
ದಕ್ಷಿಣ ಕನ್ನಡ (ಮೇ 3, 2023): ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ಮೋದಿ ಕರಾವಳಿ ಪ್ರದೇಶದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತುಂಬಲು ಸಮಾವೇಶ ನಡೆಸಿದ್ದಾರೆ. ಜಿಲ್ಲೆಯ ಮುಲ್ಕಿಯಲ್ಲಿ ಸಮಾವೇಶ ನಡೆಸಿದ ಮೋದಿ, ಬಜರಂಗ ಬಲಿ ಘೋಷಣೆ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು ಹಾಗೂ ತಮ್ಮ ಭಾಷಣದ ಅಂತ್ಯದಲ್ಲೂ ಬಜರಂಗಿಯ ಸ್ಮರಣೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಮಾಡುವುದಾಗಿ ಭರವಸೆ ನೀಡಿರುವುದಕ್ಕೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ಮುಲ್ಕಿ ವೆಂಕರಮಣ ಸ್ವಾಮಿಗೆ ನನ್ನ ನಮನಗಳು ಎಂದೂ ಮೋದಿ ಹೇಳಿದ್ದಾರೆ. ಅಲ್ಲದೆ, ನಮ್ಮ ನಾಯಕರೊಬ್ಬರು ಚುನಾವಣೆಯಿಂದ ನಿವೃತ್ತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮತ ಕೇಳುತ್ತಿದ್ದಾರೆ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇದೇ ನನ್ನ ಕೊನೇ ಚುನಾವಣೆ ಎಂದು ಹೇಳಿರುವುದಕ್ಕೆ ತಿಳಿಸಿದ್ದಾರೆ.
ಇದನ್ನು ಓದಿ: ಎರಡನೇ ಹಂತದ ಚುನಾವಣಾ ಪ್ರಚಾರ, ಇಂದಿನಿಂದ ಎರಡು ದಿನ ರಾಜ್ಯದಲ್ಲಿ 7 ಕಡೆ ಮೋದಿ ಅಬ್ಬರ
ಶಿಕ್ಷಣದ ಅಭಿವೃದ್ಧಿ ಹಾಗೂ ಕರ್ನಾಟಕವನ್ನು ನಂ. 1 ಮಾಡಬೇಕೆಂದು ಮೋದಿ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ಟಾಪರ್‌ಗಳನ್ನೊಂದಿರುವ ಜಿಲ್ಲೆ, ಕೃಷಿ, ಮೀನುಗಾರಿಕೆ, ಉನ್ನತ ಶಿಕ್ಷಣ ಸೇರಿ ಅನೇಕ ಇತರೆ ಕ್ಷೇತ್ರಗಳಲ್ಲೂ ನಂ. 1 ಆಗಲು ನಾವು ಪ್ರಯತ್ನ ಪಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ದೆಹಲಿಯಲ್ಲಿರುವ ಒಂದು ಪರಿವಾರವನ್ನು ಮಾತ್ರ ನಂ. 1 ಮಾಡಲು ಎಟಿಎಂ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಹಾಗೆ, ಜೆಡಿಎಸ್ ಕೂಡ ಕಾಂಗ್ರೆಸ್‌ನ ಇನ್ನೊಂದು ಮುಖವಿದ್ದಂತೆ. ಈ ಹಿನ್ನೆಲೆ ಈ ಎರಡೂ ಪಕ್ಷಗಳಿಗೆ ಮತ ಹಾಕುವ ಮುನ್ನ ಯೋಚಿಸಬೇಕು, ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಿ ಎಂದೂ ಪ್ರಧಾನಿ ಹೇಳಿದ್ದಾರೆ. ಇನ್ನು, ಮೊದಲ ಬಾರಿ ಮತ ಹಾಕುತ್ತಿರುವ ಯುವಕ - ಯುವತಿಯರನ್ನು ಪ್ರಧಾನಿ ಮೋದಿ ಟಾರ್ಗೆಟ್ ಮಾಡಿದ್ದು, ಮೊದಲ ಬಾರಿಗೆ ಮತ ಹಾಕುವವರೇ ನೀವು ಕರ್ನಾಟಕದ ಭವಿಷ್ಯ ಹಾಗೂ ನಿಮ್ಮ ಭವಿಷ್ಯವನ್ನೂ ರೂಪಿಸಿಕೊಳ್ಳಲಿದ್ದೀರಿ. ಈ ಹಿನ್ನೆಲೆ ನೀವು ಯೋಚಿಸಿ ಮತ ಹಾಕಬೇಕು, ಅಸ್ಥಿರ ಸರ್ಕಾರದಿಂದ ನಿಮ್ಮ ಕನಸು ನನಸಾಗಲ್ಲ. ಕಾಂಗ್ರೆಸ್ ಶಾಂತಿ ಹಾಗೂ ಅಭೀವೃದ್ಧಿ ವಿರೋಧಿ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: 48 ಗಂಟೆ.. 6 ಸಮಾವೇಶ.. 2 ರೋಡ್ ಶೋ ಮೋದಿ ಮಾತಿನಲ್ಲೇ ಬಾಚಿಕೊಂಡ್ರಾ ಮತಗಳಾ..?
