ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌

By Kannadaprabha NewsFirst Published Jan 28, 2023, 9:08 PM IST
Highlights

ಕಾಂಗ್ರೆಸ್‌ ನಡೆಸುತ್ತಿರುವುದು ಪ್ರಜಾಧ್ವನಿ ಯಾತ್ರೆಯಲ್ಲ, ಪ್ರಜಾಗೋವಿಂದ ಯಾತ್ರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು. ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಧ್ವನಿ ಯಾತ್ರೆ ಗೋವಿಂದ ಯಾತ್ರೆಯಾಗಿದೆ. 

ಮಂಡ್ಯ (ಜ.28): ಕಾಂಗ್ರೆಸ್‌ ನಡೆಸುತ್ತಿರುವುದು ಪ್ರಜಾಧ್ವನಿ ಯಾತ್ರೆಯಲ್ಲ, ಪ್ರಜಾಗೋವಿಂದ ಯಾತ್ರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವ್ಯಂಗ್ಯವಾಡಿದರು. ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಧ್ವನಿ ಯಾತ್ರೆ ಗೋವಿಂದ ಯಾತ್ರೆಯಾಗಿದೆ. ಪ್ರಜಾವಿರೋಧಿ ಯಾತ್ರೆಯಿಂದ ಕಾಂಗ್ರೆಸ್‌ ಸಂಖ್ಯೆ ಇಳಿಮುಖವಾಗಲಿದೆ. ರಾಜ್ಯದಲ್ಲಿ 120 ಸ್ಥಾನದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು 79ಕ್ಕೆ ತಂದ ಕೀರ್ತಿ ಸಿದ್ದರಾಮಯ್ಯರದ್ದು. ಈಗ 79 ರಿಂದ 52ಕ್ಕೆ ಇಳಿಸುವುದು ಡಿಕೆಶಿ-ಸಿದ್ದು ಸಾಧನೆ ಎಂದು ಕುಹಕವಾಡಿದರು.

ಡಿಕೆಶಿ, ಸಿದ್ದರಾಮಯ್ಯ ಇಬ್ಬರ ಬೇಡಿಕೆಯೂ ಚುನಾವಣೆಯಲ್ಲಿ ಈಡೇರುವುದಿಲ್ಲ. ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ. ರಾಮನ ಹೆಸರು ಹೇಳಿದರೂ ನಡುಕ, ಅಮಿತ್‌ ಶಾ, ಮೋದಿ ಬಂದರೂ ನಡುಕ ಎಂದರು. ಟಿಕೆಟ್‌ಗಾಗಿ ದೇವೇಗೌಡರ ಕುಟುಂಬದೊಳಗಿನ ಶೀತಲ ಸಮರದ ಬಗ್ಗೆ ಕೇಳಿದ ಪ್ರಶ್ನೆಗೆ, ಜೆಡಿಎಸ್‌ ಒಂದು ಅಪ್ರಸ್ತುತ ಪಕ್ಷ. ಅವರವರ ಮನೆ, ಕುಟುಂಬ, ಪಕ್ಷಗಳ ಕಥೆ ನನಗ್ಯಾಕೆ ಕಾಂಗ್ರೆಸ್‌, ಜೆಡಿಎಸ್‌ ಕುಟುಂಬ ಪಕ್ಷಗಳು. ವಂಶಪಾರಂಪರ್ಯ, ಕುಟುಂಬ ರಾಜಕಾರಣ ನಡೆಸುವ ಪಕ್ಷಗಳನ್ನು ಜನರು ತಿರಸ್ಕರಿಸಬೇಕು. ಹಾಸನದಲ್ಲಿ ಅವರು ಯಾರಿಗೇ ಟಿಕೆಟ್‌ ಕೊಟ್ಟರೂ ಗೆಲ್ಲೋದು ಬಿಜೆಪಿ ಎಂದು ಜೆಡಿಎಸ್‌ ಬಗ್ಗೆ ಚುಚ್ಚಿ ಮಾತನಾಡಿದರು.

ಡಿಕೆಶಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಸಚಿವ ಅಶ್ವತ್ಥ ನಾರಾಯಣ್‌

ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ, ಸುಮಲತಾ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಸಾಕಷ್ಟುಬಾರಿ ಅವರೊಂದಿಗೆ ಮಾತುಕತೆ ನಡೆದಿದೆ. ಅವರ ಬೆಂಬಲ ಕೋರಿದ್ದೇವೆ. ಅವರು ಪಕ್ಷ ಸೇರುವರೆಂಬ ವಿಶ್ವಾಸವಿದೆ ಎಂದರು. ಮುಂದೆ ನಡೆಯಲಿರುವ ಚುನಾವಣೆ ಹಳೇ ಮೈಸೂರು ಭಾಗದಲ್ಲಿ ನಾಲ್ವಡಿ ಮತ್ತು ಟಿಪ್ಪು ನಡುವೆ ನಡೆಯುವ ಮಹಾಸಂಗ್ರಾಮ. ಇದರಲ್ಲಿ ಜನರು ಯಾರನ್ನು ಗೆಲ್ಲಿಸುವರೋ ನೋಡೋಣ ಎಂದರು.

ನಾವು ನಾಲ್ವಡಿ ಪರವಾಗಿರುವವರು, ಕಾಂಗ್ರೆಸ್‌ನವರು ಟಿಪ್ಪು ಸುಲ್ತಾನ್‌ ಜೊತೆಗಿರುವವರು. ನಾಲ್ವಡಿ ಜೊತೆಗಿರುವ ಬಿಜೆಪಿಯನ್ನು ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ವೀರ ಸಾವಕರ್‌ ವರ್ಸಸ್‌ ಟಿಪ್ಪು ಸುಲ್ತಾನ್‌, ನಮ್ಮತನ ಮತ್ತು ವಿದೇಶಿತನ. ವಿದೇಶಿಗರನ್ನು ಮನೆಗೆ ಕಳುಹಿಸಿ ಸ್ವದೇಶಿಗರಿಗೆ ಜಯ ಸಿಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು ಸಂಪೂರ್ಣ ತಿರಸ್ಕರಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಎಸ್‌.ಸಚ್ಚಿದಾನಂದ, ಮಂಡಲ ಅಧ್ಯಕ್ಷ ಪೀ-ಹಳ್ಳಿ ರಮೇಶ್‌ ಇದ್ದರು.

ಕೌಶಲ್ಯ ರಹಿತ ಶಿಕ್ಷಣ ಲಾಭದಾಯಕವಲ್ಲ: ಸಚಿವ ಅಶ್ವತ್ಥ ನಾರಾಯಣ್‌

ಪ್ರತಿಪಕ್ಷಗಳಿಂದ ಕಿಡಿಗೇಡಿ ಕೆಲಸ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಅವರಿಗೆ ಗೋ-ಬ್ಯಾಕ್‌ ಭಿತ್ತಿಚಿತ್ರ ಅಂಟಿಸಿರುವುದು ಪ್ರತಿಪಕ್ಷಗಳ ಕಿಡಿಗೇಡಿ ಕೆಲಸ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆರೋಪಿಸಿದರು. ಆರ್‌. ಅಶೋಕ್‌ ವಿರುದ್ಧ ಗೋ ಬ್ಯಾಕ್‌ ಚಳವಳಿ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಗೋ-ಬ್ಯಾಕ್‌ ಕುರಿತಂತೆ ಈಗಾಗಲೇ ಸಚಿವ ಆರ್‌.ಅಶೋಕ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಆ ಬಗ್ಗೆ ಗೊತ್ತಿಲ್ಲ. ಉಸ್ತುವಾರಿ ನೀಡುವುದು ಮುಖ್ಯಮಂತ್ರಿಗೆ ಇರುವ ಅಧಿಕಾರ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರವಾದ ಕೆಲಸ ಮಾಡುತ್ತೇವೆ ಎಂದಷ್ಟೇ ಹೇಳಿದರು.

click me!