ಸಿದ್ದು, ಡಿಕೆಶಿ ಸದಾ ಉತ್ತರ-ದಕ್ಷಿಣ ಧ್ರುವ: ಸಚಿವ ಸುಧಾಕರ್‌ ವ್ಯಂಗ್ಯ

By Govindaraj S  |  First Published Oct 28, 2022, 3:00 AM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ಉತ್ತರ-ದಕ್ಷಿಣ ಧ್ರುವಗಳಿದ್ದಂತೆ. ಆದ್ದರಿಂದ ಒಬೊಬ್ಬರು ಒಂದೊಂದು ದಿಕ್ಕಿಗೆ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವ್ಯಂಗ್ಯವಾಡಿದರು. 


ಮೈಸೂರು (ಅ.28): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ಉತ್ತರ-ದಕ್ಷಿಣ ಧ್ರುವಗಳಿದ್ದಂತೆ. ಆದ್ದರಿಂದ ಒಬೊಬ್ಬರು ಒಂದೊಂದು ದಿಕ್ಕಿಗೆ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವ್ಯಂಗ್ಯವಾಡಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ನೆನಪಿಗೆ ಬಾರದ ಜನರ ಸಂಕಷ್ಟ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕರಿಗೆ ನೆನಪಾಗುತ್ತಿದೆ. 

ಚುನಾವಣೆ ಹತ್ತಿರ ಬಂದಾಗ ಪಾದಯಾತ್ರೆ ನಡೆಸುವುದು ಸಾಮಾನ್ಯ. ಕಾಂಗ್ರೆಸ್‌ನವರ ಯಾತ್ರೆಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ ಎಂದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಶಾಸಕರಲ್ಲಿ ಯಾರೂ ವಾಪಸ್‌ ಹೋಗುವುದಿಲ್ಲ. ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಕೂಡ ಮತ್ತೆ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

Chikkaballapur: ದತ್ತು ಪಡೆದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಸಚಿವ ಸುಧಾಕರ್

ನಮ್ಮ ಕ್ಲಿನಿಕ್‌ ಯೋಜನೆ ಮಂದಗತಿ ಅನುಷ್ಠಾನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಮ್ಮ ಕ್ಲಿನಿಕ್‌ ಯೋಜನೆ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗ ಮಟ್ಟದಲ್ಲಿ ನಮ್ಮ ಕ್ಲಿನಿಕ್‌ ಕುರಿತ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ವಿಭಾಗದ 8 ಜಿಲ್ಲೆಯಿಂದ 43 ನಮ್ಮ ಕ್ಲಿನಿಕ್‌ ತೆರೆಯಲು ಚಿಂತಿಸಲಾಗಿದ್ದು, ಈ ಪೈಕಿ ಮೈಸೂರು ಮತ್ತು ಕೊಡಗಿನಲ್ಲಿ ಮಾತ್ರ ತಲಾ ಒಂದೊಂದು ಕ್ಲಿನಿಕ್‌ ಉದ್ಘಾಟನೆಗೆ ಸಿದ್ಧವಾಗಿದೆ. ಉಳಿದ ಕಡೆ ಇನ್ನೂ ಪ್ರಗತಿಯಲ್ಲಿದೆ ಎಂದರು.