ಇನ್ನು, ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿದೆ, ರಾಜಸ್ಥಾನದಲ್ಲಿ ಉಗ್ರರನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಇದು ಅವರ ಇನ್ನೊಂದು ಮುಖ. ದೇಶದಲ್ಲಿ ಪ್ರಗತಿ ಕಾಣುತ್ತಿದ್ದರೆ ಹಾಗೂ ಶಾಂತಿಯಿಂದ ಇದ್ದರೆ ಕಾಂಗ್ರೆಸ್ ಇದನ್ನು ಸಹಿಸಲ್ಲ. ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತದೆ. ಕಾಂಗ್ರೆಸ್ ಆಯ್ಕೆ ಮಾಡ್ತೀರಾ ಎಂದೂ ಮೋದಿ ಮತದಾರರನ್ನು ಪ್ರಶ್ನಿಸಿದ್ದಾರೆ.
ಇನ್ನು, ರಾಹುಲ್ ಗಾಂಧಿ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ದೇಶ ವಿದೇಶಗಳಲ್ಲಿ ತಿರುಗಿ ದೇಶದ ಮರ್ಯಾದೆ ಹಾಳು ಮಾಡುತ್ತಿದ್ದಾರೆ. ಆಧರೆ ಬಿಜೆಪಿ ಸರ್ಕಾರದ ಬಂದ ಮೇಲೆ ಹಿಂದೂಸ್ಥಾನವನ್ನು ಹೊಗಳುತ್ತಿದ್ದಾರೆ. ಅಮೆರಿಕ, ಆಸ್ಟ್ರೇಲಿಯ, ಜಪಾನ್, ಯುಕೆ - ಹೀಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಹಿಂದೂಸ್ಥಾನದ ಪರ ಜೈಕಾರ ಕೂಗುತ್ತಿದ್ದಾರೆ. ಇದಕ್ಕೆ ಕಾರಣ ಮೋದಿಯಲ್ಲ, ನಿಮ್ಮ ಮತದಿಂದ ರಚನೆಯಾಗಿರುವ ಸ್ಥಿರ ಸರ್ಕಾರ ಎಂದು ಮೋದಿ ಮತದಾರರನ್ನು ಸೆಳೆಯುವ ಯತ್ನ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್‌ನದು 85% ಕಮಿಷನ್ ಸರ್ಕಾರ; ಇದನ್ನು ಆ ಪಕ್ಷದ ಪ್ರಧಾನಿಯೇ ಒಪ್ಪಿಕೊಂಡಿದ್ರು: 40% ಆರೋಪಕ್ಕೆ ಮೋದಿ ತಿರುಗೇಟು
ಅಲ್ಲದೆ, ಇದೇ ರೀತಿ, ಕರ್ನಾಟಕಕ್ಕೂ ಜೈಕಾರ ಹಾಕಬೇಕೆಂದರೆ ಸದೃಢ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಿ. ಇದರಿಂದ ಗುಜರಾತ್, ಅಸ್ಸಾಂ ಹಾಗೂ ಜಮ್ಮು ಕಾಶ್ಮೀರದಂತಹ ಇತರೆ ರಾಜ್ಯಗಳಲ್ಲೂ ಕರ್ನಾಟಕದ ಪರ ಜೈಕಾರ ಕೂಗುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಇನ್ನು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಿಳೆಯರ ಅರೋಗ್ಯ ಹದಗೆಡುತ್ತಿತ್ತು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ಶಾಲೆ ತೊರೆಯುತ್ತಿದ್ದರು. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮೂಲಸೌಕರ್ಯದಿಂದ ಮಹಿಳೆಯರ ಸಬಲೀಕರಣ ಮಾಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದ 11 ಕೋಟಿ ರೈತರಿಗೆ ನೆರವು ಸಿಗುತ್ತಿದೆ, ಕೋಟ್ಯಂತರ ಮಹಿಳೆಯರ ಅಕೌಂಟ್‌ಗೂ ದುಡ್ಡು ಹೋಗುತ್ತಿದೆ. ಬಡವರಿಗೆ ಮಹಿಳೆಯರ ಹೆಸರಲ್ಲಿ ಮನೆ ಕಟ್ಟಿಸಿಕೊಡಲಾಗುತ್ತಿದೆ ಎಂದೂ ಹೇಳಿದರು.
