Karnataka election 2023: ದೋಸ್ತಿಗಳ ಕಾಳಗ: ಹೈವೋಲ್ಟೇಜ್‌ ಕ್ಷೇತ್ರವಾದ ಕಲಘಟಗಿ

Published : Apr 14, 2023, 11:33 AM IST
Karnataka election 2023: ದೋಸ್ತಿಗಳ ಕಾಳಗ: ಹೈವೋಲ್ಟೇಜ್‌ ಕ್ಷೇತ್ರವಾದ ಕಲಘಟಗಿ

ಸಾರಾಂಶ

ಅಂದು ದೋಸ್ತಿ ಇಂದು ಕುಸ್ತಿ. ಒಂದು ಕಾಲದಲ್ಲಿ ಒಟ್ಟಾಗಿ ಸೇರಿಕೊಂಡು ಚುನಾವಣೆ ನಡೆಸಿದ್ದ ದೋಸ್ತಿಗಳಿಬ್ಬರು ಇದೀಗ ಬದ್ಧ ವೈರಿಗಳಂತಾಗಿದ್ದಾರೆ. ಪರಸ್ಪರ ಎದುರಾಳಿಗಳಿಗಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಇದು ಕಲಘಟಗಿ ಕ್ಷೇತ್ರದ ಸಂಕ್ಷಿಪ್ತ ಚಿತ್ರಣ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.14): ಅಂದು ದೋಸ್ತಿ ಇಂದು ಕುಸ್ತಿ. ಒಂದು ಕಾಲದಲ್ಲಿ ಒಟ್ಟಾಗಿ ಸೇರಿಕೊಂಡು ಚುನಾವಣೆ ನಡೆಸಿದ್ದ ದೋಸ್ತಿಗಳಿಬ್ಬರು ಇದೀಗ ಬದ್ಧ ವೈರಿಗಳಂತಾಗಿದ್ದಾರೆ. ಪರಸ್ಪರ ಎದುರಾಳಿಗಳಿಗಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಇದು ಕಲಘಟಗಿ ಕ್ಷೇತ್ರದ ಸಂಕ್ಷಿಪ್ತ ಚಿತ್ರಣ.

ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ ಲಾಡ್‌(Santosh Lad) ಹಾಗೂ ಬಿಜೆಪಿಯ ನಾಗರಾಜ ಛಬ್ಬಿ(Nagaraj Chabbi). ಇಬ್ಬರೂ ಒಂದು ಕಾಲದ ದೋಸ್ತಿಗಳು. ಕಲಘಟಗಿ(Kalaghatagi assembly constituency)ಯಲ್ಲಿ ಈ ದೋಸ್ತಿಗಳೀಗ ಕಾಳಗಕ್ಕಿಳಿದಿದ್ದಾರೆ. ಈ ಕಾರಣದಿಂದಾಗಿ ಇದೀಗ ಈ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸಿದೆ.

ಕಾಂಗ್ರೆಸ್‌ಗೆ ಸೆಡ್ಡುಹೊಡೆದು ಬಿಜೆಪಿ ಸೇರಿದ ನಾಗರಾಜ್‌ ಛಬ್ಬಿ: ಸಂತೋಷ್‌ ಲಾಡ್‌ಗೆ ಪೈಪೋಟಿ

ಇಬ್ಬರು ಮೊದಲು ಕಾಂಗ್ರೆಸ್‌ನಲ್ಲಿದ್ದವರು. 2008, 2013, 2018ರಲ್ಲಿ ನಡೆದ ಮೂರು ಚುನಾವಣೆಯಲ್ಲಿ ಇಬ್ಬರು ದೋಸ್ತಿಗಳು ಒಟ್ಟಾಗಿ ಚುನಾವಣೆ ನಡೆಸಿದ್ದರು. ಈ 3 ಚುನಾವಣೆಗಳಲ್ಲಿ ಲಾಡ್‌ ಅಭ್ಯರ್ಥಿಯಾಗಿದ್ದರು. 3ರ ಪೈಕಿ 2 ಚುನಾವಣೆಯಲ್ಲಿ ಲಾಡ್‌ ಗೆಲುವು ಕೂಡ ಕಂಡವರು. ಈ ಮೂರು ಚುನಾವಣೆಯಲ್ಲಿ ಲಾಡ್‌ ಪರ ಛಬ್ಬಿ ಕೆಲಸ ಮಾಡಿದ್ದರು. ಇನ್ನೂ 2013ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಉಪಚುನಾವಣೆಯಲ್ಲಿ ಛಬ್ಬಿ ಕಣಕ್ಕಿಳಿದಿದ್ದರು. ಆಗ ಛಬ್ಬಿ ಪರವಾಗಿ ಲಾಡ್‌ ಕೆಲಸ ಮಾಡಿದ್ದರು. ಹೀಗಾಗಿ ಈ ಇಬ್ಬರ ಜೋಡಿ ಮೂರ್ನಾಲ್ಕು ಚುನಾವಣೆಯಲ್ಲಿ ಒಟ್ಟಾಗಿಯೇ ಕೆಲಸ ಮಾಡಿದ್ದರು. ಕ್ಷೇತ್ರದಲ್ಲಿ ಇವರಿಬ್ಬರದು ಒಳ್ಳೆಯ ಸ್ನೇಹ ಎಂದು ಕೂಡ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಇತ್ತು.

