
ಕೆ.ಆರ್.ಪೇಟೆ (ಮಾ.17): ಸಚಿವ ಕೆ.ಸಿ.ನಾರಾಯಣಗೌಡ ನಮ್ಮ ಪಕ್ಷದ ಸೂಪರ್ ಸ್ಟಾರ್. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲು ನಾರಾಯಣಗೌಡರು ಪ್ರಮುಖರಾಗಿದ್ದಾರೆ. ಅವರು ಎಲ್ಲೂ ಹೋಗಲ್ಲ. ಅವರನ್ನು ನಾನು ಕರೆಯೊದು ನಮ್ಮ ಬಹದ್ದೂರ್ ಗಂಡು ಅಂತಾ. ಮತ್ತೊಮ್ಮೆ ನಮ್ಮ ಪಕ್ಷದಿಂದ ಶಾಸಕರಾಗುತ್ತಾರೆ ಹಾಗೂ ಮಂತ್ರಿಯೂ ಆಗುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಬದಲಾವಣೆಗೆ ಕ್ರೀಡೆ ಬಹುದೊಡ್ಡ ಶಕ್ತಿ: ಪ್ರಗತಿಯ ಸಂಕೇತವಾಗಿರುವ ಆಟದ ಮೈದಾನಗಳನ್ನು ಪ್ರತಿ ಗ್ರಾಪಂ ಮಟ್ಟದಲ್ಲಿಯೂ ನಿರ್ಮಾಣವಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದ ಆವರಣದಲ್ಲಿ ರಾಜ್ಯ ಕ್ರೀಡಾ ಇಲಾಖೆಯಿಂದ ನಿರ್ಮಿಸಿರುವ ಜಗದ್ಗುರು ಡಾ.ಬಾಲಗಂಗಾಧರನಾಥ್ ಮಹಾ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ನಂತರ 2022-23ನೇ ಸಾಲಿನ ರಾಜ್ಯ ಮಟ್ಟದ ಖೋ-ಖೋ, ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಚಿವ ನಾರಾಯಣ ಗೌಡ ಮಾ.21ಕ್ಕೆ ಕಾಂಗ್ರೆಸ್ ಸೇರ್ಪಡೆ ಅಧಿಕೃತ
ನಾವೆಲ್ಲರೂ ವೃತ್ತಿಪರ ಕ್ರೀಡಾಪಟುಗಳಾಗದಿದ್ದರೂ ಕ್ರೀಡೆಯನ್ನು ನಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಮಕ್ಕಳು ದುಶ್ಚಟದಿಂದ ದೂರವಾಗಲು, ಮೊಬೈಲ್ ಸಂಸ್ಕೃತಿಯಿಂದ ಹೊರಬರಬೇಕಾದರೆ ಕ್ರೀಡೆ ನೆರವಾಗಲಿದೆ ಎಂದರು. ಎಲ್ಲಾ ಜಾತಿ, ಧರ್ಮಗಳನ್ನು ಒದ್ದೂಡಿಸುವ ಶಕ್ತಿ ಕ್ರೀಡೆಗಿದೆ. ಕ್ರೀಡೆ ನಮ್ಮ ಬದಲಾವಣೆಗೆ ಬಹುದೊಡ್ಡ ಶಕ್ತಿ. ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುತ್ತದೆ. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಉಳಿಸಲು ಮುಂದಾಗಬೇಕು ಎಂದರು. ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಕೊಡುಗೆ ಅಪಾರ.
ಅವರ ದಾರಿಯಲ್ಲಿಯೇ ಡಾ.ನಿರ್ಮಲಾನಂದನಾಥ ಶ್ರೀಗಳು ಸಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಕೊರತೆಯನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ನೀಗಿಸುತ್ತಿದೆ ಎಂದರು. ರಾಜ್ಯ ಸರ್ಕಾರ ಪಟ್ಟಣದ ಒಳಾಂಗಣ ಕ್ರೀಡಾಂಗಣಕ್ಕೆ ಬಾಲಗಂಗಾಧರನಾಥ ಶ್ರೀಗಳ ಹೆಸರನ್ನಿಡುವ ಮೂಲಕ ಗೌರವ ಸಮರ್ಪಣೆ ಮಾಡುತ್ತಿದೆ. ಅಲ್ಲದೇ, ವಿಶ್ವ ದರ್ಜೆಯ ಹೈಟೆಕ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ತಾಲೂಕಿನ ಎಲ್ಲ ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ಕನಸು ಮಾಜಿ ಸ್ಪೀಕರ್ ಕೃಷ್ಣ ಅವರಿಗಿತ್ತು. ಕೃಷ್ಣ ಅವರ 40 ವರ್ಷಗಳ ರಾಜಕೀಯ ಜೀವನದ ಕನಸನ್ನು ನಾನು ನನಸು ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಸೇರಲಿರುವ ಸಚಿವ ನಾರಾಯಣಗೌಡ ಮೋದಿ ಕಾರ್ಯಕ್ರಮದಲ್ಲಿ ಭಾಗಿ
ಈ ವೇಳೆ ಮಾಜಿ ಸ್ಪೀಕರ್ ಕೃಷ್ಣರ ಆತ್ಮ ಚರಿತ್ರೆ ಅಂತರಾಳದ ಮಾತು ಕೃತಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಒಳಾಂಗಣದ ಕ್ರೀಡಾಂಗಣದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಡಾ.ಅಶ್ವತ್ಥನಾರಾಯಣ, ಕೆ.ಸಿ.ನಾರಾಯಣಗೌಡ ಮತ್ತಿತರರು ಬ್ಯಾಡ್ಮಿಂಟನ್ ಆಟ ಆಡಿದರು. ಸಮಾರಂಭದಲ್ಲಿ ಕೊಮ್ಮೇರಹಳ್ಳಿ ಆದಿ ಚುಂಚನಗಿರಿ ವಿಶ್ವ ಮಾನವ ಸಂಸ್ಥೆಯ ಪುರುಷೋತ್ತಮಾನಂದ ಸ್ವಾಮೀಜಿ, ಮಾಜಿ ಸ್ಪೀಕರ್ ಕೃಷ್ಣರ ಪತ್ನಿ ನಿವೃತ್ತ ಪ್ರೊ.ಇಂದಿರಮ್ಮ, ರಾಜ್ಯ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿರಜನೀಶ್, ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಹಲವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.