ಬಿಜೆಪಿಯ 15 ಶಾಸಕರು ಜೆಡಿಎಸ್ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ, (ಜ.08): ಬಿಜೆಪಿ ಅತೃಪ್ತ ಶಾಸಕರ ಬಗ್ಗೆ ಅಮೇಲೆ ಮಾತನಾಡಲಿ. ಮೊದಲು ಕುಮಾರಸ್ವಾಮಿ ತಮ್ಮ ಪಕ್ಷದ ಅತೃಪ್ತ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಾಂಕ್ ಕೊಟ್ಟರು
ಶಿವಮೊಗ್ಗದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿ ಶಾಸಕರು ಹುಲಿಗಳು. ಅವರನ್ನು ಯಾರು ಮುಟ್ಟಲು ಆಗೋಲ್ಲ ಎಂದು ಪದೇ ಪದೇ ಹೇಳುತ್ತೇನೆ. ನಮಗೆ ಒವರ್ ಲೋಡ್ ಆಗಿದೆ. ಅನೇಕ ಜೆಡಿಎಸ್- ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
‘ಬಿಜೆಪಿಯಿಂದ ಹೊರ ಬರಲು ಸಿದ್ಧರಾಗಿದ್ದಾರೆ 15 ಮಂದಿ’
ಜೆಡಿಎಸ್ ಪಕ್ಷದ ಶಾಸಕರು ನಮ್ಮ ಕಡೆ ಬರದಂತೆ ನೋಡಿಕೊಳ್ಳಲಿ. ಮೊದಲು ನಿಮ್ಮ ಶಾಸಕರನ್ನು ಗಟ್ಟಿ ಆಗಿ ಹಿಡಿದುಕೊಳ್ಳಿ ಎಂದು ವ್ಯಂಗ್ಯವಾಡಿದರು.
ಇನ್ನು ಇದೇ ವೇಳೆ ಡಿಸಿಎಂ ಹುದ್ದೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಯಾವ ಕಾರಣಕ್ಕೂ ನಾನು ಡಿಸಿಎಂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡಿಸಿಎಂ ಹುದ್ದೆ ಅಪೇಕ್ಷೆ ಪಡುವುದು ತಪ್ಪು ಎಂದು ಹೇಳುವ ಮೂಲಕ ಪರೋಕ್ಷವಾಗಿ ಶ್ರೀರಾಮುಲುಗೆ ಟಾಂಗ್ ಕೊಟ್ಟರು.
ಸೋಮಶೇಖರ್ ರೆಡ್ಡಿ- ಜಮೀರ್ ಅಹ್ಮದ್ ವಾಕ್ಸಮರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಜವಾಬ್ದಾರಿ ಇರುವ ವ್ಯಕ್ತಿಗಳು ವೈಯಕ್ತಿಕವಾಗಿ ಮಾತನಾಡಬಾರದು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಹೀಗೆಲ್ಲ ಮಾತನಾಡಬಾರದು ಎಂದು ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಕಿವಿ ಮಾತು ಹೇಳಿದರು.
'ಮಾಜಿ ಸಿಎಂ ಕುಮಾರಸ್ವಾಮಿಗೆ ಅಷ್ಟು ಶಕ್ತಿ ಇಲ್ಲ'
ಸಿಎಎ ವಿಷಯ ಬಗ್ಗೆ ಚರ್ಚೆ ಆಗಬೇಕು. ಅದು ಬಿಟ್ಟು ವೈಯಕ್ತಿಕ ತೊಡೆತಟ್ಟುವ ಕೆಲಸ ಆಗ್ತಾ ಇರೋದು ಒಪ್ಪೊಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಒಬ್ಬನೇ ಒಬ್ಬ ಮುಸ್ಲಿಮರಿಗೆ ತೊಂದರೆ ಆಗೋಲ್ಲ ಎಂದು ಹೇಳಿದರು.
ನನಗೆ ಬೆದರಿಕೆ ಕರೆ ಬಂದ ನಂತರ ಮುಸ್ಲಿಂ ಮಹಿಳೆ ಖುದ್ದು ಕರೆ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ. ಹಾಗಾಗಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ಕಿಡಿಕಾರಿದರು.
ಇದು ಕೇಂದ್ರದ ವಿರುದ್ಧ ಮುಸ್ಲಿಮ್ ರನ್ನು ಎತ್ತಿ ಕಟ್ಟುವ ಕುತಂತ್ರ. ಹಾಗೆಯೇ ಭಾರತ್ ಬಂದ್ ಕೂಡ ಕೇಂದ್ರದ ವಿರುದ್ಧ ಕಾರ್ಮಿಕರನ್ನು ಎತ್ತಿ ಕಟ್ಟುವ ರಾಜಕೀಯ ಕುತಂತ್ರ. ಅದು ವಿಫಲವಾಗಿದೆ ಎಂದರು.