
ಮೈಸೂರು (ಏ.03): ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಉಚಿತ ಯೋಜನೆಗಳಿಂದ ಮನೆಗಳು ಹಾಳಾಗಿವೆ. ಗಂಡ - ಹೆಂಡತಿ ನಡುವೆ ಜಗಳಗಳು ಶುರುವಾಗಿವೆ. ನಿಮ್ಮ ಉಚಿತ ಯೋಜನೆಗೆ ಮಾನದಂಡ ರೂಪಿಸಿ. ಇದು ಹುಚ್ಚು ಸರ್ಕಾರ, ಯಾವ ಮಾನದಂಡ ಇಲ್ಲದೆ ಉಚಿತ ಯೋಜನೆಗಳು ಮೂರ್ಖತನದ್ದು. ವೈಯಕ್ತಿಕ ತೇವಲಿಗಾಗಿ ಉಚಿತ ಯೋಜನೆ ಮಾಡಿ ರಾಜ್ಯ ಹಾಳು ಮಾಡಿದ್ದೀರಾ, ರಾಜ್ಯದಲ್ಲಿ ಆರ್ಥಿಕ ಶಿಸ್ತಿಲ್ಲ. ಅರಾಜಕತೆ ಸೃಷ್ಟಿಯಾಗಿದೆ ಎಂದು ಟೀಕಿಸಿದರು.
ಜಾತಿಗಣತಿ ಜಾರಿಗೆ ಸಿದ್ದರಾಮಯ್ಯಗೆ ಧೈರ್ಯ ಇಲ್ಲ: ಜಾತಿಗಣತಿ ಜಾರಿಗೆ ಸಿದ್ದರಾಮಯ್ಯಗೆ ಧೈರ್ಯ ಇಲ್ಲ. ಜಾತಿ ಗಣಿತ ಮೇಲೆ ಬಜೆಟ್ ಮಾಡಬೇಕಿತ್ತು. ಸಿದ್ದರಾಮಯ್ಯಗೆ ಜಾತಿ ಗಣತಿ ಜಾರಿಗೆ ಗಟ್ಸ್ ಇಲ್ಲ ಎಂದು ಅವರು ಟೀಕಿಸಿದರು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ನಾನು, ರಮೇಶಕುಮಾರ್, ಸಿ.ಎಂ. ಇಬ್ರಾಹಿಂ. ಎಲ್ಲಾ ಯೋಜನೆಗಳನ್ನು ನಾವು ಬರೆದು ಕೊಟ್ಟಿದ್ದೆ ಹೊರತು ಸಿದ್ದರಾಮಯ್ಯನ ಐಡಿಯಾ ಅಲ್ಲ, ಕೂತುಕೊಂಡು ರಾಜ್ಯದ ಆಡಳಿತ ನಡೆಸಲು ಆಗಲ್ಲ. ನೀವು ಕೂತು ಕೊಂಡ ತಕ್ಷಣವೆ ಆಡಳಿತ ನಿಂತು ಹೋಗಿದೆ. ಮೊದಲು ವಿಧಾನಸಭೆ ಅಧಿವೇಶನಕ್ಕೆ 'ಯು' ಸರ್ಟಿಫಿಕೇಟ್ ಇತ್ತು. ಈಗ 'ಎ' ಸರ್ಟಿಫಿಕೇಟ್ ಕೊಡಬೇಕಿದೆ, ಇಂತಹ ಸ್ಥಿತಿ ಬರಬಾರದಿತ್ತು ಎಂದು ಅವರು ಕಿಡಿಕಾರಿದರು.
ಡಿಕೆಶಿ ಯಾಕೆ ಸಿಎಂ ಆಗಬಾರದು?: ಡಿ.ಕೆ. ಶಿವಕುಮಾರ್ ಯಾಕೆ ಸಿಎಂ ಆಗಬಾರದು? ಈ ಸರ್ಕಾರ ಬರಲು ಡಿ.ಕೆ. ಶಿವಕುಮಾರ್ ಕೊಡುಗೆ ಇಲ್ವಾ? ಡಿಕೆ ಈ ಸರ್ಕಾರ ಬರಲು ದುಡಿದಿಲ್ವಾ? ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಲೆ ಇಲ್ಲ. ಬೇರೆಯವರು ಕಟ್ಟಿದ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಬಂದು ಸೇರಿ ಕೊಂಡಿದ್ದಾರೆ ಅಷ್ಟೆ. ನಾನು ಸಿಎಂ ಆದೆ ನೀನು ಆಗಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಎಚ್. ವಿಶ್ವನಾಥ್ ತಿರುಗೇಟು ನೀಡಿದರು. ನಾನು ನಿನ್ನ ಕಾಂಗ್ರೆಸ್ ಗೆ ಕರೆದು ಕೊಂಡು ಬಾರದೆ ಇದ್ದಿದ್ದರೆ ನೀನು ಹೇಗೆ ಸಿಎಂ ಆಗ್ತಿದ್ದೆ? ನಾನು ಸಿಎಂ ಆಗಿಲ್ಲದೆ ಇರಬಹುದು. ಸಚಿವನಾಗಿಯೆ ಒಳ್ಳೆ ಕೆಲಸ ಮಾಡಿದ್ದೇನೆ. ಶಾಲೆಗಳಿಗೆ ಬಿಸಿ ಊಟ ಮಾಡಿಸಿದ್ದು ನಾನು, ಶಾಲೆಗಳ ಅಭಿವೃದ್ಧಿಗೆ ದುಡಿದವನು ನಾನು. ಯಶಸ್ವಿನಿ ಯೋಜನೆ ಮಾಡಿಸಿದ್ದು ನಾನು. ನೀನು ಸಿಎಂ ಆಗಿ ಏನೂ ಮಾಡಿದ್ದಿಯಾ ಹೇಳು? ಎಂದು ಪ್ರಶ್ನಿಸಿದರು.
ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು: ಡಿ.ಕೆ.ಶಿವಕುಮಾರ್
ನಮ್ಮ ಬಿಜೆಪಿಗೆ ಆಡಳಿತವು ಗೊತ್ತಿಲ್ಲ: ನಮ್ಮ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ. ಪ್ರತಿಪಕ್ಷವಾಗಿಯೂ ಗೊತ್ತಿಲ್ಲ. ಆಡಳಿತ ಪಕ್ಷವನ್ನು ಕೇಳುವ ತಾಕತ್ ವಿರೋಧ ಪಕ್ಷಕ್ಕೆ ಇಲ್ಲ. ಯಡಿಯೂರಪ್ಪ - ಸಿದ್ದರಾಮಯ್ಯ ನಡುವಿನ ಹೊಂದಾಣಿಕೆಯಿಂದ ವಿಜಯೇಂದ್ರ ಗೆದ್ದಿರೋದು. ಅಲ್ಲಿಂದಲೇ ಹೊಂದಾಣಿಕೆ ಶುರುವಾಗಿದೆ. ನಾನು ಕಾಂಗ್ರೆಸ್ ನ ಹಿರಿಯ ನಾಯಕ.ಬಿಜೆಪಿಯ ಕಿರಿಯ ನಾಯಕ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.