ಜನರ ನೋವು ಆಲಿಸಲು ಭಾರತ ಐಕ್ಯತಾ ಯಾತ್ರೆ: ರಾಹುಲ್‌ ಗಾಂಧಿ

By Govindaraj SFirst Published Oct 1, 2022, 9:20 AM IST
Highlights

ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಇರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು ವಿರೋಧ ಪಕ್ಷಗಳ ಪಾಲಿಗೆ ಮುಚ್ಚಿವೆ. ಹೀಗಾಗಿ ಜನರ ನೋವು ಆಲಿಸಲು ಅನಿವಾರ್ಯವಾಗಿ ‘ಭಾರತ ಐಕ್ಯತಾ ಯಾತ್ರೆ’ ಹಮ್ಮಿಕೊಂಡಿದ್ದೇವೆ. 

ಗುಂಡ್ಲುಪೇಟೆ (ಅ.01): ‘ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಇರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು ವಿರೋಧ ಪಕ್ಷಗಳ ಪಾಲಿಗೆ ಮುಚ್ಚಿವೆ. ಹೀಗಾಗಿ ಜನರ ನೋವು ಆಲಿಸಲು ಅನಿವಾರ್ಯವಾಗಿ ‘ಭಾರತ ಐಕ್ಯತಾ ಯಾತ್ರೆ’ ಹಮ್ಮಿಕೊಂಡಿದ್ದೇವೆ. ಇದು ಜನರ ಧ್ವನಿಯಾಗಿದ್ದು, ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಗುಂಡ್ಲುಪೇಟೆಯಲ್ಲಿ ರಾಜ್ಯದಲ್ಲಿನ ಭಾರತ ಐಕ್ಯತಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಹಲವರು ಈ ಯಾತ್ರೆಯ ಉದ್ದೇಶ ಕೇಳುತ್ತಾರೆ. ದೇಶದಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಹಿಂಸೆ, ದ್ವೇಷದ ಸಿದ್ಧಾಂತಗಳಿಂದ ಜನ ನರಳುತ್ತಿದ್ದಾರೆ. ಇದಲ್ಲದೆ ಕೋಮುವಾದ, ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣದಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಮಾಧ್ಯಮಗಳು ನಮ್ಮ ಸುದ್ದಿ ಬರೆಯುವುದಿಲ್ಲ. ಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿದ್ದರೆ, ಸಂಸತ್‌ನಲ್ಲಿ ನಾವು ಮಾತನಾಡುವ ಮೈಕ್‌ ಆಫ್‌ ಮಾಡುತ್ತಾರೆ. ಸರ್ಕಾರವನ್ನು ಪ್ರಶ್ನಿಸಿದರೆ ಬಂಧಿಸುತ್ತಾರೆ. 

ರಾಹುಲ್‌ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ

ಬೇರೆ ಪ್ರಜಾಸತ್ತಾತ್ಮಕ ಸಂಸ್ಥೆಗಳೂ ನಮ್ಮ ಪಾಲಿಗೆ ಮುಚ್ಚಿವೆ. ಹೀಗಾಗಿ ಯಾತ್ರೆ ಬಿಟ್ಟು ಬೇರೆ ಆಯ್ಕೆಯಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಯಾತ್ರೆಯ ಧ್ವನಿ ನಾನೊಬ್ಬನೇ ಅಲ್ಲ, ಇದು ದೇಶದ ಧ್ವನಿ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳು, ಸಮಸ್ಯೆಗಳು ಹಂಚಿಕೊಳ್ಳುತ್ತಿದ್ದಾರೆ. ಸಂವಿಧಾನದ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಯಾತ್ರೆಯನ್ನು ತಡೆಯಲು ಯಾವ ವ್ಯಕ್ತಿ, ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದ ಭ್ರಷ್ಟಾಚಾರದ ದರ್ಶನ: ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ನೀವು ಮುಂದಿನ 20-21 ದಿನ ನನ್ನ ಜತೆ ರಾಜ್ಯದಲ್ಲಿ 511 ಕಿ.ಮೀ. ಹೆಜ್ಜೆ ಹಾಕಿ ಆಗ ರಾಜ್ಯದ ನೋವು ಕೇಳಬಹುದು. ಇಲ್ಲಿನ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಬೆಲೆ ಏರಿಕೆ ಸಮಸ್ಯೆಗಳನ್ನು ಜನರಿಂದ ಆಲಿಸಬಹುದು ಎಂದು ಹೇಳಿದರು. ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ. ದೇಶದ ಸಂವಿಧಾನ ಇಲ್ಲದಿದ್ದರೆ ತ್ರಿವರ್ಣ ಧ್ವಜಕ್ಕೂ ಮೌಲ್ಯವಿರುವುದಿಲ್ಲ. ಹೀಗಾಗಿ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ದೇಶವನ್ನು ಕೋಮುದ್ವೇಷ ಉತ್ಪಾದಿಸುವ ಶಕ್ತಿಗಳಿಂದ ರಕ್ಷಿಸಬೇಕಾಗಿದೆ. ನಮ್ಮ ಯಾತ್ರೆಯಲ್ಲಿ ದ್ವೇಷ, ಹಿಂಸೆ ಇಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ನಡೆಯುತ್ತೇವೆ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ ಉಳಿದವರು ಎತ್ತುತ್ತಾರೆ. ಬಿದ್ದವನ ಜಾತಿ, ಧರ್ಮ, ಭಾಷೆ ಯಾವುದೆಂದು ಯಾರೂ ಕೇಳುವುದಿಲ್ಲ ಎಂದು ಪರೋಕ್ಷವಾಗಿ ಕೋಮುವಾದದ ಬಗ್ಗೆ ಕಿಡಿಕಾರಿದರು.

ಎಐಸಿಸಿ ಅಧ್ಯಕ್ಷ ಸ್ಥಾನ: ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಸಾರಥ್ಯ ಖಚಿತ

ಭಾಷಣ ಮಾಡಲ್ಲ, ಕೇಳುತ್ತೇವೆ: ನಾವಿಲ್ಲಿ ಉದ್ದುದ್ದ ಭಾಷಣ ಮಾಡುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಆರೇಳು ಗಂಟೆ ನಡೆಯುತ್ತೇವೆ. ಬಿಸಿಲು, ಮಳೆ ಏನೇ ಬಂದರೂ ಜಗ್ಗುವುದಿಲ್ಲ. ಆದರೆ, ಉದ್ದುದ್ದ ಭಾಷಣ ಮಾಡುವುದಿಲ್ಲ. ಕೇವಲ 15 ನಿಮಿಷ ಮಾತನಾಡುತ್ತೇವೆ ಬದಲಿಗೆ ಜನರ ಮಾತುಗಳನ್ನು ಕೇಳುತ್ತೇವೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಬಗ್ಗೆ ಜನರು ಮಾತನಾಡುವುದನ್ನು ಕೇಳುವುದು ನಮ್ಮ ಉದ್ದೇಶ ಎಂದರು.

click me!