ಮೋದಿ ಅವರ ಭಾಷಣದಲ್ಲಿ ಬರೀ ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ನಮ್ಮ ಬಳಿ 3 ಸಾವಿರ ವಿಡಿಯೋ ತುಣುಕುಗಳಿವೆ. ಕಾಲ ಬಂದಾಗ ಹಂತಹಂತವಾಗಿ ಅವುಗಳನ್ನು ಬಿಡುಗಡೆಗೊಳಿಸುತ್ತೇವೆ. ಬಿಜೆಪಿಯವರು ಎಂದಿಗೂ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳ ಮೇಲೆ ಚುನಾವಣೆ ಎದುರಿಸಿಲ್ಲ. ಬರೀ ಪಾಕಿಸ್ತಾನ, ಹಿಂದು, ಮುಸ್ಲಿಂ ಎಂಬ ಮೂರು ಅಂಶಗಳ ಮೇಲೆಯೇ ಚುನಾವಣೆಗೆ ಹೋಗುತ್ತಾರೆ: ಸಚಿವ ಸಂತೋಷ ಲಾಡ್
ಹುಬ್ಬಳ್ಳಿ(ಅ.29): ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲೇ ಒಂಬತ್ತು ವರ್ಷ ಕಳೆದಿದ್ದಾರೆ. ಇಂದಿಗೂ ಸುಳ್ಳಿನಿಂದಲೇ ಜನರಿಗೆ ಮೋಸ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಶನಿವಾರ ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹು-ಧಾ ಮಹಾನಗರ, ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿ, ಬ್ಲಾಕ್ ಅಧ್ಯಕ್ಷರ ಹಾಗೂ ಮುಂಚೂಣಿ ಘಟಕ, ಸೆಲ್, ವಿಭಾಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
undefined
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲ್ಲ: ಸಚಿವ ಸಂತೋಷ್ ಲಾಡ್
ಮೋದಿ ಅವರ ಭಾಷಣದಲ್ಲಿ ಬರೀ ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ನಮ್ಮ ಬಳಿ 3 ಸಾವಿರ ವಿಡಿಯೋ ತುಣುಕುಗಳಿವೆ. ಕಾಲ ಬಂದಾಗ ಹಂತಹಂತವಾಗಿ ಅವುಗಳನ್ನು ಬಿಡುಗಡೆಗೊಳಿಸುತ್ತೇವೆ. ಬಿಜೆಪಿಯವರು ಎಂದಿಗೂ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳ ಮೇಲೆ ಚುನಾವಣೆ ಎದುರಿಸಿಲ್ಲ. ಬರೀ ಪಾಕಿಸ್ತಾನ, ಹಿಂದು, ಮುಸ್ಲಿಂ ಎಂಬ ಮೂರು ಅಂಶಗಳ ಮೇಲೆಯೇ ಚುನಾವಣೆಗೆ ಹೋಗುತ್ತಾರೆ. ಈ ಕುರಿತು ಕಾರ್ಯಕರ್ತರು ಜನರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಬಿಜೆಪಿಯವರು ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುತ್ತಿದ್ದಾರೆ. ಖರೀದಿ ಮಾಡಿದರೆ ತಾನೆ ಸರ್ಕಾರ ಬೀಳುವುದು. ಲೆಕ್ಕಾಚಾರದ ಪ್ರಕಾರ ಶಾಸಕರಿಗೆ ₹50 ಕೋಟಿ ಕೊಡುವ ಆಮಿಷ ತೋರಿಸುತ್ತಿದ್ದಾರಂತೆ. ₹ 50 ಕೋಟಿ ಅಲ್ಲ ₹100 ಕೋಟಿ ಕೊಟ್ಟರೂ ನಮ್ಮ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದರು.
ರಾಹುಲ್ ಬುದ್ದನ ಅವತಾರ:
ಕಳೆದ ಹತ್ತು ವರ್ಷಗಳಿಂದ ಬಿಜೆಪಿಯವರು ರಾಹುಲ್ ಗಾಂಧಿ ಅವರಿಗೆ ಏನೆಲ್ಲ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ದೇಶದ ಜನತೆಗೆ ಗೊತ್ತು. ರಾಹುಲ್ ಅವರು ಬುದ್ಧನ ಅವತಾರವಿದ್ದಂತೆ. ಬಿಜೆಪಿಯವರು ನೀಡಿದ ಕಿರುಕುಳವನ್ನು ಮೆಟ್ಟಿನಿಂತು ಇಂದು ಒಬ್ಬ ಮಹಾನ್ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರ ನಡೆಸಿದ 70 ವರ್ಷಗಳು ಅಂದರೆ, 2014ರ ವೇಳೆಗೆ ದೇಶದ ಸಾಲ ₹55 ಲಕ್ಷ ಕೋಟಿ ಇತ್ತು. ಆದರೆ, ಈಗ ದೇಶದ ಸಾಲ ₹ 165 ಲಕ್ಷ ಕೋಟಿಯಾಗಿದೆ. ಈ ಕುರಿತು ಬಿಜೆಪಿಯವರು ಮಾತನಾಡಲಿ. ಪುಲ್ವಾಮಾ ದಾಳಿಯ ಕುರಿತು ಇಂದು ಎಲ್ಲೆಡೆ ಚರ್ಚಿಸಲಾಗುತ್ತಿದೆ. 300 ಕೆಜಿ ಆರ್‌ಡಿಎಕ್ಸ್ ಹೊತ್ತ ವಾಹನವೊಂದು ದೇಶದಲ್ಲಿ ಹೇಗೆ ಬಂದಿತು. ಈ ಕುರಿತು ಕೇಂದ್ರ ಸ್ಪಷ್ಟನೆ ನೀಡುತ್ತಿಲ್ಲ. ಮಾಧ್ಯಮದವರೂ ಇದರ ಕುರಿತು ಚಕಾರ ಎತ್ತದೇ ಇರುವುದು ದುರ್ದೈವದ ಸಂಗತಿ ಎಂದರು.
