ಮಂಡ್ಯ ಜಿಲ್ಲೆ ಜವಾಬ್ದಾರಿ ನನ್ನದೇ, ಪ್ರಚಾರದ ಉಸ್ತುವಾರಿ ನಾನೇ ವಹಿಸುವೆ: ಎಚ್‌.ಡಿ.ದೇವೆಗೌಡ

By Kannadaprabha NewsFirst Published Mar 17, 2023, 9:42 PM IST
Highlights

2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜವಾಬ್ದಾರಿ ನನ್ನದೇ. ನಾನೇ ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ಈ ಚುನಾವಣೆಯಲ್ಲೂ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಗೆಲ್ಲುವುದು ಎಲ್ಲರ ಗುರಿಯಾಗಬೇಕು. 

ಮಂಡ್ಯ ಮಂಜುನಾಥ

ಮಂಡ್ಯ (ಮಾ.17): 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜವಾಬ್ದಾರಿ ನನ್ನದೇ. ನಾನೇ ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ಈ ಚುನಾವಣೆಯಲ್ಲೂ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಗೆಲ್ಲುವುದು ಎಲ್ಲರ ಗುರಿಯಾಗಬೇಕು. ಯಾರೂ ದೃತಿಗೆಡಬಾರದು ಎಂದು ಮಂಡ್ಯ ಜಿಲ್ಲೆಯ ಘೋಷಿತ ಚುನಾವಣಾ ಅಭ್ಯರ್ಥಿಗಳಿಗೆ ಜೆಡಿಎಸ್‌ ರಾಷ್ಟಾ್ರಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೂಚನೆ ನೀಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಇತ್ತೀಚೆಗೆ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದಿದ್ದ ಎಚ್‌.ಡಿ.ದೇವೇಗೌಡರು ಕ್ಷೇತ್ರವಾರು ಅಭ್ಯರ್ಥಿಗಳೊಂದಿ ಪ್ರತ್ಯೇಕವಾಗಿ ಸಭೆ ನಡೆಸಿ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ಮಂಡ್ಯ ಜಿಲ್ಲೆಯೊಳಗೆ ಜೆಡಿಎಸ್‌ಗೆ ಗಟ್ಟಿನೆಲೆ ಇದೆ. ಎಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಿ. ಬೇರೆ ಕ್ಷೇತ್ರಗಳ ವಿಚಾರದಲ್ಲಿ ಮೂಗು ತೂರಿಸಬೇಡಿ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ. ಕೊನೆಯ ಹಂತದ ಕಾರ್ಯಕರ್ತರನ್ನೂ ಅಭ್ಯರ್ಥಿಗಳು ಭೇಟಿಯಾಗಬೇಕು. ಗ್ರಾಪಂ ಮಟ್ಟದಲ್ಲಿರುವ ಕಾರ್ಯಕರ್ತರನ್ನು ಒಗ್ಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಯಾವ ಯಾವ ಕ್ಷೇತ್ರದಲ್ಲಿ ಯಾವ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುಳಿದವರ್ಗದವರು ಎಷ್ಟಿದ್ದಾರೆ. ಸಣ್ಣ-ಸಣ್ಣ ಸಮುದಾಯದವರು ಎಷ್ಟುಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ. 

ಕಾಂಗ್ರೆಸ್‌ ಪಕ್ಷ ಮುಳುಗುವ ಹಡಗು: ಸಿಎಂ ಬೊಮ್ಮಾಯಿ

ಒಕ್ಕಲಿಗರು, ಹಿಂದುಳಿದ ವರ್ಗದವರು ಸೇರಿದಂತೆ ಆಯಾ ಕ್ಷೇತ್ರದಲ್ಲಿರುವ ಪ್ರಬಲ ಸಮುದಾಯಗಳ ಜೊತೆಗೆ ಸಣ್ಣ ಸಮುದಾಯಗಳ ಮತಗಳನ್ನೂ ಕ್ರೋಢೀಕರಿಸಿಕೊಳ್ಳಿ. ಎಷ್ಟೋ ಸಂದರ್ಭಗಳಲ್ಲಿ ಈ ಸಮುದಾಯದ ಮತಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆದಾಗ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ನಮ್ಮ ಸರ್ಕಾರದ ರೈತಪರ-ಜನಪರ ಯೋಜನೆಗಳು, ಸಾಧನೆಗಳನ್ನು ಜನರಿಗೆ ತಲುಪಿಸಿ. ರೈತರ ಸಾಲ ಮನ್ನಾದಿಂದ ಅನುಕೂಲ ಪಡೆದ ಕುಟುಂಬಗಳೆಷ್ಟುಎನ್ನುವುದನ್ನು ಕ್ಷೇತ್ರದೊಳಗೆ ವಿವರಿಸಿ. 

ಮಹಿಳಾ ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದನ್ನು ಹೆಚ್ಚು ಪ್ರಚಾರ ಮಾಡುವುದರಿಂದ ಮಹಿಳೆಯರೂ ಆಕರ್ಷಿತರಾಗುತ್ತಾರೆ, ಮಹಿಳಾ ಮತದಾರರನ್ನು ಪಕ್ಷದ ಕಡೆಗೆ ಸೆಳೆದಂತಾಗುತ್ತದೆ ಎಂಬ ಸಲಹೆಯನ್ನು ನೀಡಿದ್ದಾರೆ. ಪಂಚಾಯ್ತಿವಾರು ಮುಖಂಡರು, ಕಾರ್ಯಕರ್ತರು ಯಾರು ಯಾರಿದ್ದಾರೋ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಜೆಡಿಎಸ್‌ ಪರವಾದ ವಾತಾವರಣ ಎಲ್ಲಿಯೂ ಬದಲಾವಣೆಯಾಗದಂತೆ ಜಾಗೃತಿ ವಹಿಸಬೇಕು. ಎಲ್ಲರೂ ಕ್ಷೇತ್ರದೊಳಗೆ ಸಕ್ರಿಯರಾಗಿದ್ದುಕೊಂಡು ಜನರ ಮನಸ್ಸನ್ನು ಗೆಲ್ಲುವ, ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುವಂತೆ ತಿಳಿಸಿದ್ದಾರೆ.

