ನನಗೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಟಿಕೆಟ್ ತಪ್ಪಿಸಿದರು ಎಂಬ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ ಎಂದಿದ್ದಾರೆ.
ಮೈಸೂರು (ಏ.04): ನನಗೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಟಿಕೆಟ್ ತಪ್ಪಿಸಿದರು ಎಂಬ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೆಂಕಟೇಶ್ ಅವರ ಹೇಳಿಕೆ ನೋಡಿ ಅವರ ಮೇಲೆ ಇದ್ದ ಎಲ್ಲ ಗೌರವವು ಮರೆಯಾಗಿದೆ. ದೇವೆಗೌಡರಿಗೆ ನಾಯಕರನ್ನ ಬೆಳೆಸಿ ಗೊತ್ತೆ ಹೊರತು, ತುಳಿದು ಗೊತ್ತಿಲ್ಲ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೆಗೌಡರು ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.
ನನಗೆ ಟಿಕೆಟ್ ಕೊಡಿಸಬೇಕು ಎಂದು ಒಂದು ಗಂಟೆ ಕಾಲ ಕಾದು ಅಮಿತ್ ಶಾ ಅವರ ಜೊತೆ ಪೋನ್ ನಲ್ಲಿ ಮಾತನಾಡಿದ್ದು ದೇವೆಗೌಡರು. ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರನ್ನು ಕೇಳಿದವರಲ್ಲಿ ದೇವೆಗೌಡರು ಪ್ರಮುಖರು ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ನವರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ: ನಾಳೆ ಇನ್ನು ಒಂದು ದಿನ ಅವಕಾಶ ಇದೆ. ಈಗಲಾದರೂ ನಿಮಗೆ ಅಭ್ಯರ್ಥಿ ಬದಲಾಯಿಸಲು ಅವಕಾಶ ಇದೆ. ಅದನ್ನು ಬೇಕಾದ್ರೆ ಬಳಸಿಕೊಳ್ಳಿ. ಕಾಂಗ್ರೆಸ್ ನವರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ ಎಂದು ಅವರು ಹೇಳಿದರು. ಚುನಾವಣೆ ಗೆಲ್ಲಲು ಮೊದಲು ಒಳ್ಳೆಯ ಅಭ್ಯರ್ಥಿ ಇರಬೇಕು. ನಿಮ್ಮ ಅಭ್ಯರ್ಥಿ ಈಗ ನಾನು ಒಕ್ಕಲಿಗ ಅಂತ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ.
ದೇವೇಗೌಡರು ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ರು ಎಂಬುದು ಜಗತ್ತಿನ ಎಂಟನೇ ಅದ್ಛುತ: ಎಚ್‌ಡಿಕೆ
ಆ ಪ್ರಮಾಣ ಪತ್ರ ಯಾವುದೋ ಕೆಎಸ್.ಓ.ಯು ಅಲ್ಲಿ ಇಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರನಾ. ಒಕ್ಕಲಿಗರನ್ನೆಲ್ಲ ಇಷ್ಟು ದಿನ ತುಚ್ಯವಾಗಿ ಬೈಯ್ದ ಹೊಲಸು ಬಾಯಿಯ ವ್ಯಕ್ತಿ ನಿಮ್ಮ ಅಭ್ಯರ್ಥಿ ಎಂದು ಅವರು ಟೀಕಿಸಿದರು. ಒಕ್ಕಲಿಗರು ಎಂದರೆ ಅವರಿಗೆ ನೇರವಂತಿಕೆ, ಗಡಸು ಸ್ವಭಾವ ಇರುತ್ತೆ. ನಿಮ್ಮ ಅಭ್ಯರ್ಥಿಗೆ ಈ ಯಾವುದಾದರು ಒಂದು ಲಕ್ಷಣ ಇದಿಯಾ. ಮೊದಲು ಅಭ್ಯರ್ಥಿ ಬದಲಾಯಿಸಿ ಆಮೇಲೆ ಗೆಲ್ಲುವುದಕ್ಕೆ ಒಕ್ಕಲಿಗರ ಕಾರ್ಡ್ ಫ್ಲೇ ಮಾಡುವಿರಂತೆ ಎಂದು ಅವರು ಹೇಳಿದರು.