ರಾಯ​ಚೂರು ಕದನ: ಬಿಜೆ​ಪಿ ಹ್ಯಾಟ್ರಿ​ಕ್‌ ಗೆಲುವಿಗೆ ಬ್ರೇಕ್‌ ಹಾಕು​ತ್ತಾ ಕಾಂಗ್ರೆಸ್‌?

By Kannadaprabha News  |  First Published Apr 14, 2023, 9:47 AM IST

ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರೋ ಬಿಜೆಪಿ ಅಭ್ಯರ್ಥಿ ಪಾಟೀಲ್‌, ಸದಾ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕುತ್ತಿರುವ ಕಾಂಗ್ರೆಸ್‌, ಸೈಯದ್‌ ಯಾಸೀನ್‌ಗೆ ಈ ಬಾರಿಯೂ ‘ಕೈ’ ಟಿಕೆಟ್‌ ಸಿಗುತ್ತಾ?. 


ರಾಮ​ಕೃಷ್ಣ ದಾಸರಿ

ರಾಯಚೂರು(ಏ.14):  ಜಿಲ್ಲೆಯ ಶಕ್ತಿ ಕೇಂದ್ರ ಎನಿ​ಸಿ​ಕೊಂಡಿ​ರುವ ರಾಯ​ಚೂರು ನಗರ ವಿಧಾ​ನ​ಸಭಾ ಕ್ಷೇತ್ರ ಒಂದು ಕಾಲ​ದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ​. ಆದರೆ, ಕಳೆದ ಎರಡೂ ಅವ​ಧಿ​ಯಲ್ಲಿ ಸೋಲು ಕಂಡಿದ್ದು, ಅದರ ಸೇಡನ್ನು ಪ್ರಸಕ್ತ ಚುನಾ​ವ​ಣೆ​ಯಲ್ಲಿ ತೀರಿ​ಸಿಕೊ​ಳ್ಳುವ ತವ​ಕ​ದ​ಲ್ಲಿದೆ. ಕ್ಷೇತ್ರದ ಇತಿ​ಹಾ​ಸ​ದಲ್ಲಿ ಎರಡು ಸಲ ಗೆಲು​ವು​ ಕಂಡಿರುವ ಬಿಜೆಪಿ ಮೂರನೇ ಬಾರಿ ಗೆಲ್ಲ​ಬೇಕು ಎನ್ನುವ ಛಲ ಹೊಂದಿ​ದೆ. ಅದೇ ರೀತಿ ಹಾಲಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌ ಕೂಡ ಸತತ ಎರಡು ಬಾರಿ ಶಾಸ​ಕ​ರಾಗಿ ಆಯ್ಕೆ​ಯಾ​ಗಿದ್ದಾರೆ. ಹೀಗಾಗಿ, ಪಕ್ಷದ ಟಿಕೆಟ್‌ ಪಡೆದಿರುವ ಡಾ.ಶಿ​ವ​ರಾಜ ಪಾಟೀಲ್‌ ಹ್ಯಾಟ್ರಿ​ಕ್‌ ಗೆಲುವು ಸಾಧಿಸಲು ರಣ​ತಂತ್ರ ರೂಪಿ​ಸುತ್ತಿದ್ದಾರೆ. ಬಿಜೆಪಿಯ ಹ್ಯಾಟ್ರಿಕ್‌ ಗೆಲುವಿಗೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಕೂಡ ತೀವ್ರ ಕಸ​ರತ್ತು ನಡೆ​ಸು​ತ್ತಿ​ದೆ.

