
ಬೆಂಗಳೂರು(ಡಿ.12): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಹೋರಾಟಕ್ಕೆ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಭೂಸುಧಾರಣಾ ಕಾಯ್ದೆ ವಿರುದ್ಧ ರೈತರ ಹೋರಾಟವು ಕಾಂಗ್ರೆಸ್ ಪ್ರೆರೇಪಿತವಾಗಿದೆ. ಎಲ್ಲ ಕಡೆಯೂ ಸೋಲನುಭವಿಸಿ ಕೆಲಸವಿಲ್ಲದೆ ಕಾರಣ ಕಾಂಗ್ರೆಸ್ ನಾಯಕರು ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಿಜೆಪಿಯದ್ದಲ್ಲ, ಬದಲಿಗೆ ಕಾಂಗ್ರೆಸ್‌ನ ಕೂಸಾಗಿದೆ. 2014ರಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿದ್ದ ವೇಳೆ ಭೂ ಸುಧಾರಣೆ ಕಾಯ್ದೆಯಲ್ಲಿನ 79 ಎ, ಬಿ ಕಲಂ ಅನ್ನು ತಿದ್ದುಪಡಿಗೆ ಮುಂದಾಗಿತ್ತು. ಈಗ ವಿನಾಕಾರಣ ವಿರೋಧಿಸಲಾಗುತ್ತಿದೆ. ಕಾಯ್ದೆಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ರೈತರಿಗೆ ಅನುಕೂಲವಾಗುವಂತೆ ಕಾಯ್ದೆಯನ್ನು ರೂಪಿಸಲಾಗಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಳುವವನೆ ಭೂಮಿಯ ಒಡೆಯ ತತ್ವವನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ವಾಸ್ತವಾಂಶ ತಿಳಿದುಕೊಳ್ಳದೆ ಮಾತನಾಡುತ್ತಿದ್ದಾರೆ. ಉಳುವವನೆ ಭೂಮಿಯ ಒಡೆಯ ತತ್ವವೇ ಬೇರೆಯೇ, ಕಾಯ್ದೆಯೇ ಬೇರೆಯಾಗಿದೆ. ಉಳುವವನೆ ಭೂಮಿಯ ಒಡೆಯ ಎಂಬ ತತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗೇಣಿದಾರರಿಗೆ ಒಡೆತನ ನೀಡುವ ಕಲಂಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಮೊದಲು ಕಾಯ್ದೆಯ ಪ್ರಕಾರ ರೈತರು ತಮ್ಮ ಜಮೀನನ್ನು ಮಾರಾಟ ಮಾಡುವ ಸಾಧ್ಯವಿರಲಿಲ್ಲ. ಆದರೆ, ಈಗ ಆತನ ಸ್ವಂತ ಜಮೀನನ್ನು ಮಾರಾಟ ಮಾಡುವ ಅವಕಾಶ ಸಿಕ್ಕಿದೆ. ಮಧ್ಯವರ್ತಿಗಳ ಕಾಟ ಇಲ್ಲದೆ ಜಮೀನು ಮಾರಾಟ ಮಾಡಬಹುದಾಗಿದೆ ಎಂದು ವಿವರಿಸಿದರು.
'ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ'
ನಿಯಮಗಳು:
ಐದು ಜನರ ಕುಟುಂಬಕ್ಕೆ ಗರಿಷ್ಠ ಮಿತಿ 10 ಯೂನಿಟ್ ಜಮೀನು ಇದ್ದು, ಇದರಲ್ಲಿ ಯಾವುದೇ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಎ ವರ್ಗದಲ್ಲಿ ಭತ್ತ ಬೆಳೆಯನ್ನು ವರ್ಷಕ್ಕೆ 2 ಬಾರಿ ತೆಗೆಯುವ ಭೂಮಿಯನ್ನು 13 ಎಕರೆ ಮಾತ್ರ ಹೊಂದಿರಬೇಕು. ಬಿ ವರ್ಗದಲ್ಲಿ ಭತ್ತ ಬೆಳೆಯನ್ನು ವರ್ಷಕ್ಕೆ ಒಮ್ಮೆ ಮಾತ್ರ ಬೆಳೆಯುವ ಭೂಮಿಯನ್ನು 15 ಎಕರೆಯನ್ನು ಹೊಂದಿರಬೇಕು. ಮಳೆಯಾಧಾರಿತ ಖುಷ್ಕಿ ಭೂಮಿ 54 ಎಕರೆ ಹೊಂದಿರುವಬೇಕು ಎಂದು ಹೇಳಲಾಗಿದೆ. ಎ ವರ್ಗದ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ. ಕೈಗಾರಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಇನ್ನು, ದಲಿತರ ಜಮೀನನ್ನು ಯಾರು ಸಹ ಖರೀದಿ ಮಾಡುವಂತಿಲ್ಲ ಎಂದರು.
ಯಾರು ಬೇಕಾದರೂ ಭೂಮಿ ಖರೀದಿಸಲು ಅವಕಾಶ ನೀಡಿರುವುದರಿಂದ ಯುವಜನಾಂಗವು ಕೃಷಿಯತ್ತ ಹೆಚ್ಚಿನ ಒಲವು ತೋರಲು ಸಾಧ್ಯವಾಗುತ್ತಿದೆ. ಕಾಂಗ್ರೆಸ್ ಈ ಕಾಯ್ದೆಗೆ ಮೂರು ಬಾರಿ ತಿದ್ದುಪಡಿ ಮಾಡಿದೆ. ಆದಾಯ ಮಿತಿಯನ್ನು 1990ರಲ್ಲಿ 12 ಸಾವಿರ ರು.ನಿಂದ 50 ಸಾವಿರ ರು.ಗೆ ಹೆಚ್ಚಳ ಮಾಡಿತು. 1995ರಲ್ಲಿ 50 ಸಾವಿರ ರು.ನಿಂದ 2 ಲಕ್ಷ ರು.ಗೆ ಹೆಚ್ಚಳ ಮಾಡಲಾಯಿತು. ತದನಂತರ 2015ರಲ್ಲಿ 2 ಲಕ್ಷ ರು.ನಿಂದ 25 ಲಕ್ಷ ರು.ಗೆ ಹೆಚ್ಚಳ ಮಾಡಿತು. ಆದರೆ, ಬಿಜೆಪಿ ಸರ್ಕಾರವು ಈ ಆದಾಯ ಮಿತಿಯನ್ನು ತೆಗೆದು ಹಾಕಿದೆ. ಇದರಿಂದ ಜಮೀನು ಖರೀದಿ ಮಾಡಲು ಅನುಕೂಲವಾಗಲಿದೆ. ಭೂ ಸುಧಾರಣೆ ಕಾಯ್ದೆ 79ಎ ಮತ್ತು ಬಿ ರಡಿ 1,76189 ಎಕರೆ ಕೃಷಿ ಜಮೀನಿಗೆ ಸಂಬಂಧಪಟ್ಟಂತೆ ಒಟ್ಟು 83,171 ಪ್ರಕರಣಗಳು ದಾಖಲಾಗಿದ್ದು, ಶೇ.2ರಷ್ಟುಭೂಮಿಯನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ 12,231 ಪ್ರಕರಣಗಳು ಬೇರೆ ಬೇರೆ ಮಟ್ಟದ ಪ್ರಾಧಿಕಾರದಲ್ಲಿ ಬಾಕಿ ಇದ್ದವು ಎಂದು ಸಚಿವರು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.