136 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಕೆ ಅವಧಿ ಶುಕ್ರವಾರ ಮುಕ್ತಾಯವಾಗಿದೆ.
ನವದೆಹಲಿ (ಅ.01): 136 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ನಾಮಪತ್ರ ಸಲ್ಲಿಕೆ ಅವಧಿ ಶುಕ್ರವಾರ ಮುಕ್ತಾಯವಾಗಿದ್ದು, ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ, ಕೇರಳ ಮೂಲದ ಹೈಪ್ರೊಫೈಲ್ ನಾಯಕ ಶಶಿ ತರೂರ್ ಮತ್ತು ಜಾರ್ಖಂಡ್‌ನ ಸಚಿವ ಕೆ.ಎನ್.ತ್ರಿಪಾಠಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈ ಗಾಂಧಿ ಕುಟುಂಬದ ಬೆಂಬಲ ಇರುವ ಖರ್ಗೆ ಆಯ್ಕೆ ಬಹುತೇಕ ಖಚಿತ. ಅ.8ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು, ಒಂದು ವೇಳೆ ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡರೆ ಅ.17ರಂದು ಚುನಾವಣೆ ನಡೆದು, ಅ.20ಕ್ಕೆ ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.
ಇದರೊಂದಿಗೆ, ಈ ಬಾರಿ ಗಾಂಧಿ ಪರಿವಾರದ ಯಾವುದೇ ನಾಯಕರೂ ಕಣಕ್ಕೆ ಇಳಿವ ಸಾಧ್ಯತೆ ಇಲ್ಲ ಎಂಬ ಊಹೆಗಳೂ ನಿಜವಾಗಿದ್ದು, ಸುಮಾರು 2 ದಶಕಗಳ ಬಳಿಕ ಎಐಸಿಸಿಯ ಚುಕ್ಕಾಣಿ ಹೊರಗಿನವರ ಪಾಲಾಗುವುದು ಖಚಿತವಾಗಿದೆ. ಆದರೆ ಗಾಂಧಿ ಕುಟುಂಬ ಕಣಕ್ಕೆ ಇಳಿಯದೇ ಇದ್ದರೂ, ಅವರಿಂದಲೇ ಸೂಚಿಸಲ್ಪಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಕಡೆಯ ಹಂತದಲ್ಲಿ ಕಣಕ್ಕೆ ಧುಮುಕಿರುವ ಕಾರಣ, ಕಲಬುರಗಿ ಮೂಲದ ಹಿರಿಯ ನಾಯಕನ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಕಡೆಯ ಹಂತದಲ್ಲಿ ಪಕ್ಷದಲ್ಲಿನ ಒಗ್ಗಟ್ಟನ್ನು ಸೂಚಿಸುವ ಸಲುವಾಗಿ ಶಶಿ ತರೂರ್ ಮತ್ತು ತ್ರಿಪಾಠಿ ನಾಮಪತ್ರ ಹಿಂದಕ್ಕೆ ಪಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಖರ್ಗೆ ಭೀಷ್ಮ ಪಿತಾಮಹ ಇದ್ದಂತೆ ಎಂದು ಶುಕ್ರವಾರ ತರೂರ್ ಬಣ್ಣಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನ: 'ನಂಬಿಕಸ್ಥ’ ಎಂಬುದೇ ಖರ್ಗೆಗೆ ಪ್ಲಸ್ ಪಾಯಿಂಟ್..!
