ಪ್ರಸ್ತುತ ಪಂಚ ರಾಜ್ಯಗಳ ಚುನಾವಣೆ ಸಮಯದಲ್ಲಿ ಇಡಿ ದಾಳಿ ಮಾಡಿರುವ ತಪ್ಪಿನ ಅರಿವು ಚುನಾವಣಾ ಫಲಿತಾಂಶ ನಂತರ ಕೇಂದ್ರ ಸರ್ಕಾರಕ್ಕಾಗಲಿದೆ ಎಂದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜಪುನ ಖರ್ಗೆ
ಕಲಬುರಗಿ(ಅ.29): ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಹಾಗೂ ಮುಖ್ಯಮಂತ್ರಿ ಪುತ್ರನ ಮನೆ ಮೇಲೆ ಇಡಿ ದಾಳಿ ನಡೆಸುತ್ತಿರುವುದನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜಪುನ ಖರ್ಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪಂಚ ರಾಜ್ಯಗಳ ಚುನಾವಣೆ ಸಮಯದಲ್ಲಿ ಇಡಿ ದಾಳಿ ಮಾಡಿರುವ ತಪ್ಪಿನ ಅರಿವು ಚುನಾವಣಾ ಫಲಿತಾಂಶ ನಂತರ ಕೇಂದ್ರ ಸರ್ಕಾರಕ್ಕಾಗಲಿದೆ ಎಂದರು.
ಕಾಂಗ್ರೆಸ್ ಇಡಿ ಹಾಗೂ ಐಟಿ ಸೇರಿ ಇತರ ಯಾವುದೇ ದಾಳಿಗಳಿಗೆ ಹೆದರುವುದಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವ ನೆಲೆಗಟ್ಟಿನ ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತದೆ. ಪ್ರಜಾಸತ್ತಾತ್ಮಕ ನೆಲೆ ಆಧಾರದ ಮೇಲೆ ಪಕ್ಷ ಚುನಾವಣೆ ಎದುರಿಸಲಿದೆ. ಚುನಾವಣಾ ಫಲಿತಾಂಶ ನಂತರ ಕೇಂದ್ರ ಸರ್ಕಾರಕ್ಕೆ ತಪ್ಪಿನ ಅರಿವಾಗುತ್ತದೆ ಎಂದರು.
ಪ್ರಿಯಾಂಕ್‌ರದ್ದು ಬಾಲಿಶತನದ ವರ್ತನೆ: ಸಂಸದ ಉಮೇಶ್ ಜಾಧವ್ ಗೇಲಿ
ಪಂಚರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಈಗಾಗಲೇ ಒಂದು ಹಂತದ ಪ್ರಚಾರ ಕೈಗೊಳ್ಳಲಾಗಿದೆ. ಎಲ್ಲ ಕಡೆ ಉತ್ತಮ ವಾತಾವರಣ ಕಂಡಿದೆ. ಅನೇಕ ಸವಾಲಿನ ನಡುವೆ ಈ ಹಿಂದೆ ಅನೇಕ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದೆ. ಈಗಲೂ ಅಂತಹ ಸಾಧನೆ ತೋರುವ ವಿಶ್ವಾಸವಿದೆ ಎಂದರು.
ಸವಾಲಿನ ನಡುವೆ ತಾವು ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ತಮ್ಮ ರಾಜಕೀಯ ಜೀವನುದುದ್ದಕ್ಕೂ ತಮಗೆ ವಹಿಸಿಕೊಟ್ಟ ಸಚಿವ ಸ್ಥಾನ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ವಿಪಕ್ಷ ನಾಯಕ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸವಾಲುಗಳನ್ನು ಎದುರಿಸಿಯೇ ನಿಭಾಯಿಸಲಾಗಿದೆ ಎಂದು ಡಾ. ಖರ್ಗೆ ವಿವರಣೆ ನೀಡಿದರು.