ಮುಂಬರುವ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಸ್ಪರ್ಧಿಸುವ ಬಗ್ಗೆ ಯಾರೂ ದೃಢ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯ (ನ.04): ಮುಂಬರುವ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಸ್ಪರ್ಧಿಸುವ ಬಗ್ಗೆ ಯಾರೂ ದೃಢ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಆರಂಭಿಸಿರುವ ವಿಚಾರ ನನಗೆ ಗೊತ್ತಿಲ್ಲ. ಇದುವರೆಗೂ ಆ ಒಂದು ನಿರ್ಧಾರ ತೆಗೆದುಕೊಂಡು ಯಾರೂ ನನ್ನ ಮುಂದೆ ಬಂದಿಲ್ಲ. ಅವರು ನಿರ್ಧಾರ ತೆಗೆದುಕೊಂಡು ಬಂದ ಮೇಲೆ ನನ್ನ ನಿರ್ಧಾರ ತಿಳಿಸುತ್ತೇನೆ. ಸದ್ಯಕ್ಕೆ ಯಾರೂ ಆ ಧೃಢ ನಿರ್ಧಾರ ಮಾಡಿಲ್ಲ ಎಂದರು.
ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುತ್ತಾರೆಂಬ ಬಗ್ಗೆ ಏನೇನೋ ಮಾತುಗಳು ಬರುತ್ತಿವೆ ಎಂದು ನಕ್ಕು ಸುಮ್ಮನಾದ ಸಂಸದೆ, ಡಿಸೆಂಬರ್ ವೇಳೆಗೆ ಬಹಳಷ್ಟುನಾಯಕರು ಬಿಜೆಪಿ ಸೇರ್ತಾರೆ ಎಂಬ ಆರ್.ಅಶೋಕ್ ಹೇಳಿಕೆ ಬಗ್ಗೆ ನಾನು ಏನು ಕಮೆಂಟ್ ಮಾಡುವುದಿಲ್ಲ ಎಂದರು. ನಾನು ಯಾವುದೇ ಪಕ್ಷ ಸೇರಿದರೂ ಅದನ್ನು ಜನರು ಹೇಳುತ್ತಾರೆ. ನಾನು ಹೇಳುವುದಿಲ್ಲ. ಸಂದರ್ಭ ಬಂದಾಗ ಜನರ ನಿರ್ಧಾರ ಏನೂಂತ ನಾನು ಹೇಳುತ್ತೇನೆ ಎಂದರು. ಇನ್ನೇನು ಎಲೆಕ್ಷನ್ ಬಂತಲ್ಲ, ಅವರಿಗೆ (ಜೆಡಿಎಸ್ ಶಾಸಕರು) ನನ್ನಿಂದ ಪಬ್ಲಿಸಿಟಿ ಬೇಕು ಅನ್ನಿಸುತ್ತೆ. ಅದಕ್ಕಾಗಿ ಅವರು ನನ್ನನ್ನು ಟೀಕಿಸುತ್ತಿದ್ದಾರೆ. ಸುಮ್ಮನೆ ನಾನ್ಯಾಕೆ ಅವರಿಗೆ ಫ್ರೀ ಪಬ್ಲಿಸಿಟಿ ಕೊಡ್ಲಿ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಭ್ರಷ್ಟಚಾರದ ರಾಜಕಾರಣ ನನಗೆ ಇಷ್ಟವಿಲ್ಲ: ಸಂಸದೆ ಸುಮಲತಾ
ಚೌಡಯ್ಯ ಪ್ರತಿಮೆಗೆ ಮಾಲಾರ್ಪಣೆ: ತಾಲೂಕಿನ ಹೊಳಲು ಗ್ರಾಮಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ ಬಲಮುರಿ ದೇವಸ್ಥಾನದ ಉದ್ಯಾನದಲ್ಲಿರುವ ಡಾ.ಎಚ್.ಡಿ. ಚೌಡಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಒಬ್ಬ ಧೀಮಂತ ಅನುಭವಿ, ಮುತ್ಸದ್ದಿ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಜೊತೆಯಲ್ಲಿ ಮೈಷುಗರ್ ಹೋರಾಟದಲ್ಲಿ ಭಾಗವಹಿಸಿದ್ದ ವೇಳೆ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದ್ದನ್ನು ನೆನಪಿಸಿಕೊಂಡರು.
ಬಳಿಕ ಗ್ರಾಮದ ಚಿತ್ತನಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಸಮುದಾಯದ ಕಟ್ಟಡ ಕಾಮಗಾರಿ ವೀಕ್ಷಿಸಿ, ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದರು. ಸಮುದಾಯ ಕಟ್ಟಡಕ್ಕೆ ಅಗತ್ಯವಾದ 20 ಲಕ್ಷ ರು. ಅನುದಾನ ಕೊಡಿಸಿಕೊಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಸಂಸದರ ನಿಧಿಯಿಂದ ಕಟ್ಟಡಕ್ಕೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್ ಕುಮಾರಸ್ವಾಮಿ
ಈ ವೇಳೆ ದೇವಸ್ಥಾನದ ಅಧ್ಯಕ್ಷ ಎಚ್.ಬಿ.ರಾಮು, ಗೌರವಾಧ್ಯಕ್ಷ ಎಚ್.ಎಲ್.ಶಿವಣ್ಣ, ಎಚ್.ಡಿ.ಹರಿಪ್ರಸಾದ್, ಲಿಂಗಪ್ಪ, ಎಸ್.ಸಿ. ಲಿಂಗರಾಜು, ಪದಾಧಿಕಾರಿಗಳಾದ ಶಿವಲಿಂಗಯ್ಯ, ಸಿದ್ದರಾಮು, ನಾಗರಾಜು, ಸದಾನಂದ, ಕುಮಾರ್, ಪ.ರಾಮು, ನಿಂಗೇಗೌಡ, ಜಟ್ಟಿಕುಮಾರ್, ಚಂದನ್, ಮಹೇಶ್, ಮಂಜು ಇತರರು ಉಪಸ್ಥಿತರಿದ್ದರು. ಇದೇ ವೇಳೆ ಸಂಸದೆ ಸುಮಲತಾ ಅವರನ್ನು ದೇವಸ್ಥಾನದಿಂದ ಅಭಿನಂದಿಸಿ ಗೌರವಿಸಲಾಯಿತು.