ಮುಂಬರುವ 2024ರ ಲೋಕಸಭಾ ಚುನಾವಣೆ ಅಂದುಕೊಳ್ಳುವಷ್ಟು ಸುಲಭವಿಲ್ಲ. ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕು. ಬಿಜೆಪಿ ಹೇಳಿರುವ ಸುಳ್ಳುಗಳ ಹಾಗೂ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮನೆಮನೆಗೆ ತಿಳಿಸುವ ಕಾರ್ಯ ಮಾಡಿ. ಪಕ್ಷದಲ್ಲಿ ಸಕ್ರಿಯ ಚಟುವಟಿಕೆಗಳಲ್ಲಿ ಇಲ್ಲದ ಕಾರ್ಯಕರ್ತರನ್ನು ಕೈಬಿಟ್ಟು ಸಕ್ರೀಯವಾಗಿರುವವರನ್ನು ನೇಮಕ ಮಾಡುವಂತೆ ಜಿಲ್ಲಾಧ್ಯಕ್ಷರಿಗೆ ಲಾಡ್ ಸೂಚನೆ ನೀಡಿದರು.
ಬಿಜೆಪಿದು ಹೆದರಿಸುವ ತಂತ್ರ:
ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್ ಮಾತನಾಡಿ, ಬಿಜೆಪಿದು ಬರೀ ಹೆದರಿಸುವ ತಂತ್ರ. ಚುನಾವಣೆ ಹೊಸ್ತಿಲಲ್ಲಿ ಇಡಿ, ಐಟಿ ಮೂಲಕ ಹೆದರಿಸುವ ತಂತ್ರ ನಡೆಯುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಹೀಗೆ ಮಾಡುವುದು ಸರಿಯಲ್ಲ. ಹೆದರಿಕೆ ಮೂಲಕ ಸರ್ಕಾರ ನಡೆಸಿದರೆ ಮುಂದೆ ವಿಫಲವಾಗುತ್ತದೆ ಎಂಬ ಅರಿವು ಬಿಜೆಪಿಯವರಿಗಿರಲಿ. ರಾಜ್ಯದಲ್ಲಿ ಕಾಂಗ್ರೆಸ್ ಗಟ್ಟಿಮುಟ್ಟಾಗಿ ಬೆಳೆಯುತ್ತಿದೆ ಎಂದರು.
ಪಕ್ಷ ಸಂಘಟನೆಗೆ ಶಿಸ್ತು ಮುಖ್ಯ. ಕಾರ್ಯಕರ್ತರು ಈ ಕುರಿತು ಹೆಚ್ಚಿನ ಜಾಗೃತಿ ಹೊಂದಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ಕಾರವು ಉತ್ತಮ ಆಡಳಿತ ನೀಡುತ್ತಿದೆ. ನಾವು 5 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇರಲಿಲ್ಲ. ಗ್ಯಾರಂಟಿ ಜಾರಿಯಿಂದಾಗಿ ಬಿಜೆಪಿಯಲ್ಲಿ ನಡುಕ ಶುರುವಾಗಿದೆ ಎಂದರು.
ಸರ್ಕಾರದ ವಿರುದ್ಧದ ಎಲ್ಲ ಆರೋಪಗಳನ್ನೂ ಸಾಬೀತುಪಡಿಸಲಿ- ಸಂತೋಷ್ ಲಾಡ್
ಲೋಕಸಭಾ ಚುನಾವಣೆಗೆ ದಿಕ್ಸೂಚಿ:
ತೆಲಂಗಾಣ, ರಾಜಸ್ಥಾನ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಸ್ಥಾನ ಪಡೆಯಲಿದೆ. ರಾಜ್ಯದಲ್ಲಿ ಉಂಟಾದ ಕಾಂಗ್ರೆಸ್ಸಿನ ಅಲೆಯು ಇಡೀ ದೇಶದಲ್ಲಿಯೇ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹಾಗಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ಹಲವರು ಮಾತನಾಡಿದರು. ಐ.ಜಿ. ಸನದಿ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಸದಾನಂದ ಡಂಗನವರ, ಸಾಕೀರ ಸನದಿ, ಮಹೇಂದ್ರ ಸಿಂಘಿ, ನವೀದ ಮುಲ್ಲಾ, ಮಲ್ಲಿಕಾರ್ಜುನ ಸಾಹುಕಾರ ಸೇರಿದಂತೆ ಹಲವರಿದ್ದರು.