ರಸಗೊಬ್ಬರ ಸಮಸ್ಯೆಗೆ ಕೇಂದ್ರದ ಮಲತಾಯಿ ಧೋರಣೆ ಕಾರಣ: ಸಚಿವ ಚಲುವರಾಯಸ್ವಾಮಿ ಟೀಕೆ

Published : Aug 14, 2025, 07:53 PM IST
N Chaluvarayaswamy

ಸಾರಾಂಶ

ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ.

ವಿಧಾನಸಭೆ (ಆ.14): ರಾಜ್ಯದಲ್ಲಿ ಉದ್ಭವಿಸಿರುವ ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಸಮಸ್ಯೆ ಹೆಚ್ಚುವಂತೆ ಮಾಡುತ್ತಿರುವ ಬಿಜೆಪಿಗರಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿನ ರಸಗೊಬ್ಬರ ಸಮಸ್ಯೆ ಕುರಿತು ಸದನದಲ್ಲಿ ಚಲುವರಾಯಸ್ವಾಮಿ ನೀಡಿದ ಉತ್ತರಕ್ಕೆ ಪ್ರತಿ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಅದಕ್ಕೆ ಸದನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಚಲುವರಾಯಸ್ವಾಮಿ, ಕೇಂದ್ರ ಸರ್ಕಾರ ಪ್ರತಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅದರ ಬಗ್ಗೆ ಬಿಜೆಪಿ ಶಾಸಕರು ಮಾತನಾಡುವುದಿಲ್ಲ. ರೈತರಿಗೆ ಎದುರಾಗಿರುವ ಸಮಸ್ಯೆಯಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ಕೇಂದ್ರದಿಂದ ಬಾಕಿ ಬರಬೇಕಿರುವ 2.75 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಕೂಡಲೇ ಕಳುಹಿಸಿದರೆ, ಬಿಜೆಪಿ ಶಾಸಕರ ಮನೆಗೂ ತಲಾ 5 ಮೂಟೆ ರಸಗೊಬ್ಬರ ಕಳುಹಿಸುತ್ತೇನೆ. ಹೀಗೆ ಎಲ್ಲದಕ್ಕೂ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸಗೊಬ್ಬರ ವಿಚಾರದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್‌ ಚೌವ್ಹಾಣ್‌ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಆದರೆ, ರಸಗೊಬ್ಬರ ಪೂರೈಕೆ ಸಚಿವ ಜೆ.ಪಿ.ನಡ್ಡಾ ಅವರು ಭೇಟಿಗೆ ಅವಕಾಶವನ್ನೇ ನೀಡುತ್ತಿಲ್ಲ. ಆದರೂ ರಸಗೊಬ್ಬರ ಹಂಚಿಕೆಯಷ್ಟು ಪೂರೈಕೆಗೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ರಾಜ್ಯದ ಎಲ್ಲ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಇಷ್ಟೆಲ್ಲ ಪ್ರಯತ್ನಿಸಿದರೂ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಯಾಗಿಲ್ಲ. ಈ ವಿಷಯ ತಿಳಿದಿದ್ದರೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕುಟುಕಿದರು.

ಸಭಾತ್ಯಾಗ: ಚಲುವರಾಯಸ್ವಾಮಿ ಉತ್ತರವನ್ನು ಒಪ್ಪದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ರಾಜ್ಯದಲ್ಲಿ ಸದ್ಯ 3.50 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಸಂಗ್ರಹವಿದೆ. ಆದರೂ, ರಸಗೊಬ್ಬರ ಪೂರೈಕೆಯಾಗಿಲ್ಲ ಎನ್ನುತ್ತಿದ್ದೀರಿ. ಈ ರೀತಿಯ ಬೇಜವಾಬ್ದಾರಿತನದ ಉತ್ತರವನ್ನು ಕೇಳಲು ನಾವು ಸಿದ್ಧರಿಲ್ಲ. ಹೀಗಾಗಿ ಸಭಾತ್ಯಾಗ ಮಾಡುವುದಾಗಿ ತಿಳಿಸಿ ಇತರ ಶಾಸಕರೊಂದಿಗೆ ಹೊರನಡೆದರು.

ಡಿಸಿಎಂ ಮಾಡುತ್ತೇನಂದ್ರೂ ಬರಲಿಲ್ಲ!: ಕೇಂದ್ರ ಸಚಿವ ಜೆ.ಪಿ.ನಡ್ಡಾ ಸಿಗುತ್ತಿಲ್ಲ ಎಂದು ಚಲುವರಾಯಸ್ವಾಮಿ ಅಸಹಾಯಕತೆ ತೋಡಿಕೊಂಡಾಗ ಆರ್‌.ಅಶೋಕ್‌ ಅವರು, ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಿದಾಗ ಪ್ರಧಾನಿ ಮೋದಿ ಸೇರಿ ಎಲ್ಲ ಸಚಿವರೂ ಅವರಿಗೆ ಸಿಗುತ್ತಾರೆ. ಅವರ ಜತೆಗಿದ್ದು, ನೀನು ಅವರ ಕಲೆಯನ್ನು ಕಲಿಯಲಿಲ್ಲವಲ್ಲ ಎಂದು ಕಾಲೆಳೆದರು. ನಮ್ಮ ಉಪಮುಖ್ಯಮಂತ್ರಿಯವರು ಬೆಳೆದಿದ್ದಾರೆ. ನಾನು ಇನ್ನೂ ಚಿಕ್ಕವ. ನನಗೆ ಇಷ್ಟೇ ಸಾಕು. ಚಿಕ್ಕವನಾಗಿಯೇ ಕೆಲಸ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಆಗ ಅಶೋಕ್‌, ನಮ್ಮ ಜತೆಗೆ ಬಾ ಎಂದು ಕರೆದಾಗ ನೀನು ಬಂದಿದ್ದರೆ ಅವರಂತೆಯೇ ಬೆಳೆಯುತ್ತಿದ್ದೆ ಎಂದರು. ಅದಕ್ಕೆ ಚಲುವರಾಯಸ್ವಾಮಿ, ಬಿಜೆಪಿಗೆ ಬಂದರೆ ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೀರಿ. ಅದು ನನಗೆ ಬೇಡ ಎಂದು ಚರ್ಚೆಗೆ ತೆರೆ ಎಳೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌ನ ಲೋಕಾಯುಕ್ತರ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!