Latest Videos

undefined

ಕಾಂಗ್ರೆ​ಸ್‌ನಿಂದ 17 ಅಭ್ಯ​ರ್ಥಿ​ಗಳು ಅರ್ಜಿ ಸಲ್ಲಿ​ಸಿದ್ದು, ಇವ​ರಲ್ಲಿ ಮಾಜಿ ಶಾಸ​ಕ​ರಾದ ಸೈಯದ್‌ ಯಾಸೀನ್‌ ಹಾಗೂ ಎನ್‌.​ಎ​ಸ್‌.​ಬೋ​ಸ​ರಾಜು ಹೆಸರು ಅಂತಿ​ಮ ಪಟ್ಟಿ​ಯ​ಲ್ಲಿದೆ. ಹಿಂದಿ​ನಿಂದಲೂ ಕಾಂಗ್ರೆಸ್‌ ಮುಸ್ಲಿಂ ಸಮು​ದಾ​ಯ​ದ​ವ​ರಿಗೆ ಟಿಕೆಟ್‌ ನೀಡುತ್ತಾ ಬಂದಿದೆ. ಈ ಬಾರಿಯೂ ಮುಸ್ಲಿಂ ಸಮಾ​ಜಕ್ಕೆ ಟಿಕೆಟ್‌ ನೀಡ​ಬೇಕು ಎನ್ನುವ ಕೂಗು ಕ್ಷೇತ್ರ​ದಲ್ಲಿ ಬಲ​ವಾಗಿ ಕೇಳಿ​ ಬ​ರು​ತ್ತಿದೆ. ಕಳೆ​ದೆ​ರಡು ಚುನಾ​ವ​ಣೆ​ಯಲ್ಲಿ ಸೋಲುಂಡಿ​ರು​ವ ಮಾಜಿ ಶಾಸಕ ಸೈಯದ್‌ ಯಾಸೀನ್‌ಗೆ ಟಿಕೆಟ್‌ ತಪ್ಪಿ​ದರೆ ಅದೇ ಸಮು​ದಾ​ಯ​ದ​ವ​ರಿಗೆ ಟಿಕೆಟ್‌ ಕೊಡ​ಬೇಕು ಎನ್ನುವ ಒತ್ತಡವನ್ನು ಹೈಕ​ಮಾಂಡ್‌ ಮೇಲೆ ಹೇರ​ಲಾ​ಗಿ​ದೆ. ಇನ್ನು, ಜೆಡಿಎಸ್‌ ಕಾದು ​ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಜೆಡಿ​ಎಸ್‌ನಿಂದ ಅಧಿ​ಕೃ​ತ​ವಾಗಿ ಟಿಕೆಟ್‌ ಘೋಷ​ಣೆ​ಯಾ​ಗದೆ ಇದ್ದರೂ, ಇ.ವಿ​ನಯ್‌ ಕುಮಾರ್‌ ಅವರು ಕ್ಷೇತ್ರ​ದಲ್ಲಿ ಜೆಡಿಎಸ್‌ ಪರ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌, ಮುಸ್ಲಿಂ ಸಮು​ದಾ​ಯ​ಕ್ಕೆ ಟಿಕೆ​ಟ್‌​ ನೀಡು​ತ್ತ​ದೋ, ಇಲ್ವೋ ಎನ್ನು​ವು​ದ​ನ್ನಾ​ಧ​ರಿಸಿ ಜೆಡಿ​ಎಸ್‌ ಅಂತಿಮ ನಿರ್ಧಾ​ರಕ್ಕೆ ಬರುವ ಸಾಧ್ಯ​ತೆ​ಯಿದೆ.

ಟಿಕೆಟ್ ಘೋಷಣೆ ವಿಳಂಬ: ರಾಯಚೂರಲ್ಲಿ ರಂಗೇರದ ಚುನಾವಣಾ ಅಖಾಡ..!

ಈಗಾ​ಗಲೇ ಎರಡು ಸಲ ಶಾಸ​ಕ​ರಾ​ಗಿ​ರುವ ಡಾ.ಶಿ​ವ​ರಾಜ ಪಾಟೀಲ್‌ ಅವರು ಮತ್ತೊಮ್ಮೆ ಬಿಜೆ​ಪಿಯಿಂದ​ ಕಣ​ಕ್ಕಿ​ಳಿ​ದು ಮೂರನೇ ಬಾರಿಯೂ ಶಾಸ​ಕ​ರಾ​ಗಲು ಪ್ರಯ​ತ್ನ​ ನಡೆ​ಸಿ​ದ್ದಾರೆ. 2013ರಲ್ಲಿ ನಡೆದ ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಜೆಡಿ​ಎ​ಸ್‌​ನಿಂದ ಮೊದಲ ಬಾರಿಗೆ ಶಾಸ​ಕ​ರಾ​ಗಿದ್ದ ಡಾ.ಶಿ​ವ​ರಾಜ ಪಾಟೀಲ್‌, 2018ರ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯಿಂದ ಟಿಕೆಟ್‌ ಪಡೆದು ಗೆದ್ದು, 2ನೇ ಸಲ ಶಾಸಕರಾದರು. ಡಾ.ಶಿ​ವ​ರಾಜ ಪಾಟೀಲ್‌ ಅವರು ತಾವು ಎದು​ರಿ​ಸಿದ ಎರಡೂ ಚುನಾ​ವ​ಣೆ​ಗಳಲ್ಲಿ ಕಾಂಗ್ರೆ​ಸ್‌ನ ಸೈಯದ್‌ ಯಾಸೀನ್‌ ಅವ​ರನ್ನೇ ಸೋಲಿಸಿದ್ದು, ಮೂರನೇ ಬಾರಿಯೂ ಕಾಂಗ್ರೆ​ಸ್‌ಗೆ ಸೋಲಿನ ರುಚಿ​ ತೋರಿ​ಸಲು ಸಜ್ಜಾ​ಗಿ​ದ್ದಾ​ರೆ.