ಮೂವರು ಕಣಕ್ಕೆ: ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶುಕ್ರವಾರ ಮಲ್ಲಿಕಾರ್ಜುನ ಖರ್ಗೆ (80), ಶಶಿ ತರೂರ್ (66) ಮತ್ತು ಕೆ.ಎನ್.ತ್ರಿಪಾಠಿ (45) ನಾಮಪತ್ರ ಸಲ್ಲಿಸಿದರು. ಜಿ-23 ನಾಯಕರಾದ ಆನಂದ್ ಶರ್ಮಾ, ಪೃಥ್ವಿರಾಜ್ ಚೌಹಾಣ್, ಮನೀಶ್ ತಿವಾರಿ, ಭೂಪಿಂದರ್ ಹೂಡಾ, ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಮುಕುಲ್ ವಾಸ್ನಿಕ್, ಎ.ಕೆ.ಆ್ಯಂಟನಿ ಸೇರಿದಂತೆ ಪಕ್ಷದ ಹಲವು ಹಿರಿಯರ ಸಮ್ಮುಖದಲ್ಲಿ ಖರ್ಗೆ ಹಲವು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು. ಮತ್ತೊಂದೆಡೆ ತರೂರ್ 5 ಸೆಟ್ ಮತ್ತು ತ್ರಿಪಾಠಿ 1 ಸೆಟ್ ನಾಮಪತ್ರ ಸಲ್ಲಿಸಿದರು. ವಿಶೇಷವೆಂದರೆ ಎಐಸಿಸಿ ಕಚೇರಿಯಲ್ಲಿ ನಡೆದ ಈ ಚುನಾವಣಾ ಪ್ರಕ್ರಿಯೆ ವೇಳೆ ಗಾಂಧಿ ಕುಟುಂಬದ ಯಾವುದೇ ಸದಸ್ಯರೂ ಹಾಜರಲಿಲ್ಲ.
ಪಕ್ಷದಲ್ಲಿ ದೊಡ್ಡಮಟ್ಟದ ಬದಲಾವಣೆ ತರಲು ನಾನು ಸ್ಪರ್ಧಿಸಿದ್ದೇನೆ. ನಾನು ಎಂದೆಂದಿಗೂ ಈ ಹೋರಾಟ ನಡೆಸಿಕೊಂಡೇ ಬಂದಿದ್ದೇನೆ ಮತ್ತು ನನ್ನ ಬಾಲ್ಯದಿಂದಲೂ ನಾನು ಸಹಯೋಗ ಹೊಂದಿರುವ ಕಾಂಗ್ರೆಸ್ ಪಕ್ಷದ ಚಿಂತನೆಗಳನ್ನು ಎತ್ತಿಹಿಡಿಯಲು ಇನ್ನಷ್ಟುಹೋರಾಟ ನಡೆಸಲು ನಾನು ಬದ್ಧನಾಗಿದ್ದೇನೆ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಟ್ವಿಸ್ಟ್, ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಖರ್ಗೆ?
ಪಕ್ಷದಲ್ಲಿ ಸದ್ಯ ಕಾಣಿಸಿಕೊಂಡಿರುವ ಎಲ್ಲಾ ಅವ್ಯವಸ್ಥೆಗಳಿಗೂ, ಅಧಿಕಾರ ವಿಕೇಂದ್ರಿಕರಣ ಒಂದೇ ಮದ್ದು. ಅಧ್ಯಕ್ಷರಾಗಿ ಆಯ್ಕೆಯಾದರೆ ಹೈಕಮಾಂಡ್ ಸಂಸ್ಕೃತಿಗೆ ಬ್ರೇಕ್ ಹಾಕುವೆ. ಖರ್ಗೆ ಹಾಗೂ ನನ್ನದು ಪರಸ್ಪರ ಸ್ನೇಹಯುತ ಸ್ಪರ್ಧೆ. ನಾವು ಪರಸ್ಪರ ದ್ವೇಷಿಗಳಾಗಲೀ ಅಥವಾ ವೈರಿಗಳಾಗಲೀ ಅಲ್ಲ. ಖರ್ಗೆ ಅವರು ಪಕ್ಷದಲ್ಲಿ ಭೀಷ್ಮ ಪಿತಾಮಹನಿದ್ದಂತೆ. ಅವರಿಗೆ ನಾನು ಅಗೌರವ ತೋರಲ್ಲ. ಬದಲಾಗಿ ನನ್ನ ಚಿಂತನೆಗಳನ್ನು ಮುಂದಿಡುತ್ತೇನೆ.
- ಶಶಿ ತರೂರ್, ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