ಬೆಂಗಳೂರು (ಅ.02): ವಿಜಯಪುರ (Vijayapura) ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ (JDS) ಅಭ್ಯರ್ಥಿಯನ್ನಾಗಿ ನಾಜಿಯಾ ಶಕೀಲಾ ಅಂಗಡಿ (Nazia shakila angadi) ಅವರ ಹೆಸರನ್ನು ಘೋಷಿಸಲಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ನಾಜಿಯಾ ಹೆಸರನ್ನು ಶುಕ್ರವಾರ ಪ್ರಕಟಿಸಿದರು.
ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಜೆಡಿಎಸ್ (JDS) ಅಭ್ಯರ್ಥಿಯನ್ನಾಗಿ ನಿಯಾಜ್ ಶೇಖ್‌ಗೆ ಬಿ.ಫಾರಂ ವಿತರಣೆ ಮಾಡಲಾಗಿದೆ. ಎರಡೂ ಕ್ಷೇತ್ರದಲ್ಲಿಯೂ ಉತ್ತಮ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಎರಡು ಕ್ಷೇತ್ರದಲ್ಲಿಯೂ ಅಲ್ಪಸಂಖ್ಯಾತ ಸಮುದಾಯದ ಯುವಜನರನ್ನು ಗುರುತಿಸಿ ಟಿಕೆಟ್ ನೀಡಿರುವುದು ವಿಶೇಷ. ಪಕ್ಷದ ಪಂಚರತ್ನ ಪರಿಕಲ್ಪನೆಯಂತೆ ಇಬ್ಬರೂ ವಿದ್ಯಾವಂತರನ್ನು ಆಯ್ಕೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಉಪಚುನಾವಣೆ ಸಮರ: ಟಿಕೆಟ್‌ಗಾಗಿ ಬಿಜೆಪಿ, ಜೆಡಿಎಸ್‌ನಲ್ಲಿ ಪೈಪೋಟಿ..!
ನಾಜಿಯಾ ಅವರು ಎಂಎ, ಬಿಎಡ್ ವಿದ್ಯಾಭ್ಯಾಸ ಮಾಡಿದ್ದು, ಜೆಡಿಎಸ್‌ನಲ್ಲಿ ಸಕ್ರಿಯರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸಮಾಜಮುಖಿ ಆಗಿ ಕಾರ್ಯನಿರ್ವಹಿಸುತ್ತಿರುವ ನಾಜಿಯಾ ಶಕೀಲಾ ಅಂಗಡಿ ಅವರು ಅತ್ಯುತ್ತಮ ಅಭ್ಯರ್ಥಿಯಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರಿಗೂ ಸಲ್ಲುವ ಮಹಿಳೆಯಾಗಿದ್ದಾರೆ.
ಪಕ್ಷದ ನಿಷ್ಠೆಯ ಜತೆಗೆ ಪ್ರಾಮಾಣಿಕ ಮತ್ತು ಸೇವಾ ಮನೋಭಾವ ಹೊಂದಿರುವ ನಾಜಿಯಾ ಅವರನ್ನು ಸಮಸ್ತ ಸಿಂದಗಿ ಮತದಾರರು ಆಶೀರ್ವದಿಸಿ ಆಯ್ಕೆ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (By Election) ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಇಂದು (ಸೆ.28) ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ (Eshwar Khandre) ಅವರು ಸುದ್ದಿಗೋಷ್ಠಿ ನಡೆಸಿ, ಅಶೋಕ್ ಮನಗೂಳಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಬೈಎಲೆಕ್ಷನ್ ದಿನಾಂಕ ನಿಗದಿ: ಹಾನಗಲ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಘೋಷಣೆ
ಹಾನಗಲ್ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ. ಈ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಹಾನಗಲ್ನಲ್ಲಿ ಮನೋಹರ್ ತಹಶಿಲ್ದಾರ್, ಶ್ರೀನಿವಾಸ್ ಮಾನೆ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಇನ್ನು ಕೆಲವರೂ ಟಿಕೆಟ್ ಕೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಹೈಕಮಾಂಡ್ ನಾಯಕರು ಅಭ್ಯರ್ಥಿ ಫೈನಲ್ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.