
ವಿಧಾನಸಭೆ (ಆ.14): ಗೌರವಧನ ಹೆಚ್ಚಳಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಾಸಿಕ 1500 ರು. ಗೌರವಧನ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಇದನ್ನು ಸಾಧ್ಯವಾದಷ್ಟೂ ಶೀಘ್ರ ಅಥವಾ ಮುಂದಿನ ತಿಂಗಳಿಂದಲೇ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಸದನದ ಗಮನ ಸೆಳೆದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಕಳೆದ ಫೆಬ್ರವರಿಯಲ್ಲಿ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದ ವೇಳೆ ಅವರ ಕನಿಷ್ಠ ಗೌರವಧನವನ್ನು 10 ಸಾವಿರ ರು. ತಲುಪಿಸುವ ಆಶ್ವಾಸನೆಯನ್ನು ನೀಡಿದ್ದೆವು ಎಂದು ತಿಳಿಸಿದರು. ಅದರಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ನೀಡುತ್ತಿರುವ 5 ಸಾವಿರ ರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡುವ 3 ಸಾವಿರ ರು. ಸೇರಿ ಒಟ್ಟು 8 ಸಾವಿರ ರು. ನೀಡಲಾಗುತ್ತಿದೆ. ಗ್ರಾಮೀಣ ಭಾಗದವರಿಗೆ 1 ಸಾವಿರ ಕಡಿಮೆ ಇದ್ದಿದ್ದನ್ನು ಸರಿದೂಗಿಸಲು ರಾಜ್ಯ ಸರ್ಕಾರವೇ ಅದನ್ನು ತಾವೇ ನೀಡುವುದಾಗಿ ಒಪ್ಪಿಕೊಂಡು ಆಗಿದೆ. ಇದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಸೇರಿ 1500 ರು. ಗೌರವಧನ ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಲಾಗಿದೆ.
ಕೇಂದ್ರ ಇದನ್ನು ಅನುಷ್ಠಾನ ಮಾಡುವ ಮೊದಲೇ ರಾಜ್ಯದಿಂದಲೇ ಅನುಷ್ಠಾನ ಮಾಡಲೂ ನಿರ್ಧರಿಸಿದ್ದೇವೆ. ಇದನ್ನು ಮುಂದಿನ ತಿಂಗಳಿಂದಲೇ ಜಾರಿಗೆ ಪ್ರಯತ್ನಿಸುತ್ತೇವೆ ಎಂದರು. ಇದರಿಂದ ಅವರ ಗೌರವಧನ ಕನಿಷ್ಠ 9500 ರು. ಆಗುತ್ತದೆ. ಇನ್ನು ಮಿನಿಮಮ್ ಕೆಲಸ ಮಾಡಿದವರಿಗೂ 500 ರು. ಅದಕ್ಕಿಂತ ಹೆಚ್ಚು ಇನ್ಸೆಂಟಿವ್ ಬರುತ್ತದೆ. ಇದು ಒಟ್ಟು ಸೌರವಧನವನ್ನು ಅನೇಕರಿಗೆ ಗರಿಷ್ಠ 13 ಸಾವಿರ ರು.ವರೆಗೆ ಸಿಗುವಂತೆ ಮಾಡುತ್ತದೆ. ಈ ಎಲ್ಲವನ್ನೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದ್ದೇವೆ. ಅವರು ಅವರು ನಾಳೆ ವರೆಗೂ ಪ್ರತಿಭಟನೆ ಮುಂದುವರೆಸುವ ಸಾಧ್ಯತೆ ಇದೆ. ನೋಡೋಣ ನಾಳೆ ಅಂತ್ಯಗೊಳಿಸಬಹುದು ಎಂದರು.
ಆಶಾ ನೇಮಕಾತಿಗೆ ವಿದ್ಯಾರ್ಹತೆ ನಿಗದಿ: ಆಶಾ ಕಾರ್ಯಕರ್ತೆಯರ ನೇಮಕಾತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಇನ್ನು ಮುಂದೆ ಆಶಾಗಳ ನೇಮಕಾತಿಯಲ್ಲಿ ಇದು ಅನ್ವಯವಾಗಲಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ರಾಜ್ಯದಲ್ಲಿ 15 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಇವರಿಗೆ ಟೀಮ್ ಬೇಸ್ ಇನ್ಸೆಂಟಿವ್ ಒಂದು ಸಾವಿರ ಹೆಚ್ಚಿಸಲಾಗಿದೆ. ರಾಜ್ಯ ಮತ್ತು ಕೇಂದ್ರವು 60:40 ಅನುಪಾತದಲ್ಲಿ ಅನುದಾನ ನೀಡಲಾಗುತ್ತಿದೆ. ಅದರಂತೆ ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, 1500 ರು. ಕೊಡುವುದಾಗಿ ಕೇಂದ್ರ ಒಪ್ಪಿದೆ. ಇದರಿಂದ ಅವರಿಗೆ ಮುಂದೆ 9 ಸಾವಿರದ ವರೆಗೂ ವೇತನ ಸಿಗಲಿದೆ. ಈ ಕುರಿತು ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಜನೌಷಧಿ ಕೇಂದ್ರ ಮುಚ್ಚಿಸಿಲ್ಲ: ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉಚಿತ ಔಷಧಿಗಳನ್ನು ನಿರಾಕರಿಸುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಪತ್ರ ಬರೆದಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ 1417 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗುವಂತೆ ಮಾಡುವ ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಗಳ ಪಟ್ಟಿಯ (EML) ಪ್ರಕಾರ ಎಲ್ಲಾ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಮಾತ್ರ ಜನೌಷಧಿ ಕೇಂದ್ರಗಳನ್ನ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.