Maharashtra Politics: ಮಹಾರಾಷ್ಟ್ರ ರಾಜಕಾರಣದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆಗಳು ಶುರುವಾಗಿವೆ. ಅದರಲ್ಲಿಯೂ ಮಹಿಳಾ ಮುಖ್ಯಮಂತ್ರಿಯ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮುಂಬೈ: ವಿಧಾನಸಭಾ ಚುನಾವಣೆಗೂ ಮುನ್ನವೇ ಮಹಾರಾಷ್ಟ್ರ ರಾಜಕಾರಣದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆಗಳು ಶುರುವಾಗಿವೆ. ಅದರಲ್ಲಿಯೂ ಮಹಿಳಾ ಮುಖ್ಯಮಂತ್ರಿಯ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರದ ಜನತೆ ಹಲವು ರಾಜಕೀಯ ಬದಲಾವಣೆಗಳನ್ನು ಕಂಡಿದ್ದಾರೆ. ಹೀಗಾಗಿ ಐದು ವರ್ಷದ ಅವಧಿಗೆ ಒಬ್ಬರೇ ಸಿಎಂ ಇರಲಿ ಎಂಬ ಮಾತುಗಳು ಕೇಳಿ ಬರುತ್ತಿವೆ. 2019ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆ ಮಹಾರಾಷ್ಟ್ರ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. 2019ರ ಚುನಾವಣೆ ಬಳಿಕ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮೂರು ದಿನ ಸಿಎಂ ಆಗಿದ್ದರು. ನಂತರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ ಶಿವಸೇನೆ ಮತ್ತು ಎನ್‌ಸಿಪಿ ಇಬ್ಭಾಗವಾಗಿದ್ದರಿಂದ ಬಿಜೆಪಿ ಬೆಂಬಲದ ಜೊತೆ ಏಕನಾಥ್ ಶಿಂಧೆ ಸಿಎಂ ಆಗಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಉತ್ತರ ಪ್ರದೇಶದಂತೆ ಮಹಾರಾಷ್ಟ್ರ ರಾಜಕಾರಣದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಡಿಸಿಎಂ ಅಜಿತ್ ಪವಾರ್ ಜೊತೆ ಹೋಗಿದ್ದ ನಾಯಕರು ಶರದ್ ಪವಾರ್ ಬಣದತ್ತ ಆಗಮಿಸುತ್ತಿದ್ದಾರೆ. ಮತ್ತೋಂದೆಡೆ ಉದ್ಧವ್ ಠಾಕ್ರೆ ಮೂಲ ಶಿವಸೇನೆಯ ಕಾರ್ಯಕರ್ತರನ್ನು ಕರೆತರುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಎನ್‌ಸಿಪಿ ಮುಖ್ಯಸ್ಥ, ಮಾಜಿ ಸಿಎಂ ಶರದ್ ಪವಾರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗ್ತಾರಾ ಎಂಬ ಚರ್ಚೆಗಳು ಶುರುವಾಗಿದೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಶರದ್ ಪವಾರ್ ಈ ಬಗ್ಗೆ ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿ, ತಂದೆಯಾಗಿ ಮಗಳು ಸುಪ್ರಿಯಾ ಸುಳೆ ಮುಖ್ಯಮಂತ್ರಿಯಾಗುವ ಬಗ್ಗೆ ನಿಮ್ಮ ಅಭಿಪ್ರಾಯ ಏನಾಗಿರುತ್ತೆ ಎಂಬ ಪ್ರಶ್ನೆಯನ್ನು ಶರದ್ ಪವಾರ್ ಅವರಿಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಶರದ್ ಪವಾರ್ ಉತ್ತರಿಸಿದ್ದು ಹೀಗಿತ್ತು.
ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ; ಡಿಸಿಎಂ ಅಜಿತ್ ಪವಾರ್ ಬಣದ ನಾಯಕರು ಘರ್ ವಾಪ್ಸಿ!
ಶರದ್ ಪವಾರ್ ಉತ್ತರ
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿ ಪಕ್ಷದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಅಘಾಡಿ ಮೈತ್ರಿಕೂಟವೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದರು. ರಾಜ್ಯ ಸರ್ಕಾರ ಜನರ ಕೈಯಲ್ಲಿರಬೇಕು. ಜನರ ಆಯ್ಕೆಯಿಂದಲೇ ನಾವು ಸರ್ಕಾರ ರಚನೆ ಮಾಡಿರುತ್ತವೆ. ಇಲ್ಲಿ ಯಾವುದೇ ಒಬ್ಬ ವ್ಯಕ್ತಿ ಮುಖ್ಯವಲ್ಲ. ಸಿಎಂ ಯಾರು ಆಗಬೇಕು ಅನ್ನೋದು ಸಾಮೂಹಿಕ ನಿರ್ಧಾರವಾಗುತ್ತದೆ ಎಂದು ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು."
ಮಹಾರಾಷ್ಟ್ರ ರಾಜಕಾರಣದಲ್ಲಿ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಪ್ರಮುಖ ನಾಯಕರಾಗಿದ್ದಾರೆ. 2009ರಿಂದಲೂ ಸುಪ್ರಿಯಾ ಸುಳೆ ಬಾರಾಮತಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾರೆ. ಸುಪ್ರಿಯಾ ಸುಳೆ ಒಳ್ಳೆಯ ವಾಗ್ಮಿಯಾಗಿದ್ದಾರೆ. ಸದನದಲ್ಲಿ ಸುಪ್ರಿಯಾ ಸುಳೆಯವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಬಾರಿ ಸುಪ್ರಿಯಾ ಸುಳೆ ವಿರುದ್ಧ ಸೋದರ ಅಜಿತ್ ಪವಾರ್ ಪತ್ನಿಯೇ ಸ್ಪರ್ಧಿಸಿ ಸೋತಿದ್ದರು.
ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ಅಜಿತ್ ಹೆಗಲ ಮೇಲೆ ಹಾಕಿದ ಆರ್‌ಎಸ್‌ಎಸ್!
ಲೋಕ ಸಮರದಲ್ಲಿ ಅಘಾಡಿಗೆ 30 ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ 40ರಲ್ಲಿ 30 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿತ್ತು. ಇನ್ನು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಯಗಡದಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದರೆ, ಶರದ್ ಪವಾರ್ ಬಣ ಎಂಟು ಸ್ಥಾನಗಳನ್ನು ಗಳಿಸಿತ್ತು.