ಡಬಲ್‌ ಎಂಜಿನ್‌ ಲಾಭ ಜನರಿಗೆ ಗೊತ್ತಾಗಿದೆ: ಸಚಿವ ಸುಧಾಕರ್‌

By Kannadaprabha NewsFirst Published Apr 14, 2023, 10:07 AM IST
Highlights

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರ ನೇತೃತ್ವ ಇರುವಾಗ ರಾಜ್ಯದಲ್ಲೂ ಬಿಜೆಪಿ ಆಡಳಿತ ಇದ್ದರೆ, ಡಬಲ್‌ ಇಂಜಿನ್‌ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಎಷ್ಟು ಅನುಕೂಲ, ನಮ್ಮ ರಾಜ್ಯಕ್ಕೆ ಎಷ್ಟುಲಾಭ ಎಂದು ಜನರಿಗೆ ಮನವರಿಕೆಯಾಗಿದೆ: ಡಾ.ಕೆ. ಸುಧಾಕರ್‌ 

ಬೆಂಗಳೂರು(ಏ.14):  ನಿಮಗೆ ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಅಲ್ಲಿ ನಿಮ್ಮ ಪಕ್ಷ ಎಷ್ಟುಸ್ಥಾನ ಗೆಲ್ಲಲಿದೆ?

ಇಡೀ ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಬಯಲುಸೀಮೆ ಜಿಲ್ಲೆಗಳಲ್ಲಿ ಈ ಬಾರಿ ಬಿಜೆಪಿ ಅತ್ಯುತ್ತಮ ಫಲಿತಾಂಶ ನೀಡಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ 15 ಸ್ಥಾನಗಳಲ್ಲಿ ಕನಿಷ್ಠ 7-8 ಸ್ಥಾನ ಗೆಲ್ಲಲಿದ್ದೇವೆ.

Latest Videos

*ಬಿಜೆಪಿ ಈ ಸಲ ಸಂಪೂರ್ಣ ಬಹುಮತ ಪಡೆಯುತ್ತಾ ಅಥವಾ ಆಪರೇಷನ್‌ ಕಮಲ ಮಾಡಬೇಕಾ?

-ಬಿಜೆಪಿ ಈ ಬಾರಿ ಸ್ಪಷ್ಟಬಹುಮತ ಪಡೆದು ಕರ್ನಾಟಕದ ಜನತೆಯ ಸೇವೆಗೆ ಮರಳಲಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರ ನೇತೃತ್ವ ಇರುವಾಗ ರಾಜ್ಯದಲ್ಲೂ ಬಿಜೆಪಿ ಆಡಳಿತ ಇದ್ದರೆ, ಡಬಲ್‌ ಇಂಜಿನ್‌ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಎಷ್ಟು ಅನುಕೂಲ, ನಮ್ಮ ರಾಜ್ಯಕ್ಕೆ ಎಷ್ಟುಲಾಭ ಎಂದು ಜನರಿಗೆ ಮನವರಿಕೆಯಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ, ಎಲ್ಲ ಜಾತಿ, ಸಮುದಾಯಗಳ ಕಲ್ಯಾಣಕ್ಕೆ ಬಿಜೆಪಿಯೇ ಭರವಸೆಯಾಗಿದೆ. ಪರಿಶಿಷ್ಟಜಾತಿ, ಪಂಗಡಗಳು ಹಾಗೂ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಇರಬಹುದು. ರೈತರ ಕಲ್ಯಾಣ ಇರಬಹುದು. ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಇರಬಹುದು ಇವೆಲ್ಲದಕ್ಕೆ ಬದ್ಧತೆ ಇರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ. ಕಾಂಗ್ರೆಸ್‌ ದೇಶಾದ್ಯಂತ ಜನರ ವಿಶ್ವಾಸ ಕಳೆದುಕೊಂಡಿದ್ದು ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಜನಾದೇಶ ಪಡೆದು ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ.

ರಾಯ​ಚೂರು ಕದನ: ಬಿಜೆ​ಪಿ ಹ್ಯಾಟ್ರಿ​ಕ್‌ ಗೆಲುವಿಗೆ ಬ್ರೇಕ್‌ ಹಾಕು​ತ್ತಾ ಕಾಂಗ್ರೆಸ್‌?

