
ಮಂಗಳೂರು(ಅ.29): ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದುತ್ವ ಪರವಾದ ಸಂಘಟನೆಗಳ ವಿರುದ್ಧ ವಿನಾಕಾರಣ ಕೇಸು ದಾಖಲಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಿಸಿ ಅವರ ಹಕ್ಕುಗಳಿಗೆ ದಿಗ್ಬಂಧನ ವಿಧಿಸಲಾಗುತ್ತಿದೆ. ಕೋಲಾರದಲ್ಲಿ ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ಸಂಸದರನ್ನು ಪೊಲೀಸ್ ವರಿಷ್ಠಾಧಿಕಾರಿ ಹೊರಗೆ ಕಳುಹಿಸಿದ ವಿದ್ಯಮಾನ ನಡೆದಿದೆ. ದ.ಕ.ದ ಬೆಳ್ತಂಗಡಿಯಲ್ಲಿ ಅಲ್ಲಿನ ಶಾಸಕರು ಜನಸಾಮಾನ್ಯ ಹಾಗೂ ರೈತರ ಪರ ಧ್ವನಿ ಎತ್ತಿದಾಗ ಅವರ ವಿರುದ್ಧವೇ ಕೇಸು ದಾಖಲಿಸಿ ಹೋರಾಟವನ್ನು ದಮನಿಸುವ ಕೆಲಸ ಮಾಡಲಾಗಿದೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಾತ್ರಕ್ಕೆ ಶಾಸಕರ ವಿರುದ್ಧವೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಶಾಸಕರಿಗೇ ಈ ಗತಿಯಾದರೆ, ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರಿ ಕಾಂಗ್ರೆಸ್ ನಾಯಕರಿಗೆ ತಿಹಾರ್ ಜೈಲು ಸಿದ್ಧ: ನಳಿನ್ ಕುಮಾರ್ ಕಟೀಲ್
ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದು, ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿಯವರ ಮೂರು ಪ್ರತ್ಯೇಕ ತಂಡಗಳಿವೆ. ಅವರವರೇ ಡಿನ್ನರ್ ಪಾರ್ಟಿ ಇಟ್ಟುಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ರೆಸಾರ್ಟ್ ರಾಜಕಾರಣ ನಡೆಸಿದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಸರ್ಕಾರ ಆಂತರಿಕ ಜಗಳದಿಂದಲೇ ಬಿದ್ದು ಹೋಗುತ್ತದೆ ಎಂದು ಟೀಕಿಸಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿ ನನ್ನ ವಿರುದ್ಧ ಆರೋಪಗಳಿದ್ದರೆ, ಸಂಬಂಧಿಸಿದವರಿಗೆ ದೂರು ನೀಡುವಂತೆ ಆಗಲೇ ಸೂಚಿಸಿದ್ದೇನೆ. ಆರೋಪಕ್ಕೆ ಒಳಗಾದವರೇ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದಿದ್ದಾರೆ. ಬೇಕಾದರೆ ತನಿಖೆ ನಡೆಸಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.