'ಮನೆ ಬಾಗಿಲು ಕಾಯಿ..' ಎಂದು ಪಕ್ಷ ಹೇಳಿದ್ರೆ ದೇಶಕ್ಕಾಗಿ ಅದನ್ನೂ ಮಾಡ್ತೇನೆ: ಶಿವರಾಜ್‌ ಸಿಂಗ್‌ ಚೌಹಾಣ್‌

By Santosh NaikFirst Published Aug 20, 2022, 4:55 PM IST
Highlights

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರಹಾಕಲಾಗಿದೆ. ಸಂಸದೀಯ ಮಂಡಳಿಯಿಂದ ಹೊರಗುಳಿದಿರುವ ಕುರಿತು ಅವರು ಶನಿವಾರ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
 

ಭೋಪಾಲ್‌ (ಆ.20): ಬಿಜೆಪಿ ಸಂಸದೀಯ ಮಂಡಳಿಯಿಂದ ಹೊರಗುಳಿದ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ಈ ಕುರಿತಾಗಿ ಮಾತನಾಡಿದ ಅವರು, ನನಗೆ ಸಂಸದೀಯ ಮಂಡಳಿಯಲ್ಲಿ ಇರಲು ಅರ್ಹತೆ ಇದೆಯೇ ಅಥವಾ ಇಲ್ಲವೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ದೇಶದ ಹಿತಕ್ಕಾಗಿ ಚಿಂತನೆ ಮಾಡುವ ಪಕ್ಷ, ನನಗೆ ಮನೆಯ ಬಾಗಿಲು ಕಾಯುವ ಕೆಲಸ ನೀಡಿದರೂ ನಾನದನ್ನು ಮಾಡಲು ಸಿದ್ಧ. ಯಾಕೆಂದರೆ ನನಗೆ ದೇಶದ ಹಿತವಷ್ಟೇ ಮುಖ್ಯ. ನೀವು ಜೈತ್‌ನಲ್ಲಿ (ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ತವರು ಗ್ರಾಮ) ಉಳಿದುಕೊಳ್ಳುತ್ತೀರಾ ಎಂದು ಪಕ್ಷ ನನಗೆ ಕೇಳಿದರೆ, ಖಂಡಿತವಾಗಿ ನಾನು ಆ ಕೆಲಸವನ್ನೂ ಮಾಡುತ್ತೇವೆ. ಹಾಗೇನಾದರೂ ಪಕ್ಷ ನೀವು ಭೋಪಾಲ್‌ನಲ್ಲಿಯೇ ಉಳಿದುಕೊಳ್ಳಬೇಕು ಎಂದು ಹೇಳಿದರೆ, ನಾನು ಭೋಪಾಲ್‌ನಲ್ಲಿಯೇ ಇರುತ್ತೇವೆ. ರಾಜಕೀಯದಲ್ಲಿ ನನಗೆ ಎಂದಿಗೂ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ. ರಾಜಕೀಯದಲ್ಲಿ ಎಂದಿಗೂ ವೈಯಕ್ತಿಕ ಮಹತ್ವಾಕಾಂಕ್ಷೆ ಇರಬಾರದು ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ತನ್ನ ಸಂಸದೀಯ ಮಂಡಳಿಯನ್ನು ಪುನರ್‌ ರಚನೆ ಮಾಡಿತ್ತು. ಇದರಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ಹಿರಿಯ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೈಬಿಟ್ಟಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.

ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದು,  ಬಿಜೆಪಿ ದೊಡ್ಡ ಕುಟುಂಬ. ಬದಲಾವಣೆಯ ಹರಿವಿನಲ್ಲಿ ಕೆಲವು ವಿಚಾರಗಳು ಚಲಿಸುತ್ತಲೇ ಇರುತ್ತವೆ. ಕೆಲವೊಂದು ಅದರಿಂದ ಹೊರಬರುತ್ತವೆ. ಕೇಂದ್ರ ಮಟ್ಟದಲ್ಲಿ ದೊಡ್ಡ ತಂಡ ಕೆಲಸ ಮಾಡುತ್ತದೆ. ಯಾರು ಏನು ಕೆಲಸ ಮಾಡಬೇಕೆಂದು ಅದೇ ನಿರ್ಧಾರ ಮಾಡುತ್ತದೆ. ರಾಜ್ಯದ ಬಿಜೆಪಿಯಲ್ಲಿ ನಾವುಗಳು ನಿರ್ಧಾರ ಮಾಡುವಂತೆ, ರಾಷ್ಟ್ರಮಟ್ಟದಲ್ಲಿ ಇರುವ ಪಕ್ಷವು ಅದರ ನಿಟ್ಟಿನಲ್ಲಿ ಚಿಂತೆ ಮಾಡುತ್ತದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಂಸದೀಯ ಮಂಡಳಿಗೆ ಸೇರ್ಪಡೆ ಆಗಿರುವ ವ್ಯಕ್ತಿಗಳೆಲ್ಲರೂ ಅದಕ್ಕೆ ಅರ್ಹರಾದವರು. ಪಕ್ಷದ ಮಂಡಳಿಯನ್ನು ರಚನೆ ಮಾಡುವಾಗ, ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಹೀಗೆ ಎಲ್ಲಾ ವಿಭಾಗವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