*ಅಮುಲ್‌ ಎಂದರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್‌ ಅನ್ನೋ ಆರೋಪಕ್ಕೆ ನಿಮ್ಮ ಉತ್ತರ ಏನು?

-ನಮ್ಮ ಕರ್ನಾಟಕದ ಹೆಮ್ಮೆಯ ‘ನಂದಿನಿ’ ಬ್ರ್ಯಾಂಡ್‌ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಗೋಮುಖ ವ್ಯಾಘ್ರ ಮುಖವಾಡ ಕಳಚಿ ಜನರಿಗೆ ವಾಸ್ತವಾಂಶಗಳ ಅರಿವು ಮೂಡಿಸುವ ಅಗತ್ಯವಿದೆ. ಅಮುಲ್‌ ನಮ್ಮ ರಾಜ್ಯದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಎಂದು ಅನವಶ್ಯಕ ಗೊಂದಲ ಸೃಷ್ಟಿಸಿ ಬಿಜೆಪಿ ಮೇಲೆ ಗೂಬೆ ಕೂರಿಸಲು ಹೊರಟಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ, 2017ರಿಂದಲೇ ಅಮುಲ… ಹಾಲು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಲಭ್ಯವಿರುವುದು ತಿಳಿದಿಲ್ಲವೇ? 2017ರಲ್ಲಿ ರಾಜ್ಯದಲ್ಲಿ ಯಾರ ಸರ್ಕಾರ ಇತ್ತು? 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಯಾರು? ಕಾಂಗ್ರೆಸ್‌, ಜೆಡಿಎಸ್‌ ಆಡಳಿತಾವಧಿ ಸೇರಿದಂತೆ ಕಳೆದ 7 ವರ್ಷಗಳಿಂದ ಅಮುಲ… ಹಾಲು ರಾಜ್ಯದ ಮಾರುಕಟ್ಟೆಯಲ್ಲಿದ್ದರೂ ಇಷ್ಟುದಿನ ಇಲ್ಲದ ಆಕ್ರೋಶ, ಆವೇಶ ಈಗೇಕೆ? ಹೈನುಗಾರಿಕೆ ಮಾಡುವ ರೈತರಿಗೆ ಅನುಕೂಲ ಮಾಡಿಕೊಡಲು 2008ರಲ್ಲಿ ಮೊಟ್ಟಮೊದಲ ಬಾರಿಗೆ 2 ರು. ಪ್ರೋತ್ಸಾಹ ಧನ ಕೊಟ್ಟಿದ್ದು ಮಾನ್ಯ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು 6 ರು. ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಕೆಎಂಎಫ್‌ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಮಾರುಕಟ್ಟೆವಿಸ್ತರಿಸಿ, ದೇಶದ ಇತರೆ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ನಮ್ಮ ನಂದಿನಿ ಉತ್ಪನ್ನಗಳನ್ನು ಪರಿಚಯಿಸಲು, ಆ ಮೂಲಕ ನಮ್ಮ ರೈತರ ಆದಾಯ ಇನ್ನಷ್ಟುಹೆಚ್ಚಿಸಲು ನಮ್ಮ ಬಿಜೆಪಿ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಚುನಾವಣೆ ಹೊಸ್ತಿಲಲ್ಲಿ ಜನರನ್ನು ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ನಂದಿನಿ ಬ್ರ್ಯಾಂಡ್‌ಗೆ, ನಮ್ಮ ರಾಜ್ಯಕ್ಕೆ ಮಸಿ ಬಳಿಯುವ ಪಾಪದ ಕೆಲಸ ಮಾಡುತ್ತಿದೆ. ಇದರಿಂದ ನಂದಿನಿ ಉತ್ಪನ್ನಗಳ ಮಾರುಕಟ್ಟೆವಿಸ್ತರಣೆಗೆ, ಕೆಎಂಎಫ್‌ ಸಂಸ್ಥೆಯ ಲಾಭಕ್ಕೆ, ರೈತರ ಆದಾಯಕ್ಕೆ ಧಕ್ಕೆಯಾದರೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳೇ ನೇರ ಹೊಣೆ.

