ಎಚ್‌.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌!

Published : Nov 06, 2024, 05:12 AM IST
ಎಚ್‌.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್‌ ವಿರುದ್ಧ ಎಫ್‌ಐಆರ್‌!

ಸಾರಾಂಶ

ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಐಎಸ್‌ಡಿ ಎಡಿಜಿಪಿ ಚಂದ್ರಶೇಖರ್‌ರವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್‌ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಬೆಂಗಳೂರು (ನ.06): ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಐಎಸ್‌ಡಿ ಎಡಿಜಿಪಿ ಚಂದ್ರಶೇಖರ್‌ರವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್‌ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ತಿಂಗಳು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸಚಿವ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಹಾಗೂ ಅವರ ಆಪ್ತ ಸುರೇಶ್ ಬಾಬು ಸುಳ್ಳು ಆರೋಪ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಂಜಯನಗರ ಠಾಣೆಗೆ ಎಡಿಜಿಪಿ ದೂರು ನೀಡಿದ್ದರು. 

ಆಗ ಗಂಭೀರ ಸ್ವರೂಪವಲ್ಲದ (ಎನ್‌ಸಿಆರ್‌) ಪ್ರಕರಣ ಎಂದು ನಮೂದಿಸಿದ್ದ ಪೊಲೀಸರು, ಆನಂತರ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ಕೋರಿದ್ದರು. ಈಗ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿದ ಮೇರೆಗೆ ಮೂವರ ವಿರುದ್ಧವೂ ಸೋಮವಾರ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ತನ್ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಸಚಿವ ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ಮಧ್ಯೆ ನಡೆದಿದ್ದ ‘ಹಂದಿ ಜಂಗೀ ಕುಸ್ತಿ’ ನೇರ ಕಾನೂನು ಸಮರಕ್ಕೆ ಮುನ್ನುಡಿ ಬರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

ಎಚ್‌ಡಿಕೆ- ಎಡಿಜಿಪಿ ಜಟಾಪಟಿ: ಕೆಲ ದಿನಗಳ ಹಿಂದೆ ಅಕ್ರಮ ಗಣಿಗಾರಿಕೆ ತನಿಖೆ ವಿಚಾರವಾಗಿ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಎಚ್‌.ಡಿ.ಕುಮಾರಸ್ವಾಮಿ, ಹಿಮಾಚಲ ಪ್ರದೇಶದ ಕೇಡರ್ ಆಗಿದ್ದರೂ ನಕಲಿ ದಾಖಲೆ ಸಲ್ಲಿಸಿ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್‌ಐಟಿ ತಂಡದ ಸಹೋದ್ಯೋಗಿಗಳಿಗೆ ವೈಯಕ್ತಿಕ ಪತ್ರ ಬರೆದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ದಾರ್ಶನಿಕ ಬರ್ನಾಡ್ ಷಾ ಹೇಳಿಕೆ ಉಲ್ಲೇಖಿಸಿ ಹಂದಿ ಎನ್ನುವಂತೆ ಚಂದ್ರಶೇಖರ್‌ ಟೀಕಿಸಿದ್ದರು. ಈ ಹೇಳಿಕೆ ವಿರುದ್ಧ ಕೆರಳಿದ ಜೆಡಿಎಸ್‌ ನಾಯಕರು, ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಕೊಟ್ಟಿದ್ದರು.

ಎಡಿಜಿಪಿ ದೂರಿನಲ್ಲೇನಿದೆ?: ನಾನು ಐಎಸ್‌ಡಿ ಮತ್ತು ಗಣಿಗಾರಿಕೆ ಸಂಬಂಧ ಎಸ್‌ಐಟಿಯಲ್ಲಿ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆ ಎಸ್‌ಐಟಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಸಹ ನಡೆಸಿದ್ದು, ಇವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಾಧಾರಗಳು ಸಿಕ್ಕಿದ್ದರಿಂದ ಕಾನೂನು ಕ್ರಮ ಕೈಗೊಳ್ಳಲು ಅನುಮತಿಗೆ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಅನುಮತಿ ಕೋರಿದ ವಿಚಾರವಾಗಿ ಸೆ.28 ಮತ್ತು 29 ರಂದು ಸುದ್ದಿಗೋಷ್ಠಿ ನಡೆಸಿ ನನ್ನ ಬಗ್ಗೆ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಕುಮಾರಸ್ವಾಮಿ ಮಾಡಿದ್ದರು.

