Muda Case: ಇಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಪೊಲೀಸರ ಗ್ರಿಲ್‌!

By Kannadaprabha News  |  First Published Nov 6, 2024, 6:25 AM IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ. 


ಮೈಸೂರು (ನ.06): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ. ಲೋಕಾಯುಕ್ತ ಕಚೇರಿಗೆ ಬೆಳಗ್ಗೆ ತೆರಳಲಿರುವ ಸಿದ್ದರಾಮಯ್ಯ ಖುದ್ದು ವಿಚಾರಣೆಗೆ ಹಾಜರಾಗಲಿದ್ದಾರೆ. ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸುತ್ತಿರುವುದು ಇದೇ ಪ್ರಥಮ. ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು ಆಗಿದೆ.

ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಸಂಬಂಧ ಈ ಹಿಂದೆ ಬಿಡುಗಡೆಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬುಧವಾರದ ಪ್ರವಾಸ ಪಟ್ಟಿ ಪರಿಷ್ಕೃತಗೊಂಡಿದೆ. ಅದರಂತೆ ಮೈಸೂರಿಗೆ ಬೆಳಗ್ಗೆ 9.30ಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ ಅವರು, ನಂತರ ಮೈಸೂರು ಲೋಕಾಯುಕ್ತ ಕಚೇರಿಗೆ ತೆರಳಲಿದ್ದಾರೆ. ಸುಮಾರು ಎರಡೂವರೆ ಗಂಟೆ ವಿಚಾರಣೆಗಾಗಿ ಮೀಸಲಿಟ್ಟಿರುವ ಅವರು, ಆ ಬಳಿಕ ಮಧ್ಯಾಹ್ನ 12ಕ್ಕೆ ಚನ್ನಪಟ್ಟಣ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ವಿಚಾರಣೆ ನಡೆಯಲಿದ್ದು, ಇದಕ್ಕಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಈಗಾಗಲೇ ಹಲವು ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ.

Latest Videos

undefined

ವಕ್ಫ್‌ ವಿವಾದ: ಸಚಿವ ಜಮೀರ್‌ ವಿರುದ್ಧ ವರಿಷ್ಠರಿಗೆ ಕಾಂಗ್ರೆಸ್ ಶಾಸಕರಿಂದ ದೂರು

ಅಭಿಮಾನಿಗಳ ಪೂಜೆ: ಲೋಕಾಯುಕ್ತ ವಿಚಾರಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಮುಡಾ ಕೇಸ್‌ನಿಂದ ಮುಕ್ತಿ ಸಿಗಲಿ, ಸಿದ್ದರಾಮಯ್ಯಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದ್ದಾರೆ.

ಲೋಕಾ ಕಚೇರಿ ಸುತ್ತ ಬಿಗಿ ಭದ್ರತೆ, ರಸ್ತೆಗಳು ಬಂದ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿ ಸುತ್ತಮುತ್ತ ನಗರ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ನಗರದ ಕೃಷ್ಣ ವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆ ಜಂಕ್ಷನ್‌ನಲ್ಲಿರುವ ಲೋಕಾಯುಕ್ತ ಕಚೇರಿ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. 

ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

ಮುಖ್ಯಮಂತ್ರಿ ವಿರುದ್ಧದ ಪ್ರಕರಣ ಆಗಿರುವುದರಿಂದ ವಿಚಾರಣೆ ಯಾವ ರೀತಿ ಮಾಡುತ್ತಾರೆಂಬ ಅನುಮಾನವಿತ್ತು. ಈಗ ವಿಚಾರಣೆಗಾಗಿ ನೋಟಿಸ್ ನೀಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ನಡೆಯನ್ನು ಸ್ವಾಗತಿಸುತ್ತೇನೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೊದಲಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಮುಡಾ ಹಗರಣದ‌ ಪ್ರಕರಣದಿಂದ ನಾನು ಹಿಂದೆ ಸರಿಯಲ್ಲ. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ.
- ಸ್ನೇಹಮಯಿ ಕೃಷ್ಣ, ದೂರುದಾರ

click me!