ಕ್ಷೇತ್ರದಲ್ಲಿ ಈವರೆಗೆ 14 ವಿಧಾ​ನ​ಸಭಾ ಚುನಾ​ವ​ಣೆ​ಗಳು ನಡೆದಿವೆ. ಆ ಪೈಕಿ, ಕೇವಲ 2 ಬಾರಿ (2004 ರಲ್ಲಿ ಎ.ಪಾ​ಪಾ​ರೆಡ್ಡಿ, 2018ರಲ್ಲಿ ಡಾ.ಶಿ​ವ​ರಾಜ ಪಾಟೀ​ಲ್‌) ಮಾತ್ರ ಬಿಜೆಪಿ ಗೆದ್ದಿದ್ದು, ಈ ಸಲ ಹ್ಯಾಟ್ರಿಕ್‌ ಬಾರಿ​ಸು​ವ ಮೂಲಕ ಕ್ಷೇತ್ರ​ವನ್ನು ತನ್ನ ಹಿಡಿ​ತ​ದ​ಲ್ಲೇ ಇಟ್ಟುಕೊ​ಳ್ಳು​ವು​ದಕ್ಕೆ ಬಿಜೆಪಿ ರಣ​ತಂತ್ರ​ ರೂಪಿ​ಸು​ತ್ತಿ​ದೆ. ಕಾಂಗ್ರೆ​ಸ್‌​ನಿಂದ 5 ಸಲ ನಿರಂತ​ರ​ವಾಗಿ ಸ್ಪರ್ಧಿ​ಸಿದ್ದ ಸೈಯದ್‌ ಯಾಸೀನ್‌ 1999, 2008ರಲ್ಲಿ ಗೆದ್ದು ಶಾಸ​ಕ​ರಾ​ಗಿದ್ದರು. 2004, 2013 ಮತ್ತು 2018ರಲ್ಲಿ ಸೋತಿದ್ದಾರೆ.

ಕ್ಷೇತ್ರದ ಹಿನ್ನೆಲೆ:

ಇಲ್ಲಿಯ ತನಕ ನಡೆದ 14 ವಿಧಾ​ನ​ಸಭಾ ಚುನಾ​ವ​ಣೆ​ಗಳಲ್ಲಿ 7 ಬಾರಿ ಕಾಂಗ್ರೆಸ್‌, ತಲಾ ಎರಡು ಬಾರಿ ಬಿಜೆಪಿ-ಜನ​ತಾ​ದಳ, ತಲಾ ಒಂದು ಬಾರಿ ಎಸ್‌​ಎ​ಸ್‌ಪಿ - ಜನ​ತಾ​ ಪಕ್ಷ ಹಾಗೂ ಜೆಡಿ​ಎಸ್‌ಗಳು ಗೆದ್ದಿವೆ. ಪ್ರಸ್ತುತ ಶಾಸ​ಕ​ರಾ​ಗಿ​ರುವ ಡಾ.ಶಿ​ವ​ರಾಜ ಪಾಟೀಲ್‌ ಅವರು ಸತತ ಎರಡು ಸಲ ಗೆಲುವು ಕಂಡಿದ್ದು, ಮೂರನೇ ಬಾರಿ​ ಕ​ಣ​ಕ್ಕಿ​ಳಿ​ಯಲು ಯತ್ನ ನಡೆ​ಸಿ​ದ್ದಾ​ರೆ.

ರಾಯಚೂರಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುತ್ತೇನೆ: ಡಾ.ಶಿವರಾಜ್ ಪಾಟೀಲ್

ಜಾತಿ ಲೆಕ್ಕಾ​ಚಾರ:

ರಾಯಚೂರು ನಗರ ಕ್ಷೇತ್ರದಲ್ಲಿ ಒಟ್ಟು 2,29,475 ಮತ​ದಾ​ರ​ರಿ​ದ್ದಾರೆ. ಇವರಲ್ಲಿ ಮುಸ್ಲಿಂ ಮತ್ತು ಎಸ್ಸಿ,ಎಸ್ಟಿವರ್ಗದವರೇ ನಿರ್ಣಾಯಕರು. ಕ್ಷೇತ್ರ​ದಲ್ಲಿ 63,000 ಮುಸ್ಲಿಮರು, 55,000 ಪರಿಶಿಷ್ಟಜಾತಿ-ಪರಿ​ಶಿಷ್ಟಪಂಗ​ಡ​ದವ​ರು, 30,000 ಒಬಿಸಿ ಹಾಗೂ 25,000 ಲಿಂಗಾ​ಯತರಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!