Land Conversion: ಕೈಗಾರಿಕೆ ಸ್ಥಾಪಿಸಲು 2 ಎಕ್ರೆವರೆಗೆ ಬಳಸಲು ಭೂಪರಿವರ್ತನೆ ಅನಗತ್ಯ: ಸಚಿವ ಕೃಷ್ಣ ಬೈರೇಗೌಡ

Published : Aug 14, 2025, 08:04 PM IST
Krishna Byre Gowda

ಸಾರಾಂಶ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ಹಾಗೂ ಸಲಹೆಗಳ ಬಳಿಕ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ವಿಧಾನಸಭೆ (ಆ.14): ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆವರೆಗೆ ಕೃಷಿ ಭೂಮಿ ಬಳಕೆ ಮಾಡಿದಲ್ಲಿ ಆ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವ ಅಗತ್ಯವಿಲ್ಲ. ಅದನ್ನು ಸ್ವಯಂ ಚಾಲಿತವಾಗಿ ಭೂ ಪರಿವರ್ತನೆ ಮಾಡಿಕೊಡುವುದು ಸೇರಿ ಸಣ್ಣ ಕೈಗಾರಿಕೆಗಳ ಉತ್ತೇಜಿಸಲು ತರಲಾಗಿರುವ ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲ ಇತರ ಕಾನೂನು (ತಿದ್ದುಪಡಿ) ವಿಧೇಯಕ-2025ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ಹಾಗೂ ಸಲಹೆಗಳ ಬಳಿಕ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ವಿಧೇಯಕದ ಉದ್ದೇಶ ವಿವರಿಸಿದ ಸಚಿವರು, ಖಾಸಗಿ ವ್ಯಕ್ತಿಗಳ ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆಗಳು ಅಥವಾ ಸಣ್ಣ ಉದ್ದಿಮೆ/ಕೈಗಾರಿಕೆಗಳಿಗೆ ಖರೀದಿಸಲು ಸೆಕ್ಷನ್‌ 109ರ ಅಡಿ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಆದರೆ, ಈ ಮೊದಲು ಅರ್ಧ ಹೆಕ್ಟೇರ್‌ ಭೂಮಿ ಮಾತ್ರ ಖರೀದಿಸಲು ಅವಕಾಶವಿತ್ತು. ಅದನ್ನು ಈಗ ನಾಲ್ಕು ಹೆಕ್ಟೇರ್‌ಗೆ ಹೆಚ್ಚಿಸಲಾಗಿದೆ. ಅಲ್ಲದೆ, ಆ ಭೂಮಿ ಖರೀದಿ ಅನುಮತಿಗಾಗಿ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿವರೆಗೆ ಬರಬೇಕಿತ್ತು.

ಈಗಿನ ನೂತನ ತಿದ್ದುಪಡಿಯಲ್ಲಿ ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ. ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಆ ಭೂಮಿ ಕೃಷಿಯೇತರ ಉದ್ದೇಶಕ್ಕೆ ಭೂ-ಪರಿವರ್ತನೆಯಾಗಿರುತ್ತದೆ ಎಂದರು. ಈ ಹಿಂದೆ ಸಣ್ಣ ಉದ್ದಿಮೆದಾರರು/ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಯಾವ ಉದ್ದೇಶಕ್ಕೆ ಪಡೆದಿರುತ್ತಾರೋ ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಲು ಅನುಮತಿ ಕೇಳಿದರೆ ಕೊಡಲು ಅವಕಾಶ ಇರಲಿಲ್ಲ. ಪ್ರಸ್ತುತ ಅದಕ್ಕೂ ಅವಕಾಶ ನೀಡಲಾಗಿದೆ. ಮುಖ್ಯಕಾರ್ಯದರ್ಶಿ ಅವರ ಉನ್ನತಾಧಿಕಾರ ಸಮಿತಿ ಅನುಮತಿ ನೀಡಿದರೆ ಯಾವುದೇ ಉದ್ದೇಶಕ್ಕಾಗಿ ಆ ಭೂಮಿ ಬಳಕೆ ಅಥವಾ ಮಾರಾಟ ಮಾಡಲು ಅವಕಾಶ ತರಲಾಗಿದೆ.

ಕರ್ನಾಟಕದಲ್ಲಿ ಎಲ್ಲೇ ಆಗಲಿ 2 ಎಕರೆ ವರೆಗೆ ಕೈಗಾರಿಗೆ ಮಾಡಲು ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದ ಉತ್ತೇಜನಕ್ಕಾಗಿ ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಇಂತಹ ಘಟಕಗಳ ಸ್ಥಾಪನೆಗೂ ಭೂ ಪರಿವರ್ತನೆ ಅಗತ್ಯವಿಲ್ಲ ಎಂಬ ಅವಕಾಶವನ್ನು ಈ ತಿದ್ದುಪಡಿಯಲ್ಲಿ ತರಲಾಗಿದೆ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