'ಸೋತವರಿಗೆ ಮಂತ್ರಿಗಿರಿ ಕೊಡಬಾರದು ಎಂದು ಸುಪ್ರೀಂ ಹೇಳಿಲ್ಲ'

By Suvarna NewsFirst Published Jan 8, 2020, 8:30 AM IST
Highlights

ಸೋತವರಿಗೆ ಮಂತ್ರಿಗಿರಿ ಕೊಡಬಾರದು ಎಂದು ಸುಪ್ರೀಂ ಹೇಳಿಲ್ಲ: ವಿಶ್ವನಾಥ್‌| ಉಪ ಚುನಾವಣೆಯಲ್ಲಿ ಸೋತವರನ್ನು ಮಂತ್ರಿ ಮಾಡುವುದು ಸಿಎಂಗೆ ಬಿಟ್ಟದ್ದು| ಬಿಎಸ್‌ವೈ ಮಾತು ಉಳಿಸಿಕೊಳ್ತಾರೆ, ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ

ಬೆಂಗಳೂರು[ಜ.08]: ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂಬುದಾಗಿ ಸುಪ್ರೀಂಕೋರ್ಟ್‌ ಎಲ್ಲೂ ಉಲ್ಲೇಖಿಸಿಲ್ಲ ಎಂದು ಅನರ್ಹ ಶಾಸಕ ಹಾಗೂ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

"

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಪರಾಜಿತರಾಗಿರುವವರಿಗೆ ಮಂತ್ರಿಗಿರಿ ನೀಡುವುದು ಬಿಡುವುದು ಬಿಜೆಪಿ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳ ವಿವೇಚನೆಗೆ ಸೇರಿದೆ. ಆದರೆ, ಸೋತ ಶಾಸಕರು ಸಚಿವರಾಗಬಾರದು ಎಂಬುದಾಗಿ ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚಾಮರಾಜನಗರ ಕ್ಷೇತ್ರದ ಸಂಸದ ಶ್ರೀನಿವಾಸ್‌ ಪ್ರಸಾದ್‌ ಅವರು ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಯಾರೋ ಹೇಳಿದ್ದ ಹೇಳಿಕೆಯನ್ನು ಅವರು ಪ್ರಸ್ತಾಪಿಸಿದ್ದರು. ಈ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ಜನವಿರೋಧಿ ಮೈತ್ರಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿತು. ಹೀಗಾಗಿ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಸ್ವತಂತ್ರಗೊಳಿಸಿದ್ದೇವೆ. ಯಾವುದೇ ಅಧಿಕಾರದಾಸೆಯಿಂದ ರಾಜೀನಾಮೆ ನೀಡಿಲಿಲ್ಲ ಎಂದು ಅವರು ಪುನರುಚ್ಚರಿಸಿದರು.

ರಾಜಕೀಯದಲ್ಲಿ ಕೊಟ್ಟಮಾತನ್ನು ಉಳಿಸಿಕೊಳ್ಳುವ ಏಕೈಕ ವ್ಯಕ್ತಿ ಯಡಿಯೂರಪ್ಪನವರು. ಅವರ ಮೇಲೆ ನಂಬಿಕೆ ವಿಶ್ವಾಸವಿದೆ. ಸಚಿವ ಸ್ಥಾನ ಸಿಗುವ ನಂಬಿಕೆ ಇದೆ. ಮುಖ್ಯಮಂತ್ರಿಗಳು ಕೊಟ್ಟಮಾತನ್ನು ಈಡೇರಿಸುತ್ತಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತು ಪ್ರಸ್ತಾಪಿಸಿದ ವಿಶ್ವನಾಥ್‌, ಬಿಜೆಪಿ ಪಕ್ಷದ 20 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಕುಮಾರಸ್ವಾಮಿ ಅವರ ಮಾತು ಸತ್ಯಕ್ಕೆ ದೂರವಾದದ್ದು. ಕುಮಾರಸ್ವಾಮಿ ಅವರ ಮಾತನ್ನು ಯಾರೂ ನಂಬುವುದಿಲ್ಲ. ಅವರೊಂದಿಗೆ ಯಾವೊಬ್ಬ ಬಿಜೆಪಿ ಶಾಸಕ ಸಹ ಸಂಪರ್ಕ ಹೊಂದಿಲ್ಲ. ಜೆಡಿಎಸ್‌ ಪಕ್ಷ ಕಟ್ಟುವಲ್ಲಿ ಕುಮಾರಸ್ವಾಮಿ ಅವರ ಪಾತ್ರ ನಗಣ್ಯವಾಗಿದೆ. ಮಾಜಿ ಪ್ರಧಾನ ಮಂತ್ರಿ ದೇವೇಗೌಡರೇ ಏಕಾಂಗಿಯಾಗಿ ಹೋರಾಟ ನಡೆಸಿ ಪಕ್ಷ ಕಟ್ಟಿಬೆಳೆಸಿದ್ದಾರೆ. ಜೆಡಿಎಸ್‌ಗೆ ಭವಿಷ್ಯ ಇಲ್ಲ. ಹೀಗಾಗಿಯೇ ಆ ಪಕ್ಷದ ಹಲವು ಶಾಸಕರು ರಾಜಕೀಯ ಭವಿಷ್ಯ ಅರಸಿಕೊಂಡು ಅನ್ಯ ಪಕ್ಷಗಳಿಗೆ ಹೋಗಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

click me!