ಯಾವಾಗಿಂದ ಕುಸ್ತಿ:

2018ರ ವಿಧಾನಸಭಾ ಚುನಾವಣೆಯಲ್ಲಿ ಲಾಡ್‌ ಸೋತ ಕೆಲ ದಿನ ಈ ಕ್ಷೇತ್ರದಲ್ಲಿ ಅವರು ಕಾಣಿಸಲಿಲ್ಲ. ಆಗ ಛಬ್ಬಿ ಕ್ಷೇತ್ರದಲ್ಲಿ ಓಡಾಡಲು ಶುರು ಮಾಡಿದರು. ಜತೆಗೆ ತಾವೇ ಅಭ್ಯರ್ಥಿಯೆಂದು ಕೂಡ ಹೇಳಿಕೊಂಡರು. ಪಕ್ಷ ಸಂಘಟನೆಯನ್ನೂ ಮಾಡಿದರು. ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಮಾಡಿದರು. ಕೊರೋನಾ ಸಮಯದಲ್ಲಿ ಜನರ ಸಂಕಷ್ಟಗಳನ್ನು ಆಲಿಸಿದರು.

ಇನ್ನೂ ಲಾಡ್‌ ಕೂಡ ತಾವೇನು ಕಮ್ಮಿಯಿಲ್ಲ ಎಂಬಂತೆ ಅವರು ಕೂಡ ಕೊರೋನಾ ಸಮಯದಲ್ಲಿ ಜನರಿಗೆ ಆಹಾರದ ಕಿಟ್‌ ವಿತರಣೆ ಸೇರಿದಂತೆ ವಿವಿಧ ಸೌಲಭ್ಯಗಳ ಹಂಚಿಕೆಯಲ್ಲಿ ತೊಡಗಿಸಿಕೊಂಡರು. ಜತೆಗೆ ಈ ಸಲವೂ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡರು. ಮೊದಲು ಇಬ್ಬರು ಒಟ್ಟೊಟ್ಟಿಗೆ ಕಾಣಿಸುತ್ತಿದ್ದ ದೋಸ್ತಿಗಳಲ್ಲಿ ಕ್ಷೇತ್ರ ವಶಪಡಿಸಿಕೊಳ್ಳುವ ವಿಷಯದಲ್ಲಿ ಬಿರುಕು ಉಂಟಾಯಿತು. ತಾವು ತಾವೇ ಅಭ್ಯರ್ಥಿಗಳೆಂದು ಪ್ರಚಾರವನ್ನೂ ಶುರು ಮಾಡಿದರು.

ಈ ಎಲ್ಲದರ ನಡುವೆ ಟಿಕೆಟ್‌ಗಾಗಿ ಇಬ್ಬರು ಪ್ರಯತ್ನಿಸಿದರು. ಆದರೆ ಹೈಕಮಾಂಡ್‌ ಲಾಡ್‌ಗೆ ಮಣೆ ಹಾಕಿತು. ಇದರಿಂದ ರೊಚ್ಚಿಗೆದ್ದ ಛಬ್ಬಿ, ಇವರ ಸಹವಾಸವೇ ಬೇಡ ಎಂದುಕೊಂಡು ಬಿಜೆಪಿಗೆ ಹಾರಿದರು. ಅಲ್ಲದೇ ಅಲ್ಲಿಂದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯೂ ಆದರು. ಇದೀಗ ಇಬ್ಬರು ದೋಸ್ತಿಗಳ ನಡುವೆ ಕಾಳಗ ಶುರುವಾದಂತಾಗಿದೆ.

ಇಬ್ಬರಿಗೂ ಅಪಾರ ಬೆಂಬಲಿಗರ ಸಂಖ್ಯೆಯೂ ಇದೆ. ಸಮಬಲ ಹೊಂದಿದವರೇ ಆಗಿದ್ದಾರೆ. ಇಬ್ಬರೂ ಅಕ್ಷರಶಃ ಜಟ್ಟಿಗಳಂತೆ ಕಾಳಗಕ್ಕಿಳಿದಿದ್ದಾರೆ. ಈ ಕಾರಣದಿಂದಾಗಿ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ಕಲಘಟಗಿ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಚುನಾವಣೆವರೆಗೂ ಕಾಯುವುದು ಅನಿವಾರ್ಯ.

 

ಬಿಜೆಪಿಯವರಿಗೆ ಮತ ಕೇಳಲು ಮುಖವಿಲ್ಲ: ಮಾಜಿ ಸಚಿವ ಸಂತೋಷ್‌ ಲಾಡ್‌

ಛಬ್ಬಿಗೆ ನಿಂಬಣ್ಣವರ ಸಾಥ್‌!

ಈ ನಡುವೆ ಬಿಜೆಪಿಯ ಹಾಲಿ ಶಾಸಕ ಸಿ.ಎಂ. ನಿಂಬಣ್ಣವರ ತಮಗೆ ಟಿಕೆಟ್‌ ತಪ್ಪಿದ್ದರಿಂದ ಕೊಂಚ ಅಸಮಾಧಾನವನ್ನೇನೋ ವ್ಯಕ್ತಪಡಿಸಿದ್ದರು. ಆದರೆ ಛಬ್ಬಿ ಭೇಟಿಯಾಗಿ ಅವರನ್ನು ಸಮಾಧಾನ ಪಡಿಸಿದ್ದಾರಂತೆ. ಹೀಗಾಗಿ ಪಕ್ಷೇತರರಾಗಿ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ ಕಲಘಟಗಿ ಕಾಳಗದಲ್ಲಿ ಛಬ್ಬಿಗೆ ನಿಂಬಣ್ಣವರ ಸಾಥ್‌ ನೀಡಲು ಮುಂದಾಗಿದ್ದಾರೆ. ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!