ಬೆಳಗಾವಿ ಮತ್ತು ಇಡೀ ರಾಜ್ಯಕ್ಕೆ ಬದಲಾವಣೆ ಮಾಡಬೇಕು ಎನ್ನುವುದು ನನ್ನ ಅನಿಸಿಕೆ. ಇದರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ನೋಡುತ್ತಿದ್ದಾರೆ: ಸತೀಶ ಜಾರಕಿಹೊಳಿ
ಬೆಳಗಾವಿ(ಡಿ.10): ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲಿಗೆ ಆಮ್ ಆದ್ಮಿ ಪಕ್ಷವೇ ಕಾರಣವಾಗಿದ್ದು, ಶೇ.13ರಷ್ಟುಕಾಂಗ್ರೆಸ್ ಮತಗಳನ್ನು ಆಮ್ ಆದ್ಮಿ ಪಾರ್ಟಿ ಪಡೆದುಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ನಾವು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಹಿನ್ನಡೆಗೆ ಕಾರಣ ಆಮ್ ಆದ್ಮಿ ಪಕ್ಷ. ಆಪ್ ಪಕ್ಷ ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಅನ್ನು ಪಡೆದಿದೆ ಎಂದ ಅವರು, ಗುಜರಾತ ಫಲಿತಾಂಶ ಇದೇನೂ ಮೋದಿ ಮ್ಯಾಜಿಕ್ ಅಲ್ಲ. ಅಭಿವೃದ್ಧಿ ಮ್ಯಾಜಿಕ್ ಕೂಡ ಅಲ್ಲ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಶೇ.13 ರಷ್ಟು ವೋಟ್ ಪಡೆದಿದೆ. ಆಪ್ ಪಡೆದಿರುವ ಶೇ.13 ಮತಗಳು ಕಾಂಗ್ರೆಸ್‌ನದ್ದು. ಇದರಿಂದಾಗಿ ಪಕ್ಷಕ್ಕೆ ನೇರವಾಗಿ ನಮಗೆ ಹೊಡೆತ ಬಿದ್ದಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ 60-70 ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು ಎಂದರು.
ಗೆಲ್ಲುವ ಅಭ್ಯರ್ಥಿಗೆ ಮಾತ್ರ ಟಿಕೆಟ್:
ಸ್ಟ್ರ್ಯಾಟಜಿ ಮಾಡದೆ ರಾಜ್ಯದಲ್ಲಿ ನಾವು ಚುನಾವಣೆ ಗೆಲ್ಲಲು ಆಗಲ್ಲ. ಆದರೆ ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಟಿಕೆಟ್ ನೀಡುತ್ತಾರೆ. ಸೀನಿಯರ್ ಅಂತಾ ಟಿಕೆಟ್ ನೀಡುತ್ತೇವೆ. ಗೆಲ್ಲುವ ಹಾಗಿದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಲಿ. ಜಾತಿ ಯುಗ ಮುಗಿದಿದೆ, ಕೆಲಸ ಮಾಡುವುದನ್ನು ಜನ ನೋಡುತ್ತಾರೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ
ಇನ್ನು ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗೆ ಸ್ಪರ್ಧೆ ನೀಡುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜೆಡಿಎಸ್ ಇದೆ. ಜೆಡಿಎಸ್ ಸೀಮಿತ ಕ್ಷೇತ್ರದಲ್ಲಿದೆ. ಗುಜರಾತ್‌ನಲ್ಲಿ ಆಪ್‌ನಿಂದ ಆದಂತಹ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ. ಜೆಡಿಎಸ್ ಅವರು ಗೆಲ್ಲುವ ಸ್ಥಾನದಲ್ಲಿ ಗೆಲ್ಲುತ್ತಾರೆ. ನಾವು ಎಲ್ಲಿ ಗೆಲ್ಲಬೇಕು ಅಲ್ಲಿ ಗೆಲ್ಲುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಲಿನ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಕಾರಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳು ಅಲ್ಲಿ ಚುನಾವಣಾ ತಂತ್ರಗಳನ್ನು ಹೆಣೆದು ಭರ್ಜರಿ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಪಕ್ಷ 40 ಸೀಟು ಪಡೆದು ಗೆಲುವು ಸಾಧಿಸಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಿದ್ದಾರೆಂಬ ಡಾ.ಜಿ.ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಡಿಕೆಶಿ ಆ್ಯಕ್ಟಿವ್ ಇದ್ದಾರೆ. ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸವನ್ನು ಮಾಡುತ್ತಿದ್ದು, ಕೆಲವೊಂದು ಸಾರಿ ಲೆಕ್ಕಾಚಾರಗಳು ತಪ್ಪಾಗುತ್ತವೆ. ಹುದ್ದೆ ದೊಡ್ಡದಲ್ಲ. ಹೀಗಾಗಿ ಸಪೋರ್ಟ್ ಮಾಡಬೇಕಾಗುತ್ತದೆ. ಒಂದೊಂದು ಸಾರಿ ಏನೋ ತಪ್ಪಿರಬಹುದು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ, ಕೆಲಸ ಮಾಡಿ ಅಂತಾ ಹೇಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಆ ರೀತಿ ಡಾ.ಜಿ.ಪರಮೇಶ್ವರ ಹೇಳಿರಬಹುದು ಎಂದರು.
ಬೆಳಗಾವಿ: ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಿಸಿ
ಬೆಳಗಾವಿ ಮತ್ತು ಇಡೀ ರಾಜ್ಯಕ್ಕೆ ಬದಲಾವಣೆ ಮಾಡಬೇಕು ಎನ್ನುವುದು ನನ್ನ ಅನಿಸಿಕೆ. ಇದರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಕಷ್ಟು ಯೋಜನೆ ಸ್ಥಗಿತ ಮಾಡಿದ್ದು ಜನರಿಗೆ ಗೊತ್ತಿದೆ. ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಸಾಮರ್ಥ್ಯ ಇದ್ದರೆ ಕೊಡಬಹುದು. ಅವರು ಗೆಲ್ಲುತ್ತಾರೆ ಎಂದರೆ ಒಂದೇ ಕುಟುಂಬಕ್ಕೆ ಎರಡು ಮೂರು ಟಿಕೆಟ್ ಕೊಡಬಹುದು ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದು ವರ್ಷವಾದರೂ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಪಾಲಿಕೆ ಸದಸ್ಯರಿಗೆ ಅಧಿಕಾರ ಎನ್ನುವುದು ಈಗ ಸಿಗಬಹುದು, ನಾಳೆ ಸಿಗಬಹುದು ಎನ್ನುವಂತಾಗಿದೆ. ಬಿಜೆಪಿ ಶಾಸಕರೇ ಪಾಲಿಕೆ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮಗೆ ಎಲ್ಲಿ ಬೇಕೋ ಅಲ್ಲಿ ಕೆಲಸ ಮಾಡಿಸಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಕ್ರಮ ಇದೇ ರೀತಿ ಮುಂದುವರೆದರೆ ಮುಂದೆ ಒಂದು ದಿನ ಗೌನ್‌ಗಳನ್ನು ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಜರಿದರು.