ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದು, ಈ ಬಾರಿ ಕೋಲಾರದಿಂದ ಸ್ಪರ್ಧಿಸಲಿಚ್ಛಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ವೇಳೆ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿದರೆ ಆಸ್ತಿ ಮಾರಿಯಾದರೂ ಸೈ, ಅವರಿಗೆ 1 ಕೋಟಿ ರು. ದೇಣಿಗೆ ನೀಡುವುದಾಗಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
ಯಾದಗಿರಿ (ಜ.28): ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದು, ಈ ಬಾರಿ ಕೋಲಾರದಿಂದ ಸ್ಪರ್ಧಿಸಲಿಚ್ಛಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ವೇಳೆ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿದರೆ ಆಸ್ತಿ ಮಾರಿಯಾದರೂ ಸೈ, ಅವರಿಗೆ 1 ಕೋಟಿ ರು. ದೇಣಿಗೆ ನೀಡುವುದಾಗಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಜ.28ರ ಶನಿವಾರ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಇಲ್ಲಿಗೆ ಬರಲಿರುವ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯ ಈ ಘೋಷಣೆ, ಅದರಲ್ಲೂ ಬಿಜೆಪಿ ಮುಖಂಡನ ತಮ್ಮ ಮೇಲಿನ ಇಂತಹ ಅಭಿಮಾನ ಅಚ್ಚರಿ ಮೂಡಿಸಬಹುದು.
ವಡಗೇರಾ ತಾಲೂಕಿನ ಹಯ್ಯಾಳದ ಬಿಜೆಪಿ ಮುಖಂಡ ಚಂದ್ರಯ್ಯ ನಾಗರಾಳ ಎನ್ನುವವರ ಸಿದ್ಧು ಪರ ಈ ಘೋಷಣೆ ಇದೀಗ ಬಿಜೆಪಿ ಪಾಳೆಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಂದ್ರಯ್ಯ, ಸಿದ್ದರಾಮಯ್ಯ ಸ್ಪರ್ಧಿಸಿದರೆ ಹಿಂದುಳಿದ ಭಾಗದ ಈ ಅಭಿವೃದ್ಧಿ ಸಾಧ್ಯ. ತಾನು ಬಿಜೆಪಿ ಕಾರ್ಯಕರ್ತನಾಗಿದ್ದರೂ, ಸಿದ್ದರಾಮಯ್ಯ ಮಾಡಿದ ಅಭಿವೃದ್ಧಿ ಕೆಲಸಗಳು ಈ ಬದಲಾವಣೆಗೆ ಕಾರಣ ಎಂದು ಹೇಳಿದರು.
ಬಿಜೆಪಿಯಿಂದ ಸರ್ಕಾರದ ಹಣ ವೃಥಾ ಪೋಲು: ಪ್ರಿಯಾಂಕ್ ಖರ್ಗೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿ, ಅವರು ಇಲ್ಲಿಗೆ ಬಂದರೆ ನನ್ನ 7 ಎಕರೆ ಜಮೀನು ಮಾರಾಟ ಮಾಡಿಯಾದರೂ ಸೈ, ಅವರಿಗೆ ಉಡುಗೊರೆ ನೀಡುವೆ ಎಂದ ನಾಗರಾಳ್, ಸಿದ್ದರಾಮಯ್ಯ ಹಣ ಕೊಳ್ಳೆ ಹೊಡೆದಿಲ್ಲ, ಅವರ ಹತ್ತಿರ ಹಣವಿಲ್ಲ, ಹೀಗಾಗಿ ಚುನಾವಣೆ ಖರ್ಚಿಗಾಗಿ ಹಣ ನೀಡುತ್ತೇನೆ ಎಂದರು. ಯಾದಗಿರಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತೇನೆಂದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದರು.
ಸಿದ್ದರಾಮಯ್ಯ ಸಾಧನೆಗಳ ಕರಪತ್ರ ಹಂಚಿಕೆ: ಇಂದು ನಡೆಯಲಿರುವ ಕಾಂಗ್ರೆಸ್ ಪ್ರಜಾ ಧ್ವನಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ. ಈ ಮಧ್ಯೆ, ನಗರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಕರಪತ್ರಗಳ ಹಂಚಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸಾಧನೆಗಳ ಕರಪತ್ರಗಳನ್ನು ಎಲ್ಲೆಡೆ ಹಂಚುತ್ತಿರುವ ಕಲ್ಯಾಣ ಕರ್ನಾಟಕ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ಇದಕ್ಕಾಗಿ ಎಲ್ಲೆಡೆ ತಿರುಗಾಡುತ್ತಿದ್ದಾರೆ.
ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ಗೇ ಕುತ್ತು: ಸಿ.ಪಿ.ಯೋಗೇಶ್ವರ್
‘ದೇವರು ಒಬ್ಬ ನಾಮ ಹಲವು, ಶ್ರೀಸಿದ್ದರಾಮಯ್ಯ ಒಬ್ಬ ನಾಮ ಹಲವು’ ಘೋಷಣೆಯೊಂದಿಗೆ ಕರಪತ್ರಗಳ ಹಂಚಿಕೆ ನಡೆಸಲಾಗುತ್ತಿದೆ. ಅನ್ನ ರಾಮಯ್ಯ, ಶಾಶ್ವತ ಮುಖ್ಯಮಂತ್ರಿ ರಾಮಯ್ಯ, ಕಲಿಯುಗದ ರಾಮಯ್ಯ ಸೇರಿದಂತೆ ಹಲವು ಘೋಷಣೆ ಉಲ್ಲೇಖಿಸಿ ಕರಪತ್ರಗಳ ವಿತರಣೆ ಮಾಡಲಾಗುತ್ತಿದೆ. ಹಳೆ ಬಸ್‌ನಿಲ್ದಾಣ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗೆ ಕರಪತ್ರಗಳ ವಿತರಣೆ ನಡೆಯುತ್ತಿದ್ದು, ಸಿದ್ದರಾಮಯ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕರಪತ್ರಗಳ ಹಂಚಿಕೆ ನಡೆಯುತ್ತಿದೆ.