News Hour: 2023ರ ಚುನಾವಣೆಗೆ ಅನಿವಾರ್ಯವಾದ್ರಾ ಬಿಎಸ್‌ ಯಡಿಯೂರಪ್ಪ!

ಬಿಜೆಪಿ ಆಗಸ್ಟ್ 17 ರಂದು ತನ್ನ ಸಂಸದೀಯ ಮಂಡಳಿಯನ್ನು ಪುನರ್ರಚಿಸಿತ್ತು, ಅದರಲ್ಲಿ ಕೆಲವು ಹೊಸ ಮುಖಗಳಿಗೆ ಸ್ಥಾನ ನೀಡಲಾಯಿತು, ಆದರೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೈಬಿಡಲಾಯಿತು. ಶಿವರಾಜ್‌ ಸಿಂಗ್‌ ಬಿಜೆಪಿಯಲ್ಲಿಯೇ ಅತ್ಯಂತ ಹಿರಿಯ ಮುಖ್ಯಮಂತ್ರಿ. ಇದೇ ಕಾರಣಕ್ಕಾಗಿ ಕಳೆದ 9 ವರ್ಷಗಳಿಂದ ಅವರು ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿ ಉಳಿದುಕೊಂಡಿದ್ದರು. ಈಗ ಅವರ ಬದಲಿಗೆ, ದಲಿತ ನಾಯಕ ಸತ್ಯನಾರಾಯಣ ಜತಿಯಾ ಅವರನ್ನು ಮಧ್ಯಪ್ರದೇಶದಿಂದ ಆಯ್ಕೆ ಮಾಡಲಾಗಿದೆ. ಆರ್‌ಎಸ್ಎಸ್‌ಗೆ ಆಪ್ತರಾಗಿರುವ ಜತಿಯಾ, ಉಜ್ಜಯನಿ ಕ್ಷೇತ್ರದಿಂದ ಏಳು ಬಾರಿ ಸಂಸದರಾದ ವ್ಯಕ್ತಿಯಾಗಿದ್ದಾರೆ. ಇವರನ್ನು ಬಿಜೆಪಿ ಒಮ್ಮೆ ರಾಜ್ಯಸಭೆಗೂ ಕಳುಹಿಸಿತ್ತು.

ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರಲು ನಿಮ್ಮ ಶ್ರಮ ಬೇಕು: ಬಿಎಸ್‌ವೈಗೆ ಹೇಳಿದ ಮೋದಿ

ಶಿವರಾಜ್‌ ಸಿಂಗ್‌ ಹೊರಬೀಳುವ ಸೂಚನೆ: ಇನ್ನೊಂದೆಡೆ ಸಂಸದೀಯ ಮಂಡಳಿಯಿಂದ ಹೊರಬಿದ್ದಿರುವ ಶಿವರಾಜ್‌ ಸಿಂಗ್, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದೂ ವರದಿಯಾಗಿತ್ತು. 2023ರ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೆ ಎಂದು ನಾವು ಅಂದಾಜು ಮಾಡಿದ್ದೆವು. ಅದರೆ, ಪಕ್ಷವೀಗ ರಾಷ್ಟ್ರ ರಾಜಕಾರಣದಲ್ಲೂ ಅವರಿಗೆ ದೊಡ್ಡ ಸ್ಥಾನ ನೀಡಲು ನಿರಾಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ' ಎಂದು ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಗೋವಿಂದ್‌ ಸಿಂಗ್‌ ಹೇಳಿದ್ದಾರೆ. ಅವರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. "ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿ ಇದ್ದಾರೆಯೇ? ಇಲ್ಲ. ಬೇರೆ ಯಾರಾದರೂ ಸಿಎಂ ಈ ಮಂಡಳಿಯಲ್ಲಿ ಇದ್ದಿದ್ದರೆ, ಬಹುಶಃ ಶಿವರಾಜ್‌ ಆತಂಕ ಪಡಬೇಕಾಗುತ್ತಿತ್ತು" ಎಂದು ಬಿಜೆಪಿ ವಕ್ತಾರ ದಿವ್ಯಾ ಗುಪ್ತಾ ಹೇಳಿದ್ದಾರೆ.

click me!