ಹುನಗುಂದ: ಸಿದ್ದರಾಮಯ್ಯಗೆ ಕಾಂಗ್ರೆಸ್‌ ತತ್ವ ಒಪ್ಪುವುದಿಲ್ಲ, ಗೋವಿಂದ ಕಾರಜೋಳ

Published : Dec 10, 2022, 10:00 PM IST
ಹುನಗುಂದ: ಸಿದ್ದರಾಮಯ್ಯಗೆ ಕಾಂಗ್ರೆಸ್‌ ತತ್ವ ಒಪ್ಪುವುದಿಲ್ಲ, ಗೋವಿಂದ ಕಾರಜೋಳ

ಸಾರಾಂಶ

ಜನತಾ ಪರಿವಾರದಿಂದ ಬಂದ ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್‌ ವಿರೋಧಿ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ(ಡಿ.10):  ಜನತಾ ಪರಿವಾರದಿಂದ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್‌ ವಿರೋಧಿ. ಅವರು ಕಾಂಗ್ರೆಸ್‌ ವಿರೋಧಿಯಾಗಿ ಬಹುತೇಕ ರಾಜಕಾರಣಕ್ಕೆ ಬಂದವರು. ಹೀಗಾಗಿ, ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತಗಳನ್ನು ಅವರು ಮೈಗೂಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಜಿಲ್ಲೆಯ ಹುನಗುಂದದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಂದು ಒತ್ತಾಯಪೂರ್ವಕವಾಗಿ ಕಾಂಗ್ರೆಸ್‌ ಪರವಾಗಿ ಮಾತನಾಡುವಂತಾಗಿದೆ. ಇನ್ನು ಮುಂದೆ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಉಳಿಯಲು ಸಾಧ್ಯವಿಲ್ಲ. ಗುಜರಾತನಲ್ಲಿ ಬಂದಿರುವ ದಯನೀಯ ಸ್ಥಿತಿಯೇ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಬರಲಿದೆ ಎಂದರು.

ಕನಕ ಮೂರ್ತಿ ಪ್ರತಿಷ್ಠಾಪನೆ: ಹುನಗುಂದ ಶಾಸಕರ ನಡೆಗೆ ಖಂಡನೆ, ಕುರುಬ ಸಮಾಜದಿಂದ ತಕ್ಕ ಪಾಠದ ಎಚ್ಚರಿಕೆ

ಬಿಜೆಪಿ ಸೇರಲು ಜನ ಸಾಲಿನಲ್ಲಿದ್ದಾರೆ:

