
ಕೆ.ಆರ್.ನಗರ (ಜ.17): 2028 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದ್ದು, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಎಚ್.ಡಿ. ದೇವೇಗೌಡ ಸಮುದಾಯ ಭವನದ ಆವರಣದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮಗೂ ಎಲ್ಲ ವರಸೆಯ ರಾಜಕಾರಣ ಮಾಡಲು ಬರುತ್ತದೆ, ಹಾಗಾಗಿ ಪ್ರತಿಯೊಂದನ್ನು ಗಮನಿಸುತ್ತಿದ್ದು, ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದರು.
ಕ್ಷೇತ್ರದ ಅಭಿವೃದ್ದಿಯ ಹಿತದೃಷ್ಟಿಯಿಂದ ನಾನು ನಮ್ಮ ನಾಯಕರಾದ ಕುಮಾರಸ್ವಾಮಿಯವರ ಮೂಲಕ ಕೆಲಸ ಮಾಡಲು ನಿರ್ಧರಿಸಿದ್ದು, ಇದರ ಮೊದಲ ಭಾಗವಾಗಿ ಪಟ್ಟಣದ ಹೊರ ವಲಯದ ಹಳೆ ರೇಲ್ವೆ ನಿಲ್ದಾಣದ ಬಳಿ ಖಾಲಿ ಇರುವ 22 ಎಕರೆ ಜಾಗದಲ್ಲಿ ರೈಲ್ವೆ ರಕ್ಷಣಾ ದಳದ (ಆರ್.ಪಿಎಫ್) ತರಬೇತಿ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದು ಶೀಘ್ರದಲ್ಲೇ ಮಂಜೂರಾಗಲಿದ್ದು 500 ಕೋಟಿ ವೆಚ್ಚದ ಈ ಯೋಜನೆಯಿಂದ ಎರಡು ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದು ನುಡಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ: ಸಾ.ರಾ.ಮಹೇಶ್
ಇದರ ಜತೆಗೆ ಅರ್ಕೇಶ್ವರ ದೇವಾಲಯದಿಂದ ಹೆಬ್ಬಾಳು, ಚುಂಚನಕಟ್ಟೆ, ಹೊಸೂರು, ಹನಸೋಗೆ, ಕರ್ತಾಳು ಮೂಲಕ ಕೇರಳಾಪುರ ಮತ್ತು ಮಂಚನಹಳ್ಳಿಯಿಂದ ಮಿರ್ಲೆ, ಅಂಕನಹಳ್ಳಿ, ಸಾಲಿಗ್ರಾಮ ಸಂಪರ್ಕ ರಸ್ತೆಗಳನ್ನು ಚರ್ತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸಿ ಅನುದಾನ ನೀಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೋರಲಾಗಿದ್ದು, ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.
ದಾರಾಳವಾಗಿ ಹೊರ ಹೋಗಬಹುದು: ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ಇಲ್ಲದೆ ಎರಡು ಕಡೆ ಆಟವಾಡುವ ಸ್ವಾರ್ಥಿಗಳಿಗೆ ಜೆಡಿಎಸ್ ನಲ್ಲಿ ಜಾಗವಿಲ್ಲ, ಪಕ್ಷದಿಂದ ಎಲ್ಲವನ್ನು ಅನುಭವಿಸಿ ಆನಂತರ ಕತ್ತು ಕೊಯ್ಯುವ ಚಾಳಿ ಬೆಳೆಸಿಕೊಂಡವರು ಧಾರಾಳವಾಗಿ ಹೊರ ಹೋಗಬಹುದು ಎಂದರು. ಶಿಕ್ಷಕನ ಮಗನಾದ ನಾನು 36ನೇ ವಯಸ್ಸಿಗೆ ರಾಜಕಾರಣ ಬಂದು ಮೂರು ಬಾರಿ ಶಾಸಕನಾಗಿ ಒಮ್ಮೆ ಸಚಿವನೂ ಆಗಿದ್ದೇನೆ ಆಗಾಗಿ ನನಗೆ ರಾಜಕೀಯದಲ್ಲಿ ಆಗಬೇಕಾದದ್ದು ಏನು ಇಲ್ಲ ಈಗ ನನ್ನ ಆಧ್ಯತೆ ಪಕ್ಷ ನಿಷ್ಠರು ಮತ್ತು ನನ್ನನ್ನು ನಂಬಿರುವವರನ್ನು ಕಾಪಾಡುವ ಉದ್ದೇಶಕ್ಕೆ ಎಂದು ತಿಳಿಸಿದರು.
ಪಕ್ಷದ ಇಬ್ಬರು ಮಹಾನೀಯರು ಕಳೆದ ಚುನಾವಣೆಯಲ್ಲಿ ಪಿಎಲ್. ಡಿ ಬ್ಯಾಂಕ್ ಮತ್ತು ಎಪಿಎಂಸಿ ಆಡಳಿತ ಜೆಡಿಎಸ್ ತೆಕ್ಕೆಗೆ ಬರುವುದನ್ನು ತಪ್ಪಿಸಿದರು ಹಾಗಾಗಿ ಅಂತಹ ಅವಕಾಶವಾದಿಗಳು ಮುಂದೆ ಯಾವುದೇ ಚುನಾವಣೆಗಳಲ್ಲಿಯೂ ಗೆಲ್ಲದಂತೆ ನಮ್ಮ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಸ್. ಹರಿಚಿದಂಬರ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿಸೋಮು ವಿರುದ್ದ ಹರಿಹಾಯ್ದರು.
ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ: ಮಾಜಿ ಸಚಿವ ಸಾ.ರಾ.ಮಹೇಶ್
ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಎಂ.ಟಿ. ಕುಮಾರ್, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಪುರಸಭೆ ಮಾಜಿ ಅಧ್ಯಕ್ಷ ಕಾಂತರಾಜು, ಸದಸ್ಯರಾದ ಉಮೇಶ್, ಸಂತೋಷ್ ಗೌಡ, ಮಾಜಿ ಸದಸ್ಯರಾದ ಸುಬ್ರಮಣ್ಯ, ಕೆ.ಆರ್.ಗಿರೀಶ್, ಎಚ್.ಸಿ. ರಾಜು, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷೆ ದ್ರಾಕ್ಷಾಯಿಣಿ, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳುಮಧು, ಬಿಜೆಪಿ ತಾಲೂಕು ಅಧ್ಯಕ್ಷ ಧರ್ಮ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯರಾದ ಶ್ರೀನಿವಾಸ್ ಪ್ರಸಾದ್, ನಾಗಣ್ಣ, ತಂದ್ರೆರವಿ, ರತ್ನಮ್ಮ ಮಂಜುನಾಥ್, ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಮುಖಂಡರಾದ ಎಚ್.ಕೆ. ಮಧುಚಂದ್ರ, ನಾಗರಾಜು, ಕೆ.ಜೆ.ಕುಚೇಲ, ಎಚ್.ಎಸ್. ಜಗದೀಶ್, ಎಂ.ಎಸ್. ಕಿಶೋರ್, ಕುಚೇಲ, ಬಾಲಾಜಿ ಗಣೇಶ್, ವಕೀಲ ತಿಮ್ಮಪ್ಪ, ಹೊಸೂರು.ಎ.ಕುಚೇಲ, ಬಿ.ರಮೇಶ್, ಪಿಎಲ್.ಡಿ ಬ್ಯಾಂಕ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಗ್ರಾಯತ್ರಮ್ಮ, ಎಲ್.ಎಸ್. ಮಹೇಶ್, ದೀಪಕ್, ಕೃಷ್ಣೇಗೌಡ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.