ಮೈಸೂರು (ಅ.2) : ದೇಶದಲ್ಲಿಂದು ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತ ಐಕ್ಯತಾ ಯಾತ್ರೆ ಅಂಗವಾಗಿ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದಲ್ಲಿ ಶನಿವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯುಪಿಎ ಸರ್ಕಾರ ಇದ್ದಾಗ ಅನಿಲ ಸಿಲಿಂಡರ್‌ವೊಂದರ ಬೆಲೆ 400 ರು. ಇತ್ತು. ಈವತ್ತು 1,000 ರು. ದಾಟಿದೆ. ಹಾಗಾದರೆ, 600 ರು. ಎಲ್ಲಿ, ಯಾರ ಜೇಬಿಗೆ ಹೋಗುತ್ತಿದೆ? ಪೆಟ್ರೋಲ್, ಡಿಸೇಲ್ ದರ ಕೂಡ ಹೆಚ್ಚಾಗಿದೆ. ಈ ಹಣವೆಲ್ಲಾ ಯಾರಿಗೆ ಹೋಗ್ತಾ ಇದೆ ಎಂದು ಪ್ರಶ್ನಿಸುವಂತೆ ಜನರಿಗೆ ಕರೆ ನೀಡಿದರು.
Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್ ಗಾಂಧಿ
ಪ್ರಧಾನಿಯವರು ರೈತರಿಗೆ ಮಾರಕವಾದ ಮೂರು ಕರಾಳ ಕಾನೂನುಗಳನ್ನು ಜಾರಿಗೆ ತಂದರು. ನೋಟ್ ಬ್ಯಾನ್ ಮಾಡಿದರು. ಜಿಎಸ್‌ಟಿಯನ್ನು ಜಾರಿಗೆ ತಂದರು. ಕೊರೋನಾ ಸಮಯದಲ್ಲಿ ಲಕ್ಷಾಂತರ ಮಂದಿ ಸತ್ತರೂ ಕಾರ್ಮಿಕರ ಸಹಾಯಕ್ಕೆ ಬರಲಿಲ್ಲ. ಬಡವರ ಸಾಲ ಮನ್ನಾ ಆಗಲಿಲ್ಲ. ಬದಲಿಗೆ ಶ್ರೀಮಂತರ ಸಾಲ ಮನ್ನಾ ಮಾಡಿದರು ಎಂದು ಅವರು ದೂರಿದರು.
ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಹರಡಲಾಗುತ್ತಿದೆ. ಸಹೋದರರಂತೆ ಬಾಳುತ್ತಿರುವ ಜನರ ನಡುವೆ ಜಗಳ ತಂದು ಕಿತ್ತಾಡುವಂತೆ ಮಾಡಲಾಗುತ್ತಿದೆ. ನೀವು ನಿಮ್ಮ ಪರಿವಾರದೊಂದಿಗೆ ಮನೆಯಲ್ಲಿ ಇದ್ದರೆ ಮೂರನೇ ವ್ಯಕ್ತಿ ಬಂದು ನಾನು ದೇಶ ಭಕ್ತ, ಧರ್ಮ ರಕ್ಷಕ ಎಂದು ಹೇಳುತ್ತಾನೆ. ನಿಮ್ಮ ನಡುವೆಯೇ ಜಗಳ ತಂದು ಹಾಕುತ್ತಾನೆ. ನಂತರ ನಿಮ್ಮ ಬಳಿ ಲೂಟಿ ಮಾಡಿಕೊಂಡು ಹೋಗುತ್ತಾನೆ. ಹೀಗಿರುವಾಗ ಆತನನ್ನು ದೇಶಭಕ್ತ, ಧರ್ಮರಕ್ಷಕ ಎಂದು ಕರೆಯುತ್ತೀರಾ? ಅಥವಾ ಲೂಟಿಕೋರ ಎಂದು ಕರೆಯುತ್ತೀರಾ? ಎಂದು ಪ್ರಶ್ನಿಸಿದರು.
ಜನರನ್ನು ಒಗ್ಗೂಡಿಸಲು ನಮ್ಮ ಯಾತ್ರೆ
ನಮ್ಮದು ದೇಶವನ್ನು ಜೋಡಿಸುವ ಯಾತ್ರೆ. ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದವರೆಗೆ ನದಿಯಂತೆ ಸಾಗುತ್ತಿರುವ ಈ ಯಾತ್ರೆಯಲ್ಲಿ ಎಲ್ಲಾ ಧರ್ಮ, ವರ್ಗ, ಜಾತಿ, ಭಾಷಿಕರು ಪಾಲ್ಗೊಳ್ಳುತ್ತಿದ್ದಾರೆ. ಇದೇ ನಿಜವಾದ ಹಿಂದೂಸ್ತಾನ. ಜನರ ಬಳಿ ಈ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಲು, ಜನರನ್ನು ಒಗ್ಗೂಡಿಸಲು ಈ ಯಾತ್ರೆ ಶುರು ಮಾಡಿದ್ದೇವೆ. ಸಾಮಾನ್ಯ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯ ವಿರುದ್ಧ ಹೋರಾಡಲೆಂದೇ ಈ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!
ಈಗ ಜನತೆಗೆ ಎಲ್ಲವೂ ಅರ್ಥವಾಗಿದೆ. ಆದ್ದರಿಂದಲೇ ಯಾತ್ರೆಗೆ ಹೆಚ್ಚು ಜನ ಸೇರುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಶಕ್ತಿ, ಚೈತನ್ಯದಿಂದ ಐಕ್ಯತಾ ಯಾತ್ರೆ ನಡೆದುಕೊಂಡು ಬಂದಿದೆ. ಬೆಳ್ಳಗ್ಗೆಯಿಂದ ಇಲ್ಲಿಯವರೆಗೆ ನೀವೆಲ್ಲರೂ ನಮ್ಮೊಂದಿಗೆ 25-30 ಕಿ.ಮೀ. ದೂರ ಹೆಜ್ಜೆ ಹಾಕಿದ್ದೀರಿ. ಧನ್ಯವಾದಗಳು ಎಂದು ರಾಹುಲ್ ಕೃತಜ್ಞತೆ ಸಲ್ಲಿಸಿದರು.
ರಕ್ಷಿತಾರಣ್ಯದಲ್ಲಿ ಇಳಿದ ರಾಹುಲ್: ಬಿಜೆಪಿ ದೂರು
ಗುಂಡ್ಲುಪೇಟೆ: ಭಾರತ್ ಐಕ್ಯತಾ ಯಾತ್ರೆ ವೇಳೆ ರಾಹುಲ್ ಗಾಂಧಿಯವರು ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಇಳಿದಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್ ಅವರು ಬಂಡೀಪುರ ಅರಣ್ಯ ಇಲಾಖೆಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ತಮಿಳುನಾಡು ಗಡಿ ಮೂಲಕ ರಾಜ್ಯ ಪ್ರವೇಶಿಸಿದ ರಾಹುಲ್‌ಗಾಂಧಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಬಂಡೀಪುರದ ಬಳಿ ಆತ್ಮೀಯವಾಗಿ ಬರ ಮಾಡಿಕೊಂಡಿದ್ದರು. ಬಳಿಕ, ಅವರು ವಾಹನದಲ್ಲಿ ಗುಂಡ್ಲುಪೇಟೆಗೆ ಆಗಮಿಸಿದ್ದರು. ರಾಹುಲ್ ಅವರನ್ನು ಸ್ವಾಗತಿಸುವ ವೇಳೆ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಕೆ.ಜೆ.ಜಾಜ್‌ರ್ ಹಾಗು ಇತರರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಇವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.