ಸಚಿವ ತಿಮ್ಮಾಪುರ ರಾಜೀನಾಮೆಗೆ ನ.20ಕ್ಕೆ ಮದ್ಯ ಮಾರಾಟ ಬಂದ್‌

By Kannadaprabha News  |  First Published Nov 6, 2024, 4:49 AM IST

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ, ರಾಜ್ಯದ ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 


ಬೆಂಗಳೂರು (ನ.06): ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ, ರಾಜ್ಯದ ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮದ್ಯ ಮಾರಾಟಗಾರರು ಇದೀಗ ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಮತ್ತೊಂದೆಡೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಮದ್ಯ ಮಾರಾಟಗಾರರು ಪಟ್ಟು ಹಿಡಿದಿದ್ದು, ನ.20ರ ಡೆಡ್‌ಲೈನ್‌ ನೀಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ರು. ಲಂಚ ಪಡೆದಿದ್ದಾರೆ ಎಂದು ರಾಜ್ಯಪಾಲರಿಗೆ ಪ್ರತ್ಯೇಕ ದೂರೊಂದು ಸಲ್ಲಿಕೆಯಾಗಿದೆ.ಉಪ ಚುನಾವಣೆ ಸಮಯದಲ್ಲೇ ಇಲಾಖೆ ಮತ್ತು ಸಚಿವರ ವಿರುದ್ಧ ಕೇಳಿಬಂದ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದ್ದರೆ, ಸರ್ಕಾರಕ್ಕೆ ಇರಿಸುಮುರುಸು ತಂದಿದೆ.

Tap to resize

Latest Videos

undefined

ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್

ಭಾರೀ ಭ್ರಷ್ಟಾಚಾರ: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಮೈಸೂರಿನಲ್ಲಿ ಮಾತನಾಡಿದ ‘ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ’ ಅಧ್ಯಕ್ಷ ಎಸ್‌.ಗುರುಸ್ವಾಮಿ, ‘ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಭಾರೀ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಸನ್ನದುದಾರರಿಂದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಬಕಾರಿ ಇಲಾಖೆ ವಹಿಸಿಕೊಳ್ಳಬೇಕು. ಈ ಸಂಬಂಧ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಇದೇ ವೇಳೆ ಭ್ರಷ್ಟಾಚಾರದ ಬಗ್ಗೆ ನಾವು ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಮದ್ಯ ಮಾರಾಟಗಾರರ ಸಂಘ ಸ್ಪಷ್ಟನೆ ನೀಡಿದೆ.

ವರ್ಗಾವಣೆಯಲ್ಲಿ ತಿಮ್ಮಾಪುರ್‌ಗೆ 13 ಕೋಟಿ ರು. ಲಂಚ: ರಾಜ್ಯಪಾಲರಿಗೆ ದೂರುಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ 18 ಕೊಟಿ ರು. ಲಂಚ ಪಡೆಯಲಾಗಿದೆ. ಇದರಲ್ಲಿ 13 ಕೋಟಿ ರುಪಾಯಿಯನ್ನು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ನೀಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಜಿತ್‌ ಎಂಬುವರ ಹೆಸರಿನಲ್ಲಿ ರಾಜ್ಯಪಾಲರಿಗೆ ಇ ಮೇಲ್‌ ಮೂಲಕ ದೂರು ನೀಡಲಾಗಿದೆ. ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ 40- 50 ಲಕ್ಷ ರು., ಡಿವೈಎಸ್ಪಿಗಳ ವರ್ಗಾವಣೆಗೆ 30- 40 ಲಕ್ಷ ರು., ಅಬಕಾರಿ ಡಿಸಿಗಳಿಗೆ 2.50- 3 ಕೋಟಿ ರು. ಲಂಚ ಪಡೆಯಲಾಗಿದೆ. 

ಅಬಕಾರಿ ಸಚಿವರ ಕಚೇರಿಯಲ್ಲೇ ವರ್ಗಾವಣೆ ದಂಧೆ ನಡೆದಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ 18 ಕೋಟಿ ರು. ಸಂಗ್ರಹಿಸಲಾಗಿದೆ. ಇದರಲ್ಲಿ, 13 ಕೋಟಿ ರುಪಾಯಿಯನ್ನು ಸಚಿವ ತಿಮ್ಮಾಪುರ ಅವರಿಗೆ ನೀಡಲಾಗಿದೆ ಎಂಬ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಜೊತೆಗೆ, ಅಬಕಾರಿ ಸಚಿವರ ಆಪ್ತ ಸಹಾಯಕರು ಮತ್ತಿತರರಿಗೆ 50 ಲಕ್ಷದಿಂದ 1 ಕೋಟಿ ರು. ಸಂದಾಯವಾಗಿದೆ, ಒಂದೇ ದಿನದಲ್ಲಿ ವರ್ಗಾವಣೆ ಪಟ್ಟಿ ಕ್ಲಿಯರ್‌ ಮಾಡಲು ಮುಖ್ಯಮಂತ್ರಿಗಳ ಕಚೇರಿ ಸಿಬ್ಬಂದಿಗೂ ಕೋಟ್ಯಂತರ ರು. ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

ಈಗಾಗಲೇ ಶೇ.65ರಷ್ಟು ಎಂಆರ್‌ಪಿ, ಎಂಎಸ್‌ಐಎಲ್‌ ಮಳಿಗೆಗಳಿವೆ. ಅಧಿಕಾರಿಗಳು ವರ್ಗಾವಣೆ, ಪ್ರಮೋಷನ್‌ಗಾಗಿ ಸಿಕ್ಕಾಪಟ್ಟೆ ಹಣ ನೀಡುತ್ತಿದ್ದು, ಸನ್ನದುದಾರರಿಂದ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಅಬಕಾರಿ ಇಲಾಖೆಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಹೀಗಿರುವಾಗ ಪ್ರತ್ಯೇಕ ಸಚಿವರೇಕೆ? ಹಣಕಾಸು ಇಲಾಖೆ ಹೊಣೆ ಇರುವವರೇ ಅಬಕಾರಿ ಇಲಾಖೆಯನ್ನೂ ವಹಿಸಿಕೊಳ್ಳಲಿ.
- ಬಿ.ಗೋವಿಂದರಾಜ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ

click me!