ಸರ್ಕಾರ-ಸಭಾಪತಿಗಳ ಮಧ್ಯೆ ತಿಕ್ಕಾಟ: ಸ್ಪೀಕರ್‌ ಪದಚ್ಯುತಿಗೆ ಮುಹೂರ್ತ ಫಿಕ್ಸ್‌?

Kannadaprabha News   | Asianet News
Published : Dec 12, 2020, 09:26 AM ISTUpdated : Dec 12, 2020, 09:48 AM IST
ಸರ್ಕಾರ-ಸಭಾಪತಿಗಳ ಮಧ್ಯೆ ತಿಕ್ಕಾಟ: ಸ್ಪೀಕರ್‌ ಪದಚ್ಯುತಿಗೆ ಮುಹೂರ್ತ ಫಿಕ್ಸ್‌?

ಸಾರಾಂಶ

ಸದನ ಮುಂದೂಡಿಕೆ ವಿರುದ್ಧ ಗೌರ್ನರ್‌ಗೆ ಬಿಜೆಪಿ ದೂರು| ಡಿ. 15ಕ್ಕೆ ಸದನ ನಡೆಸಲು ಸೂಚನೆ| ಪತ್ರ ಬರೆದು ಸೂಚನೆ ಕೊಟ್ಟ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ಪರಿಷತ್ತಿನ ಕಾರ್ಯದರ್ಶಿಗಳು| 

ಬೆಂಗಳೂರು(ಡಿ.12): ವಿಧಾನಪರಿಷತ್‌ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆ ನಡೆಸುವ ಸಂಬಂಧ ಆಡಳಿತಾರೂಢ ಬಿಜೆಪಿ ಸದಸ್ಯರು ಶುಕ್ರವಾರ ರಾಜ್ಯಪಾಲರ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈ ತಿಂಗಳ 15ರಂದು ಕಲಾಪ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ಪರಿಷತ್ತಿನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ಕೊಟ್ಟಿದ್ದಾರೆ.

ಸರ್ಕಾರ ನಿಗದಿ ಮಾಡಿದ ಕಾರ್ಯಕಲಾಪಗಳಂತೆ ಈ ತಿಂಗಳ 15ರವರೆಗೆ ವಿಧಾನಪರಿಷತ್ತಿನ ಕಲಾಪ ನಡೆಸಬೇಕಿತ್ತು. ಕಲಾಪ ಸಲಹಾ ಸಮಿತಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದರಿಂದ 15ರವರೆಗೆ ಮುಂದುವರೆಸಬೇಕು. ಒಂದು ವೇಳೆ ಸದಸ್ಯರು ಬೆಂಗಳೂರಿನಿಂದ ದೂರ ಹೋಗಿದ್ದಲ್ಲಿ (ತಮ್ಮ ಕ್ಷೇತ್ರಕ್ಕೆ) ಕೊನೆ ಪಕ್ಷ 15ರಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆದು ನಿಯಮಾವಳಿಗಳಂತೆ ಚರ್ಚಿಸಲು ಅನುವು ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.

ಈ ಸೂಚನೆ ಬೆನ್ನಲ್ಲೇ ಸಭಾಪತಿ ಶೆಟ್ಟಿ ಅವರು ಪರಿಷತ್ತಿನ ಅಧಿಕಾರಿಗಳನ್ನು ಕರೆದು ಸಮಾಲೋಚನೆ ನಡೆಸಿದ್ದಾರೆ. ಸರ್ಕಾರ ನೀಡಿದ ಸೂಚನೆಯನ್ನು ಪಾಲಿಸುತ್ತಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಶನಿವಾರ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಸಭಾಪತಿ ವಿರುದ್ಧ ರಾಜ್ಯಪಾಲರಗೆ ಬಿಜೆಪಿ ದೂರು

ಒಂದು ವೇಳೆ ಮಂಗಳವಾರ ಕಲಾಪ ನಡೆಸದಿದ್ದರೆ ಸರ್ಕಾರ ಮತ್ತು ಸಭಾಪತಿಗಳ ಮಧ್ಯೆ ತಿಕ್ಕಾಟ ಏರ್ಪಟ್ಟು ರಾಜ್ಯಪಾಲರು ನೇರವಾಗಿ ಮಧ್ಯೆ ಪ್ರವೇಶ ಮಾಡುವ ಸನ್ನಿವೇಶ ಸೃಷ್ಟಿಯಾಗಬಹುದು ಎನ್ನಲಾಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಬೇಕಾದೀತು ಎಂಬ ಕಾರಣಕ್ಕಾಗಿಯೇ ಸಭಾಪತಿಗಳು ಸದನವನ್ನು ಏಕಪಕ್ಷೀಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.

ರಾಜ್ಯಪಾಲಗೆ ಬಿಜೆಪಿ ದೂರು:

ಈ ನಡುವೆ ಶುಕ್ರವಾರ ಬೆಳಗ್ಗೆ ಪರಿಷತ್ತಿನ ಬಿಜೆಪಿ ಸದಸ್ಯರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಭಾಪತಿಗಳ ನಡೆ ಬಗ್ಗೆ ದೂರು ಸಲ್ಲಿಸಿದರು. ಗುರುವಾರ ಸಂಜೆ ಕಲಾಪ ಮುಂದೂಡಿದ ಬೆನ್ನಲ್ಲೇ ಪರಿಷತ್ತಿನ ಸದಸ್ಯರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್‌ ಕವಟಗಿಮಠ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ದೂರಿದ್ದರು. ಶುಕ್ರವಾರ ಪರಿಷತ್ತಿನ ಸಭಾನಾಯಕರೂ ಆಗಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಹಲವು ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದರು.

ವಾಸ್ತವವಾಗಿ ಬಿಜೆಪಿಯ ಎಲ್ಲ ಸದಸ್ಯರೂ ರಾಜಭವನಕ್ಕೆ ತೆರಳಲು ಉದ್ದೇಶಿಸಿದ್ದರು. ಆದರೆ, ಕೋವಿಡ್‌ ಕಾರಣಕ್ಕಾಗಿ ಕೇವಲ ಐದು ಮಂದಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಯಿತು. ಪೂಜಾರಿ ಜೊತೆಗೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್‌ ಕವಟಗಿಮಠ, ಸದಸ್ಯರಾದ ಎನ್‌.ರವಿಕುಮಾರ್‌, ಆಯನೂರು ಮಂಜುನಾಥ್‌ ಹಾಗೂ ತೇಜಸ್ವಿನಿ ಗೌಡ ಅವರು ನಿಯೋಗದಲ್ಲಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪೂಜಾರಿ, ‘ವಿಧಾನಪರಿಷತ್‌ ಕಲಾಪ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸದಸ್ಯರ ಭಾವನೆಗೆ ವಿರುದ್ಧವಾಗಿ ಕಲಾಪ ಮುಂದೂಡಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೇವೆ. ಅವಿಶ್ವಾಸ ಗೊತ್ತುವಳಿಯನ್ನು ಚರ್ಚಿಸಬೇಕಾಗಿರುವದರಿಂದ ಕಲಾಪ ನಡೆಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದೇವೆ. ಸಭಾಪತಿಗಳ ತಿರ್ಮಾನದ ಬಗ್ಗೆ ರಾಜ್ಯಪಾಲರ ಗಮನ ಸೆಳೆದಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ’ ಎಂದು ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!