ಆಪರೇಷನ್‌ ಕಮಲದ ಪ್ರಯೋಗ ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಅವರು, ಜನರು ಬಯಸಿ ಬಿಜೆಪಿಗೆ ಬರುತ್ತಿದ್ದಾರೆ. ದೇಶದ ಸುರಕ್ಷತೆ, ಅಭಿವೃದ್ಧಿಗೆ ಬಿಜೆಪಿ ಬೇಕೇಬೇಕು ಎಂಬ ಅರಿವು ಜನರಿಗಿದೆ. ಅದಕ್ಕಾಗಿ ಬಿಜೆಪಿ ಸೇರಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಗುಲಾಮ್‌ನಬಿ ಆಜಾದರಂಥ ಹಿರಿಯ ನಾಯಕರೇ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಗೆ ಬಂದಿದ್ದಾರೆ. ಇದನ್ನು ಗಮನಿಸಿದರೆ ಆ ಪಕ್ಷದ ಪರಿಸ್ಥಿತಿ ಹೇಗಿರಬಹುದು ಎಂದು ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ದೇಶದ ಇತಿಹಾಸದಲ್ಲಿಯೇ ಗುಜರಾತ್‌ ಚುನಾವಣೆ ಫಲಿತಾಂಶ ಐತಿಹಾಸಿಕವಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಇಂದು ಗುಜರಾತನಲ್ಲಿ ಕೇವಲ 16 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕೃತ ಪ್ರತಿಪಕ್ಷದ ಸ್ಥಾನ ಕೂಡ ಅವರಿಗೆ ಸಿಕ್ಕಿಲ್ಲ ಎಂದರೆ ಆ ಪಕ್ಷ ಯಾವ ಸ್ಥಿತಿಯಲ್ಲಿರಬಹುದು ಎಂದು ಗೊತ್ತಾಗುತ್ತದೆ. 10 ವರ್ಷಗಳ ಹಿಂದೆಯೇ ಪ್ರಧಾನಿ ಮೋದಿ ಶೀಘ್ರವೇ ಭಾರತ ಕಾಂಗ್ರೆಸ್‌ ಮುಕ್ತ ಆಗಲಿದೆ ಎಂದು ಹೇಳಿದ್ದರು. ದೇಶದ ಜನರು ಮೋದಿ ಆಡಳಿತವನ್ನು ಮೆಚ್ಚಿದ್ದಾರೆ. ದೇಶ ಸುರಕ್ಷಿತವಾಗಿ ಇರಬೇಕು ಎಂದರೆ ಮೋದಿ ಆಡಳಿತವೇ ಇರಬೇಕು ಎನ್ನುವುದು ಜನರ ಬಯಕೆಯಾಗಿದೆ. ವಿಶ್ವವೇ ಮೋದಿ ಅವರೇ ವಿಶ್ವ ನಾಯಕರಾಗಬೇಕು ಎಂದು ಬಯಸುತ್ತಿದೆ. ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿ ಭಾರತದ ಕೀರ್ತಿ, ಗೌರವವನ್ನು ಹೆಚ್ಚಿಸುವ ಕೆಲಸ ಮೋದಿ ಆಡಳಿತದಲ್ಲಿ ಆಗಿದೆ ಎಂದರು.

ತಾಕತ್ತಿದ್ದರೆ ನನ್ನನ್ನು ಬಂಧಿಸಲಿ: ಹುನಗುಂದ ಮಾಜಿ ಶಾಸಕ ಕಾಶಪ್ಪನವರ

ಹಿಮಾಚಲ ಪ್ರದೇಶದಲ್ಲಿನ ಸೋಲಿಗೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಅಲ್ಲಿ ಪ್ರತಿ ಸಾರಿ ಬೇರೆಬೇರೆ ಪಕ್ಷದ ಸರ್ಕಾರವನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ. ಅದು ಅಲ್ಲಿನ ಜನರ ಪರಮಾಧಿಕಾರವಾಗಿದೆ. ನಾವು ಅದನ್ನು ಗೌರವಿಸುತ್ತೇವೆ ಎಂದರು.

ಹಿರಿಯರನ್ನು ಕೈಬಿಡುತ್ತಾರೆ ಎಂಬುದು ಗಾಳಿಸುದ್ದಿ

ಮುಂಬರುವ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ರಾಜ್ಯದ ಬಿಜೆಪಿಯಲ್ಲಿಯೂ ಗುಜರಾತ್‌ ಮಾದರಿಯನ್ನು ಇಟ್ಟುಕೊಂಡು ಯುವಕರಿಗೆ ಮಣೆ ಹಾಕಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕಾರಜೋಳ, ನಮ್ಮ ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬದಲಾವಣೆ ಮಾಡುವ ಅನಿವಾರ್ಯತೆ ಇದ್ದರೆ, ಖಂಡಿತ ಬದಲಾವಣೆ ಮಾಡುತ್ತಾರೆ. ಹಿರಿಯರನ್ನು ಕೈ ಬಿಡುತ್ತಾರೆ ಅನ್ನುವುದೆಲ್ಲ ಕೇವಲ ಗಾಳಿ ಸುದ್ದಿ. ಅಂತಹ ಯಾವುದೇ ಪ್ರಕ್ರಿಯೆ ರಾಜ್ಯ ಬಿಜೆಪಿಯಲ್ಲಿ ನಡೆದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವ ಕಾರಜೋಳ ಸ್ಪಷ್ಟಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