ಅಲ್ಲದೆ ನನ್ನನ್ನು ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಎಡಿಜಿಪಿ ದೂರಿದ್ದಾರೆ. ನನ್ನ ಕುಟುಂಬದವರ ವಿರುದ್ಧ ಸುಳ್ಳು ಆರೋಪ ಮಾಡಿ ಅವರಿಗೆ ತೊಂದರೆ ಕೊಡುವುದಾಗಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ನಾನು ಬೌರಿಂಗ್ ಆಸ್ಪತ್ರೆಯಲ್ಲಿ ಸುಳ್ಳು ವೈದ್ಯಕೀಯ ದಾಖಲೆಗಳನ್ನು ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರೆದಿರುವುದಾಗಿ ಹಾಗೂ ನಾನು ಲಂಚ ತೆಗೆದುಕೊಂಡಿರುವುದಾಗಿ ಕುಮಾರಸ್ವಾಮಿ ಆರೋಪಿಸಿದ್ದಾರೆ. 

ಅಲ್ಲದೆ ಸೆ.29ರಂದು ಸುದ್ದಿಗೋಷ್ಠಿ ನಡೆಸಿ ನನ್ನ ವಿರುದ್ಧ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ಅವರ ಆಪ್ತ ಸುರೇಶ್ ಬಾಬು ಸುಳ್ಳು ಆರೋಪ ಮಾಡಿದ್ದಾರೆ. ಇದಲ್ಲದೆ ನನ್ನ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿ ಬಳಿಕ ಆ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುವ ಮೂಲಕ ಬೆದರಿಕೆ ಹಾಕಿದ್ದಾರೆ. ಆಧಾರರಹಿತ ಆರೋಪಗಳ ಮೂಲಕ ನನ್ನ ತೇಜೋವಧೆ ಮಾಡಿದ್ದಲ್ಲದೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಜಯನಗರ ಠಾಣೆಗೆ ಎಡಿಜಿಪಿ ದೂರು ಸಲ್ಲಿಸಿದ್ದಾರೆ.

ವಿಜಯ್‌ ತಾತಾಕೇಸ್‌ ಜತೆ ಸಿಐಡಿ ತನಿಖೆಗೆ ವರ್ಗ?: ಕುಮಾರಸ್ವಾಮಿ ವಿರುದ್ಧ ಈಗಾಗಲೇ ರಿಯಲ್‌ ಎಸ್ಟೇಟ್‌ ಉದ್ಯಮಿ ವಿಜಯ್‌ ತಾತಾ ನೀಡಿರುವ ಜೀವ ಬೆದರಿಕೆ ದೂರು ಪೊಲೀಸ್‌ ಇಲಾಖೆಯಲ್ಲಿದೆ. ಈಗ ಎಡಿಜಿಪಿ ಚಂದ್ರಶೇಖರ್‌ ನೀಡಿರುವ ದೂರನ್ನೂ ಸೇರಿಸಿ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್

ನ್ಯಾಯಾಲಯದ ಆದೇಶದ ಮೇರೆಗೆ ಕೇಂದ್ರ ಸಚಿವರು ಸೇರಿದಂತೆ ಮೂವರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಚಾಮರಾಜ ಕ್ಷೇತ್ರಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿ ಬೇಡ, ನಾನು ಆಕ್ಷಾಂಕ್ಷಿ:ಪ್ರತಾಪ್ ಸಿಂಹ