*ನಟ ಸುದೀಪ್‌ಗೆ ಇ.ಡಿ., ಐಟಿ ಭಯ ಹುಟ್ಟಿಸಿ ಬಿಜೆಪಿ ಪ್ರಚಾರಕ್ಕೆ ಕರೆತಂದರು ಅಂತ ಕೆಲವರು ಹೇಳ್ತಾರೆ. ಇದರ ಬಗ್ಗೆ ಏನ್‌ ಹೇಳ್ತೀರಾ?

-ನಟ ಕಿಚ್ಚ ಸುದೀಪ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿನ ಅಭಿಮಾನಕ್ಕೆ, ಪ್ರಧಾನಿ ಮೋದಿ ಅವರ ನಾಯಕತ್ವ ಮೆಚ್ಚಿ, ಬಿಜೆಪಿಯ ಮೇಲೆ ಭರವಸೆ ಇಟ್ಟು ನಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಇ.ಡಿ, ಐಟಿ ಭಯಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷ ಕಲಾವಿದರಿಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ.

*ಮೋದಿ ಮುಖ ನೋಡಿ ರಾಜ್ಯದ ಜನತೆ ಬಿಜೆಪಿಗೆ ಮತ ಹಾಕಬೇಕಾ?

-ಪ್ರಧಾನಿ ಮೋದಿ ಅವರು ಇಂದು ಕೇವಲ ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕರಷ್ಟೆಅಲ್ಲ, ಇಡೀ ವಿಶ್ವದ ಅತ್ಯಂತ ಜನಪ್ರಿಯ, ವಿಶ್ವಾಸಾರ್ಹ ನಾಯಕರಾಗಿದ್ದಾರೆ. ನಮ್ಮ ಪಕ್ಷದಲ್ಲಿ ಅಂತಹ ಶ್ರೇಷ್ಠ ನಾಯಕರಿರುವುದು ನಮಗೆ ಹೆಮ್ಮೆಯ ವಿಷಯ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಬಿಜೆಪಿ ಡಬಲ… ಇಂಜಿನ್‌ ಸರ್ಕಾರದ ಸಾಧನೆಯ ಆಧಾರದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವವೇ ಇಲ್ಲ. ರಾಹುಲ… ಗಾಂಧಿ ಅವರು ಪ್ರಚಾರಕ್ಕೆ ಬರುವುದು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಇಷ್ಟವಿಲ್ಲ. ಇದು ಅವರ ಪರಿಸ್ಥಿತಿ.

*ಪ್ರಣಾಳಿಕೆ ಅಭಿಯಾನದ ಸಮಿತಿ ಸಂಯೋಜಕರಾಗಿದ್ದೀರಿ. ಇತರೆ ಪಕ್ಷಗಳಿಗಿಂತ ನಿಮ್ಮ ಪ್ರಣಾಳಿಕೆ ಯಾವ ರೀತಿ ವಿಭಿನ್ನವಾಗಿರುತ್ತದೆ?

-ನಮ್ಮ ಪ್ರಣಾಳಿಕೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಲಾಗುತ್ತಿರುವ ಸಂಕಲ್ಪ ಪತ್ರವಾಗಿರಲಿದೆ. ಸಹಾ ಸಂಗ್ರಹಣಾ ಅಭಿಯಾನದಡಿ ಶಿಕ್ಷಣ, ಆರೋಗ್ಯ, ಉದ್ಯಮ, ಕ್ರೀಡೆ, ಅಪಾರ್ಚ್‌ಮೆಂಟ್‌ ಅಸೋಶಿಯೇಶನ್‌ ಹೀಗೆ ಕ್ಷೇತ್ರವಾರು 50ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದೇವೆ. ನಮ್ಮ ವಿಜಯ ಸಂಕಲ್ಪ ಯಾತ್ರೆ, ಎಲ…ಇಡಿ ವ್ಯಾನ್‌ ಸಂಚರಿಸಿದ ಕಡೆಯಲ್ಲ ಅಭಿಪ್ರಾಯ ಪೆಟ್ಟಿಗೆ ಇಟ್ಟು ಜನರ ಸಲಹೆ ಪಡೆದಿದ್ದೇವೆ. ಬಿಜೆಪಿಗೆ ಪ್ರಣಾಳಿಕೆ ಭಗವದ್ಗೀತೆಯಷ್ಟೇ ಪವಿತ್ರ. ನಮ್ಮ ಪ್ರಣಾಳಿಕೆ ನೈಜತೆ, ವಾಸ್ತವತೆಯಿಂದ ಕೂಡಿರಲಿದೆ. ಕಾಂಗ್ರೆಸ್‌ ಪಕ್ಷದ ರೀತಿ ಅನುಷ್ಠಾನಗೊಳಿಸಲಾಗದ ಸುಳ್ಳು ಗ್ಯಾರಂಟಿಗಳನ್ನು ನಾವು ನೀಡುವುದಿಲ್ಲ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿಯ ಇತಿಮಿತಿ ಪರಿಗಣಿಸಿ ಪ್ರಣಾಳಿಕೆ ರೂಪಿಸುತ್ತೇವೆ.

*ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ವ್ಯಕ್ತವಾಗುತ್ತಿದೆ. 40% ಭ್ರಷ್ಟಾಚಾರ ಎಂಬ ಆರೋಪಗಳಿವೆ. ಇದಕ್ಕೆ ನಿಮ್ಮ ಪ್ರತ್ಯುತ್ತರ ಏನು?

-ದೆಹಲಿಯಿಂದ ನಾವು ಒಂದು ರು. ಕಳುಹಿಸಿದರೆ ಅದು ಜನರಿಗೆ ತಲುಪುವುಷ್ಟರಲ್ಲಿ 15 ಪೈಸೆ ಆಗಿರುತ್ತದೆ ಅಂತ ಸ್ವತಃ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಹೇಳಿದ್ದರು. ನೆಹರು-ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು ಕಾಂಗ್ರೆಸ್‌ ಪಕ್ಷದವರು ಮೂರು ನಾಲ್ಕು ತಲೆಮಾರುಗಳಿಗಾಗುವಷ್ಟುಮಾಡಿಕೊಂಡಿದ್ದೇವೆ ಅಂತ ಸ್ವತಃ ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿಡಲು ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿದ್ದು ಕಾಂಗ್ರೆಸ್‌ ಪಕ್ಷ. ಇಂತಹ ಕಾಂಗ್ರೆಸ್‌ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ಬೇಸತ್ತಿರುವುದರಿಂದಲೇ ಜನ ಕಾಂಗ್ರೆಸ್‌ ಪಕ್ಷವನ್ನು ದೇಶಾದ್ಯಂತ ತಿರಸ್ಕಾರ ಮಾಡುತ್ತಿರುವುದು. 2018ರಲ್ಲಿ 120 ಸೀಟಿನಿಂದ 78ಕ್ಕೆ ಬಂದಿದ್ದು ಇದೆ ಕಾರಣಕ್ಕಾಗಿ. ಈ 40% ಕಮಿಷನ್‌ ಎಂಬುದು ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಸೃಷ್ಟಿಸಿರುವ ಕಪೋಲಕಲ್ಪಿತ ಕಟ್ಟುಕಥೆ. ಇದನ್ನು ಜನ ನಂಬುವುದಿಲ್ಲ.

*ಈ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು?

-ನಾವು ಸಮೀಕ್ಷೆಗಳನ್ನ ಮಾಡಿಸಿದ್ದೇವೆ. ನಮ್ಮ ಪಕ್ಷದ ಸಂಘಟನೆ ವ್ಯಾಪಕವಾಗಿದ್ದು ನಮಗೆ ಜನರ ನಾಡಿಮಿಡಿತದ ಅರಿವಿದೆ. ಕನ್ನಡ ನಾಡಿನ ಜನತೆ ಈ ಬಾರಿ ಬಿಜೆಪಿಗೆ ಸ್ಪಷ್ಟಬಹುಮತ ನೀಡಿ ಆಶೀರ್ವಾದ ಮಾಡಲಿದ್ದಾರೆ. ಡಬಲ… ಇಂಜಿನ್‌ ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತೊಮ್ಮೆ ನಾಡಿನ ಸೇವೆಗೆ ಮರಳಲಿದೆ.

*ಪದೇ ಪದೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಿರುವ ಹಿಂದೆ ಬಿಜೆಪಿಗೆ ಸೋಲಿನ ಭಯ ಅಡಗಿದೆಯೇ?

-ಭಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಇದೆ. ಪ್ರಧಾನಿ ಮೋದಿ ಅವರಂತಹ ಜನಪ್ರಿಯ ನಾಯಕರು ಅವರ ಬಳಿ ಇಲ್ಲ ಎಂದು ಅವರಿಗೆ ಪಾಪ ಹೊಟ್ಟೆಕಿಚ್ಚು. ಅವರ ನಾಯಕರನ್ನು ಪ್ರಚಾರಕ್ಕೆ ಬರಬೇಡಿ ಎಂದು ಹೇಳುವ ದುಸ್ಥಿತಿ ಕಾಂಗ್ರೆಸ್‌ ಪಕ್ಷದ್ದು.

*ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ತರಾತುರಿಯಲ್ಲಿ ಹಲವಾರು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ರಿ. ಅದರ ಬಗ್ಗೆ ಏನು ಹೇಳ್ತೀರಿ?

-ಒಂದು ಅವಧಿಯಲ್ಲಿ ಒಂದು ಕಾಮಗಾರಿಗೆ ಅನುಮೋದನೆ ನೀಡಿ, ಕಾಮಗಾರಿ ಆರಂಭಿಸಿ ಅದನ್ನು ಪೂರ್ಣಗೊಳಿಸುವ ಬದ್ಧತೆ, ಕಾರ್ಯದಕ್ಷತೆ ಯಾವುದಾದರೂ ಪಕ್ಷಕ್ಕಿದ್ದರೆ ಅದು ಬಿಜೆಪಿ ಪಕ್ಷಕ್ಕೆ ಮಾತ್ರ. ಕಾಂಗ್ರೆಸ್‌ ಕಾಲದಲ್ಲಿ ಶಂಕುಸ್ಥಾಪನೆ ಮಾಡಿ ದಶಕಗಳಾದರು ಕಾಮಗಾರಿ ನೆನೆಗುದಿಗೆ ಬಿದ್ದಿರುವ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ಪ್ರಧಾನಿ ಮೋದಿ ಅವರು ಬಂದಮೇಲೆ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿವೆ. ಇದೇ ವ್ಯತ್ಯಾಸ.

ಮೈತ್ರಿ ಸರ್ಕಾರದ ಸಾಲಮನ್ನಾ ಹಣ ಬೇರೆ ಕೆಲಸಕ್ಕೆ ಬಳಕೆ: ಬಿಜೆಪಿ ಸರ್ಕಾರದಿಂದ ರೈತರಿಗೆ ಅನ್ಯಾಯ : ಎಚ್‌ಡಿಕೆ

*ಬೇರೆ ಪಕ್ಷಗಳಿಗೆ ಹೋಲಿಸಿದರೆ ಈ ಬಾರಿ ಚುನಾವಣೆ ಬಗ್ಗೆ ಬಿಜೆಪಿ ಅಷ್ಟಾಗಿ ಪೂರ್ವ ತಯಾರಿ ಮಾಡಿಕೊಂಡಿಲ್ಲ ಅನ್ನಿಸುತ್ತದೆ. ನಿಮ್ಮ ಉತ್ತರವೇನು?

-ಬಿಜೆಪಿ ಬೇರೆ ಪಕ್ಷಗಳ ರೀತಿ ಅಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಶಿಸ್ತಿನ ಪಕ್ಷ. ಸಂಘಟನೆ ಗಟ್ಟಿಯಾಗಿರುವ ಪಕ್ಷ. ಇಲ್ಲಿ ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತದೆ. ಅದು ಒಂದು ತಾಲ್ಲೂಕು ಪಂಚಾಯಿತಿ ಚುನಾವಣೆ ಇರಲಿ, ಪಾರ್ಲಿಮೆಂಚ್‌ ಚುನಾವಣೆ ಇರಲಿ, ನಮ್ಮ ಪಕ್ಷದಲ್ಲಿ ಪ್ರತಿಯೊಂದು ಚುನಾವಣೆಯನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈ ವಿಧಾನಸಭೆ ಚುನಾವಣೆಗೂ ನಾವು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಫಲಿತಾಂಶ ಬಂದಾಗ ನಿಮಗೇ ಗೊತ್ತಾಗಲಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!