ಈ ಅಂಕಿ ಅಂಶಗಳನ್ನು ಗಮನಿಸಿದ ಸಚಿವರು, ಕೂಡಲೇ ನವೆಂಬರ್‌ನಲ್ಲಿ ನಮ್ಮ ಕ್ಲಿನಿಕ್‌ ತೆರೆಯಲು ಸಿದ್ಧತೆ ಮಾಡಿಕೊಳ್ಳಿ. ರಾಜ್ಯಮಟ್ಟದಲ್ಲಿ ಇದಕ್ಕೂ ಚಾಲನೆ ನೀಡಬೇಕು ಎಂದರು. ಇದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ನವೆಂಬರ್‌ ಅಂತ್ಯಕ್ಕೆ ಎಲ್ಲಾವೂ ಪೂರ್ಣಗೊಳ್ಳುವ ಸಾಧ್ಯತೆ ಇರುವುದರಿಂದ ಡಿಸೆಂಬರ್‌ನಲ್ಲಿ ಉದ್ಘಾಟಿಸಿದರೆ ಒಳಿತು ಎಂದರು. ಮೈಸೂರಿನ ಶ್ರೀರಾಂಪುರದಲ್ಲಿ ನಮ್ಮ ಕ್ಲಿನಿಕ್‌ ಉದ್ಘಾಟನೆಗೆ ಸಿದ್ಧವಿದ್ದು, ತಾವು ಉದ್ಘಾಟಿಸಬುದು ಎಂದು ಡಿಎಚ್‌ಒ ಡಾ.ಕೆ.ಎಚ್‌. ಪ್ರಸಾದ್‌ ಮಾಹಿತಿ ನೀಡಿದರು. ಆದರೆ ಸಚಿವರು ರಾಜ್ಯ ಮಟ್ಟದ ಕಾರ್ಯಕ್ರಮದ ಬಳಿಕವಷ್ಟೇ ಎಲ್ಲವೂ ಆರಂಭವಾಗಲಿ. ಅಲ್ಲಿಯವರೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಚಾಮರಾಜನಗರಕ್ಕೆ 3 ನಮ್ಮ ಕ್ಲಿನಿಕ್‌ ಮಂಜೂರಾಗಿದ್ದು, ಖಾಸಗಿ ಕಟ್ಟಡದಲ್ಲಿ ಸ್ಥಳ ಗುರುತಿಸಲಾಗಿದೆ. ಒಂದು ಕ್ಲಿನಿಕ್‌ಗೆ ಮಾತ್ರ ವೈದ್ಯರು ನೇಮಕವಾಗಿದ್ದು, ಮತ್ತೆರಡು ಕಡೆಗೆ ವೈದ್ಯರು ಬೇಕಿದ್ದಾರೆ, ಉಳಿದಂತೆ ಎಲ್ಲವೂ ಸಿದ್ಧವಾಗುತ್ತಿದೆ ಎಂದು ಡಿಎಚ್‌ಒ ತಿಳಿಸಿದರು. ವೈದ್ಯರೇ ಇಲ್ಲದೆ ಬೇರೆಲ್ಲವೂ ಇದ್ದರೆ ಏನು ಪ್ರಯೋಜನ ಎಂದು ಸಚಿವರು ಪ್ರಶ್ನಿಸಿದರು. ಅಲ್ಲದೆ ಯಾವುದೇ ಕಾರಣಕ್ಕೂ ಮೊದಲ ಮಹಡಿಯಲ್ಲಿ ಕ್ಲಿನಿಕ್‌ ತೆರೆಯಬಾರದು. ನೆಲ ಮಹಡಿಯಲ್ಲಿಯೇ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಬೇಕು. ಕಟ್ಟಡದ ಒಳಾಂಗಣ ವಿನ್ಯಾಸವು ನಾವು ನೀಡಿದ ಮಾದರಿಯಲ್ಲಿಯೇ ರಚನೆ ಆಗಬೇಕು. ಅಲ್ಲದೆ ಈ ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಡಿಎಚ್‌ಒಗಳು ಮಾಡಬೇಕು ಎಂದರು.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು

ಅಲ್ಲದೆ ಇಲಾಖೆ ಅಧಿಕಾರಿಗಳನ್ನು ನಂಬಿಕೊಂಡರೆ ಸರ್ಕಾರದ ಯೋಜನೆ ಜನರಿಗೆ ತಲುಪುವುದಿಲ್ಲ. ಆದ್ದರಿಂದ ಖಾಸಗಿ ಏಜೆನ್ಸಿಯೊಂದನ್ನು ನೇಮಿಸಿ ಪ್ರಚಾರ ಮಾಡಿ ಎಂದು ಸೂಚಿಸಿದರು. ಆಯುಷ್ಮಾನ್‌ ಭಾರತ್‌ ಸೇರಿದಂತೆ ವಿವಿಧ ಯೋಜನೆಯ ಸವಲತ್ತು ತಲುಪಿಸಬೇಕು. ತಾಂತ್ರಿಕ ಸಮಸ್ಯೆಯ ನೆಪ ಹೇಳಿಕೊಂಡು ಕೂರಬಾರದು. ಮೈಸೂರಿನಲ್ಲಿ ಇಂಟರ್‌ನೆಟ್‌ನ ಅಂತಹ ಸಮಸ್ಯೆ ತಲೆದೋರುತ್ತದೆ ಎನಿಸುವುದಿಲ್ಲ ಎಂದು ಅವರು ಹೇಳಿದರು.

click me!