾರೆ ಎಂಬುದನ್ನು ಇಟ್ಟುಕೊಂಡು ಆ ರೀತಿ ಹೇಳಿದ್ದೆ ಅಷ್ಟೆ ಎಂದರು.
ಶಿವಮೊಗ್ಗ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಆಗಬೇಕಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಹಿಂದೆ ಪುಲಿಕೇಶಿ ನಗರ ಗಲಾಟೆ ವೇಳೆಯೂ ನಾನು ಅಂಥದ್ದೇ ಹೇಳಿಕೆ ನೀಡಿದ್ದೆ. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ ಎಂದು ಪ್ರಶ್ನಿಸಿದರು. ಆಸ್ತಿ ಪಾಸ್ತಿ ನಷ್ಟ ಆಗದ, ಪೊಲೀಸರ ಮೇಲೆ ಹಲ್ಲೆ ಆಗದಂಥ ಕೇಸ್ ಗಳಲ್ಲಿ ರೈತರು, ಕನ್ನಡಪರ ಹೋರಾಟಗಾರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಗೆ ಮಾತ್ರ ಶಿಫಾರಸು ಮಾಡುತ್ತೇವೆಯೇ ಹೊರತು ಕೋಮು ಗಲಭೆ ಕೇಸ್ ಗಳಲ್ಲಿ ಶಿಫಾರಸು ಮಾಡಲ್ಲ ಎಂದು ಹಳೇ ಹುಬ್ಬಳ್ಳಿ ಕೇಸ್‌ಗೆ ಸಂಬಂಧಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಬರೆದ ಪತ್ರಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅ.10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್: ವಾಟಾಳ್ ನಾಗರಾಜ್
ಹೋರಾಟ ಮಾಡೋದು ಅವರ ಹಕ್ಕು: ಖಾಸಗಿ ಬಸ್, ವಾಹನ ಮತ್ತು ಆಟೋ ಚಾಲಕರು ಬೆಂಗಳೂರಿನಲ್ಲಿ ಮುಷ್ಕರಕ್ಕೆ ಕರೆಕೊಟ್ಟಿದ್ದಾರೆ. ಅವರು 20ರಿಂದ 22 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಈ ಪೈಕಿ ಎರಡು ಪ್ರಮುಖವಾಗಿವೆ. ಹೋರಾಟ ಮಾಡುವುದು ಅವರ ಹಕ್ಕಾಗಿದ್ದು, ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ವಿಚಾರದಲ್ಲಿ ಅವರ ಬೇಡಿಕೆ ಇದೆ. ಎರಡನೇಯದು ಸ್ವಲ್ಪ ಟ್ಯಾಕ್ಸ್ ಹೆಚ್ಚಳವಾಗಿರುವ ಕುರಿತೂ ಬೇಡಿಕೆ ಇದೆ. ಆಟೋ ಚಾಲಕರು ಕೆಲವು ವಿಚಾರಗಳು ಹೇಳಿದ್ದಾರೆ, ಇನ್ನೂ ಟ್ಯಾಕ್ಸ್ ವಿಚಾರದಲ್ಲಿ ಕೆಲವು ಬೇಡಿಕೆಗಳಿವೆ. ಈ ಎರಡು ಬೇಡಿಕೆಗಳು ಅಷ್ಟೆ ನಮ್ಮ ಸರ್ಕಾರದ್ದು, ಉಳಿದ ಬೇಡಿಕೆಗಳು ಹಿಂದಿನ ಸರ್ಕಾರದ ಬೇಡಿಕೆಗಳಾಗಿವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.