ಇದನ್ನೂ ಓದಿ; ಮೋದಿ ಸಮಾವೇಶಕ್ಕೆ ಹೆಚ್ಚಿನ ಜನ ಕರೆತರಲು ಹಣ ಹಂಚಿ ಆಮಿಷ ಆರೋಪ: ಶಾಸಕ ಪಿ.ರಾಜೀವ್ ವಿರುದ್ಧ ಕೇಸು
ನಂತರ, ಕರಾವಳಿಯ ಮೀನುಗಾರರನ್ನು ಸೆಳೆಯುವ ಯತ್ನ ಮಾಡಿದ ಮೋದಿ, ಮೀನುಗಾರ ಮಹಿಳೆಯರನ್ನೂ ಕಾಂಗ್ರೆಸ್ ಸಂಕಷ್ಟದಲ್ಲಿಟ್ಟಿತ್ತು. ಇಲ್ಲಿನ ಮೀನುಗಾರರು ಮೋದಿ ಕಣ್ಣಿಗೆ ಕಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕೆಯ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸೃಷ್ಟಿಸಲಾಗಿದೆ. ಮತ್ಸ್ಯ ಸಿರಿ ಯೋಜನೆ ಜಾರಿಗೊಳಿಸಿದೆ, ಮೀನುಗಾರರು, ಕುಟುಂಬ ಹಾಗೂ ಮಕ್ಕಳಿಗೆ ಸಾಲ ಸಿಗುತ್ತಿದ್ದು, ಅವರ ಭವಿಷ್ಯ ಬದಲಾಗುತ್ತಿದೆ ಎಂದು ಹೆಳಿದರು.
ಇನ್ನು, ಸ್ಟಾರ್ಟಪ್, ಬಾಹ್ಯಾಕಾಶ ಕ್ಷೇತ್ರದಲ್ಲೂ ಕ್ರಾಂತಿಯಾಗಿದೆ. ಯುವಕರು ಈ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಜಗತ್ತಿನೆಲ್ಲೆಡೆ ಭಾರತದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಯುವಕರನ್ನು ಮತ್ತೆ ಸೆಳೆಯುವ ಯತ್ನ ಮಾಡಿದ್ದಾರೆ. ಜಗತ್ತಿನ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಹೋಗಿದ್ದೇವೆ. ನಮ್ಮನ್ನು ಆಳಿದ ಇಂಗ್ಲೆಂಡ್ ಸರ್ಕಾರವನ್ನು ಸೋಲಿಸಿದ್ದೇವೆ. ಇದೇ ರೀತಿ, ಮೂರನೇ ಸ್ಥಾನಕ್ಕೆ ಹೋಗಬೇಕಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂದೂ ಪ್ರಧಾನಿ ಮೋದಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು.
ಇದನ್ನೂ ಓದಿ: ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್ ಕೀ ಬಾತ್’ ಮೂಲಕ ಜನ ಸಂಪರ್ಕ: ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.