ನನ್ನ ಕೊನೆಯ ಚುನಾವಣೆ: ಇದೇ ನನ್ನ ಕೊನೆಯ ಚುನಾವಣೆ. ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಜಿಲ್ಲೆಯೊಳಗೆ 7ಕ್ಕೆ 7 ಸ್ಥಾನಗಳಲ್ಲೂ ಜೆಡಿಎಸ್‌ ಗೆಲುವು ಸಾಧಿಸಬೇಕು ಎನ್ನುವುದು ನನ್ನ ಕಡೇ ಆಸೆ. ಅದಕ್ಕಾಗಿ ಚುನಾವಣಾ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ. ಪ್ರಚಾರಕ್ಕೂ ನಾನೇ ಬರುತ್ತೇನೆ. ನೀವು ಸಂಘಟನೆ ವಿಚಾರದಲ್ಲಿ ಆಗಿಂದಾಗ್ಗೆ ಅಲ್ಲಲ್ಲಿ ಸಭೆ ಸೇರಿಕೊಂಡು ಚರ್ಚೆ ಮಾಡಿಕೊಳ್ಳಿ. ನನ್ನ ಅವಶ್ಯಕತೆ ಬಿದ್ದರೆ ಕರೆಯಿರಿ. ನೀವು ಕರೆದಲ್ಲಿಗೆ ಬರುವುದಕ್ಕೆ ನಾನು ಸಿದ್ಧನಿದ್ದೇನೆ. ಎಲ್ಲಿಯೂ ಗೊಂದಲಗಳನ್ನು ಮಾಡಿಕೊಳ್ಳಬೇಡಿ. ಭಿನ್ನಮತಕ್ಕೆ ಅವಕಾಶ ಕೊಡಬೇಡಿ ಎಂದು ದೇವೇಗೌಡರು ತಿಳಿಸಿದ್ದಾರೆ.

ಎದುರಾಳಿ ಅಭ್ಯರ್ಥಿಗಳನ್ನು ನೋಡಿ ನಿರ್ಧಾರ: ಈಗ ಘೋಷಿಸಿರುವ ಅಭ್ಯರ್ಥಿಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಕಾಂಗ್ರೆಸ್‌-ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಯಾರಾಗುತ್ತಾರೆ ಎನ್ನುವುದನ್ನು ಪರಿಗಣಿಸಿ ಅಗತ್ಯಬಿದ್ದರಷ್ಟೇ ಬದಲಾವಣೆ ಬಗ್ಗೆ ಯೋಚಿಸುತ್ತೇವೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಅಂತಹ ಸಂದರ್ಭ ಸೃಷ್ಟಿಯಾಗುವುದಿಲ್ಲ ಎಂದುಕೊಂಡಿದ್ದೇನೆ. ಬದಲಾವಣೆ ಅನಿವಾರ್ಯವಾದರೆ ಯಾರ ಮನಸ್ಸಿಗೂ ನೋವಾಗದಂತಹ ನಿರ್ಧಾರವನ್ನು ನಾನು ಮಾಡುತ್ತೇನೆ ಎಂದು ಅಭಯ ನೀಡಿದ್ದಾರೆ.

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಬಿಜೆಪಿಯನ್ನು ಕಡೆಗಣಿಸಬೇಡಿ: ಬಿಜೆಪಿಯಲ್ಲಿ ಈಗ ಹಿಂದೆ ಇದ್ದ ಪರಿಸ್ಥಿತಿ ಇಲ್ಲ. ಆ ಪಕ್ಷದ ಅಭ್ಯರ್ಥಿಗಳು ಗೆಲ್ಲದಿರಬಹುದು. ಆದರೆ, ಒಂದಷ್ಟುಪ್ರಮಾಣದ ಓಟುಗಳನ್ನು ತಮ್ಮತ್ತ ಸೆಳೆಯುವ ಶಕ್ತಿಯನ್ನು ಹೊಂದಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ನಲ್ಲಿದ್ದವರು ಆ ಪಕ್ಷದ ಅಭ್ಯರ್ಥಿಗಳಾಗುವ ಸಾಧ್ಯತೆಗಳಿರುವುದರಿಂದ ಅವರನ್ನು ಅನುಸರಿಸಿಕೊಂಡು ಹೋಗದಂತೆ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಬೇಕು. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಭೇಟಿಯಿಂದ ಮಹತ್ವದ ಬದಲಾವಣೆಗಳು ಸೃಷ್ಟಿಯಾಗದಿದ್ದರೂ ಒಂದಷ್ಟು ಶಕ್ತಿಯನ್ನು ಪಕ್ಷಕ್ಕೆ ನೀಡಿ ಹೋಗಿದ್ದಾರೆ. ಅದರ ಪರಿಣಾಮ ಜೆಡಿಎಸ್‌ ಮೇಲೆ ಉಂಟಾಗದಂತೆ ತಡೆಯಬೇಕು ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

click me!