* ಹಾನಗಲ್ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈಟ್
* ನಾವೇನು ಗಂಡಸರಲ್ವಾ? ಎಂದಿದ್ದ ನಾಯಕ ಯೂಟರ್ನ್
* ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಫೈನಲ್
ಬೆಂಗಳೂರು, (ಅ.01): ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಸಂಧಾನ ಸಭೆ ಸಕ್ಸಸ್ ಆಗಿದೆ.
ಒಬ್ಬರಿಗೆ ಟಿಕೆಟ್ ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದು ಸಿದ್ದರಾಮಯ್ಯ ಮಾಡಿದ ತೀರ್ಮಾನಕ್ಕೆ ಹಾನಗಲ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಸೈ ಎಂದಿದ್ದಾರೆ. ಈ ಮೂಲಕ ಶ್ರೀನಿವಾಸ್ ಮಾನೆಗೆ ಹಾನಗಲ್ ಟಿಕೆಟ್ ಅಂತಿಮವಾಗುವುದು ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ. ನಾವೇನು ಗಂಡಸರು ಅಲ್ವಾ ಎಂದು ಗುಡುಗಿದ್ದ ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಇದೀಗ ಯೂಟರ್ನ್ ಹೊಡೆದಿದ್ದಾರೆ.
ಹಾನಗಲ್ ಬೈ ಎಲೆಕ್ಷನ್: ನಾವೇನು ಗಂಡಸರಲ್ವಾ? ನಮಗೆ ಏಕೆ ಟಿಕೆಟ್ ನೀಡಲ್ಲ, ಗುಡುಗಿದ ಟಿಕೆಟ್ ಆಕಾಂಕ್ಷಿ
ಹೌದು..ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭೇಟಿ ಬಳಿಕ, ಶ್ರೀನಿವಾಸ್ ಮಾನೆ ಅಭ್ಯರ್ಥಿಯಾದರೂ ಕೆಲಸ ಮಾಡುವೆ. ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ನಿನ್ನೆ ಕೆಲ ಹೇಳಿಕೆ ಕೊಟ್ಟಿದ್ದೆ, ಆದರೆ ಇಂದಿನ ಸಭೆಯಲ್ಲಿ ನಮ್ಮ ನಾಯಕರೆಲ್ಲ ಒಗ್ಗೂಡಿ ತೀರ್ಮಾನ ಮಾಡಿದ್ದಾರೆ. ಒಬ್ಬರಿಗೆ ಹಾನಗಲ್ ಟಿಕೆಟ್, ಇನ್ನೊಬ್ಬರಿಗೆ ಪರ್ಯಾಯ ಸ್ಥಾನಮಾನ ಎಂದಿದ್ದಾರೆ, ಇದನ್ನು ಒಪ್ಪಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಮನೋಹರ್ ತಹಶೀಲ್ದಾರ್. ಶ್ರೀನಿವಾಸ್ ಮಾನೆ. ಈ ಇಬ್ಬರು ನಾಯಕರ ನಡುವೆ ಹಾನಗಲ್ ಕಾಂಗ್ರೆಸ್ಗೆ ಅಭ್ಯರ್ಥಿ ಆಗೋ ನಿಟ್ಟಿನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಬಹಿರಂಗ ಅಸಮಾಧಾನಕ್ಕೂ ಸಾಕ್ಷಿಯಾಗಿತ್ತು. ಮನೋಹರ್ ಅವರ ಹೇಳಿಕೆ ಗಮನಿಸಿದ್ರೆ, ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟಗೊಂಡಂತಿತ್ತು. ಆದ್ರೆ, ಇದೀಗ ಸಮಾಧಾನ ಪಡಿಸಲು ಮುಖಂಡರು ಯಶಸ್ವಿಯಾಗಿದ್ದಾರೆ.
ಇದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀನಿವಾಸ್ ಮಾನೆ ಕಣಕ್ಕಿಳಿಯುವುದು ಬಹುತೇಕ ಫೈನಲ್ ಆದಂತೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.