ಟಿಕೆಟ್‌ ಸಿಗದ ಹಿನ್ನೆಲೆ: ಗೂಳಿಹಟ್ಟಿ, ಸವದಿ, ಎಂಪಿಕೆ ಸೇರಿ ಐವರು ಬಿಜೆಪಿಗೆ ಗುಡ್‌ಬೈ

By Kannadaprabha News  |  First Published Apr 14, 2023, 11:01 AM IST

ಗೂಳಿಹಟ್ಟಿ ಶೇಖರ್‌, ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮೆ ಸಲ್ಲಿಕೆ, ನೆಹರು ಓಲೇಕಾರ, ಎಂ.ಪಿ ಕುಮಾರಸ್ವಾಮಿ, ಸವದಿ ರಾಜೀನಾಮೆ ಘೋಷಣೆ. 


ಬೆಂಗಳೂರು(ಏ.14):  ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನ ಹಿಂದೆಯೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಟಿಕೆಟ್‌ ವಂಚಿತ ಐವರು ನಾಯಕರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಹಾವೇರಿಯಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ನೆಹರು ಓಲೇಕಾರ, ಗುರುವಾರ ಬೆಂಬಲಿಗರ ಸಭೆ ನಡೆಸಿದ್ದು, ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂಡಿಗೆರೆಯಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದು, ಅವರು ಕೂಡ ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಇದೇ ವೇಳೆ, ತುಮಕೂರು ನಗರದಲ್ಲಿ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಸೊಗಡು ಶಿವಣ್ಣ ಗುರುವಾರ ರಾಜೀನಾಮೆ ನೀಡಿದ್ದಾರೆ. ಇ-ಮೇಲ್‌ ಮೂಲಕ ಅವರು ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷರಿಗೆ ಕಳಿಸಿದ್ದಾರೆ. ಇದೇ ವೇಳೆ, ಅಥಣಿಯಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು, ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಅವರು, ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

Tap to resize

Latest Videos

ಮುಖಂಡರ ಜತೆ ಮಾತುಕತೆಗೆ ಬೆಂಗಳೂರಿಗೆ ಬಂದ ಲಕ್ಷ್ಮಣ್ ಸವದಿ, ರಹಸ್ಯ ಸ್ಥಳದಲ್ಲಿ ಡಿಕೆಶಿ ಜತೆ ಮಾತುಕತೆ?

ಈ ಮಧ್ಯೆ, ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡು, ಚಿತ್ರದುರ್ಗ ಶಾಸಕ ಗೂಳಿಹಟ್ಟಿಶೇಖರ್‌ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅವರು ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!