ರಾಹುಲ್ ಗಾಂಧಿ ಹೋದ ಕಡೆಗಳಲೆಲ್ಲಾ ಕಾಂಗ್ರೆಸ್ ಧೂಳೀಪಟವಾಗಿದ್ದು, ರಾಜ್ಯದಲ್ಲೂ ನೆಲಕಚ್ಚುವುದು ಖಚಿತ. 21 ದಿನಗಳಲ್ಲ, 40 ದಿನ ಪಾದಯಾತ್ರೆ ಮಾಡಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು (ಅ.01): ರಾಹುಲ್ ಗಾಂಧಿ ಹೋದ ಕಡೆಗಳಲೆಲ್ಲಾ ಕಾಂಗ್ರೆಸ್ ಧೂಳೀಪಟವಾಗಿದ್ದು, ರಾಜ್ಯದಲ್ಲೂ ನೆಲಕಚ್ಚುವುದು ಖಚಿತ. 21 ದಿನಗಳಲ್ಲ, 40 ದಿನ ಪಾದಯಾತ್ರೆ ಮಾಡಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ರಾಹುಲ್ ಗಾಂಧಿ ಹೋದ ಕಡೆ ಶೇ.99ರಷ್ಟುಕಾಂಗ್ರೆಸ್ ನೆಲಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆ ಶೇ.99ರಷ್ಟುಯಶಸ್ಸು ಕಂಡಿದೆ. ಹಾಗಾಗಿ ಕಾಂಗ್ರೆಸ್ ಇನ್ನಷ್ಟುಕಡೆ ಪಾದಯಾತ್ರೆ ಮಾಡಿದರೆ ನಮಗೆ ಒಳ್ಳೆಯದೆ. ಸಿದ್ದರಾಮಯ್ಯ ಆರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಅದು ಕಾಂಗ್ರೆಸ್ ನ ಹಗಲು ಕನಸು. ಆರು ತಿಂಗಳಲ್ಲ 60 ವರ್ಷ ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ದಾಳಿ ಆದಾಗಲೂ ಡಿ.ಕೆ ಶಿವಕುಮಾರ್ ಹೀಗೆಯೇ ಹೇಳುತ್ತಾರೆ. ಅವರ ಮೇಲೆ ಸಿಬಿಐ ದಾಳಿ ಮಾಡಿದ್ದು ರಾಜಕೀಯ ಪ್ರೇರಿತವಾದರೆ, ಜನಾರ್ದನ ರೆಡ್ಡಿ ಮೇಲೆ ಕಾಂಗ್ರೆಸ್ ಮಾಡಿದ್ದೇನು?. ಅದು ರಾಜಕೀಯ ಪ್ರೇರಿತವೆನ್ನಬಹುದಲ್ಲ. ಯಾರ ಮೇಲೆ, ಯಾವಾಗ ದಾಳಿ ಮಾಡಬೇಕೆಂಬುದನ್ನು ಆಯಾ ಸಂಸ್ಥೆಗಳೇ ನಿರ್ಧಾರ ಮಾಡುತ್ತವೆ. ಚುನಾವಣೆ ಸಮಯದಲ್ಲಿ ದಾಳಿ ಮಾಡಬಾರದು ಎಂಬ ನಿಯಮವೇನಿಲ್ಲ. ಸಿಬಿಐ, ಇಡಿ ಸ್ವತಂತ್ರ ಸಂಸ್ಥೆಗಳು. ಅದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದರು.
ಜನರ ನೋವು ಆಲಿಸಲು ಭಾರತ ಐಕ್ಯತಾ ಯಾತ್ರೆ: ರಾಹುಲ್ ಗಾಂಧಿ
ದೇಶ ಒಡೆದ ಕಾಂಗ್ರೆಸ್‌ನಿಂದ ಭಾರತ್ ಜೋಡೋ: ಭಾರತವನ್ನೇ ಇಬ್ಭಾಗ ಮಾಡಿದ ಕಾಂಗ್ರೆಸ್ ಇದೀಗ ಭಾರತ್ ಜೋಡಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶ ಇಬ್ಭಾಗ ಮಾಡಿದವರು ಯಾರು? ನಿಮ್ಮ ಕುಟುಂಬವೇ ಭಾರತವನ್ನು ಇಬ್ಬಾಗ ಮಾಡಿ ಇದೀಗ ಇರುವ ಭಾರತವನ್ನು ಜೋಡಿಸಲು ಹೊರಟ್ಟಿದ್ದೀರಿ. ಇದು ಯಾವ ರಾಜಕೀಯಕ್ಕೆ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಏನು ಪ್ಲಾನ್ ಮಾಡುತ್ತಿದೆ ಎನ್ನುವುದು ಭಯೋತ್ಪಾದಕರಿಗೆ ತಿಳಿಯುತ್ತಿತ್ತು. ಭಯೋತ್ಪಾದಕರನ್ನು ಕರೆಸಿ ಕಾಂಗ್ರೆಸ್ ಪ್ರಧಾನ ಮಂತ್ರಿಗಳೇ ಕೈಕುಲುಕಿದ್ದರು.
ಆದರೆ ಈಗ ಎನ್‌ಡಿಎ ಸರ್ಕಾರ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆ ಮಾಡುವವರಿಗೂ ತಕ್ಕ ಶಾಸ್ತಿ ಮಾಡುತ್ತಿದೆ ಎಂದರು. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಚರ್ಚ್, ಮಸೀದಿಗೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ಹೋಗಿಲ್ಲ. ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಆದರೆ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಮತ್ತು ಭಾರತವನ್ನೇ ತೆಗಳಿದ ಕ್ರೈಸ್ತ ಮಿಷನರಿಗಳನ್ನು ವಿರೋಧಿಸುವ ಬದಲು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ
ಇದೀಗ ಕರ್ನಾಟಕ ಪ್ರವೇಶಿಸಿರುವ ಜೋಡೋ ಯಾತ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಸುವ ಕೆಲಸ ಮಾಡುತ್ತದಾ? ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ಕುರಿತು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು. ಆದರೆ ಹೆಸರಿಗೆ ಮಾತ್ರ ಅಂಬೇಡ್ಕರ್ ಎಂದು ಹೇಳುವ ಕಾಂಗ್ರೆಸ್ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಕೆಲಸ ಮಾಡಿತು. ಆದರೆ ನರೇಂದ್ರ ಮೋದಿ ಆರ್ಟಿಕಲ್ 370 ರದ್ದು ಮಾಡಿ ದೇಶವನ್ನು ಒಗ್ಗೂಡಿಸಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರ್ಟಿಕಲ್ 370 ವಾಪಸ್ ಪಡೆಯುವುದಾಗಿ ಹೇಳಿದೆ. ಈ ಮೂಲಕ ಮತ್ತೆ ಭಾರತವನ್ನು ವಿಭಜಿಸುವ ಕೆಲಸಕ್ಕೆ ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದರು.