ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಮೈಸೂರು (ಫೆ.07): ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಪಕ್ಷಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಬಿಜೆಪಿಯವರು ಹೆಸರಿಗೆ ಮಾತ್ರ ರಾಮರಾಜ್ಯ ಎನ್ನುತ್ತಾರೆ. ಮಾಡುವುದೆಲ್ಲಾ ಅಧರ್ಮದ ಕೆಲಸ. ಮೋದಿ ಪ್ರಧಾನಿ ಆದ ದಿನದಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ಶುರುವಾಗಿದೆ. ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಅವರ ವಿರುದ್ಧ ಮಾತನಾಡಿದವರನ್ನು ಮುಗಿಸುವ, ಹೆದರಿಸುವ, ಬೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಬಿಜೆಪಿಯವರೇ ಬಿಜೆಪಿ ಕೇಂದ್ರ ಮುಖಂಡರನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಇಲ್ಲ. ಮಾಡಿದರೆ ಅವರನ್ನೂ ಮುಗಿಸುವ ಕೆಲಸ ಮಾಡಲಾಗುತ್ತದೆ. ಯಾವ ತನಿಖಾ ಸಂಸ್ಥೆಗಳು, ರಾಜ್ಯಪಾಲರು ಸ್ವತಂತ್ರವಾಗಿಲ್ಲ. ಚುನಾವಣೆ ಬಂದಾಗ ಇವೆಲ್ಲವನ್ನು ಬಳಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಪ್ರತಿಭಟನೆಗೆ ಬರಲು ಬಿಜೆಪಿ ಸಂಸದರಿಗೆ ತಾಕತ್ತಿದೆಯಾ?: ಸಚಿವ ಚಲುವರಾಯಸ್ವಾಮಿ
ದೇಶದಲ್ಲಿರುವ ಬಿಜೆಪಿಯೇತರ ಸರ್ಕಾರಗಳನ್ನು ಮೋದಿ ಸಹಿಸುತ್ತಿಲ್ಲ. ಹೇಗಾದರೂ ಮಾಡಿ ಸರ್ಕಾರಗಳನ್ನು ಬೀಳಿಸುವ ತಂತ್ರ ಮಾಡುತ್ತಿದ್ದಾರೆ. ಸರ್ಕಾರಗಳನ್ನು ಬೀಳಿಸುವುದು ಬಿಜೆಪಿಯ ಹುಟ್ಟುಗುಣ. ಜಾರ್ಖಂಡ್ ಸೇರಿದಂತೆ ಹಲವು ಕಡೆ ನಡೆಯುತ್ತಿರುವುದು ಇದೆ. ತನಿಖಾ ಸಂಸ್ಥೆಗಳನ್ನೂ ಇದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿ ದೇಶ ಕಟ್ಟುವ ಕೆಲಸ ಮಾಡಿಲ್ಲ ಕಾಂಗ್ರೆಸ್ ದೇಶ ಒಡೆಯುವ ಮನಸ್ಥಿತಿಯಲ್ಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವತ್ತೂ ದೇಶ ಕಟ್ಟುವ ಕೆಲಸ ಮಾಡಿಲ್ಲ. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಡಿದಾಗ ಹಿಂದೂ ಮಹಾಸಭಾದವರು ಬ್ರಿಟಿಷರ ಪರ ಇದ್ದರು. ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದು ನಾವೇ, ಅದನ್ನು ಹೊರತುಪಡಿಸಿ ಎಲ್ಲವನ್ನೂ ಒಗ್ಗೂಡಿಸಿದ್ದೇವೆ. ಆರ್ ಎಸ್ಎಸ್, ಹಿಂದೂ ಮಹಾಸಭಾ ಎಂದು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರು ದೇಶ ಭಕ್ತರಲ್ಲ ಎಂದು ಹೇಳುವುದಿಲ್ಲ. ಆದರೆ, ಅವರು ಮಾತ್ರ ದೇಶಭಕ್ತರು, ಬೇರೆಯವರು ಅಲ್ಲ ಎನ್ನೋದನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದರು.
ಮಕ್ಕಳಲ್ಲಿ ಕೋಮುವಾದಿ ವಿಷ ತುಂಬುವ ಚಾಳಿ ಬಿಜೆಪಿಯದ್ದು: ಸಚಿವ ಮಧು ಬಂಗಾರಪ್ಪ
ಅನಿವಾರ್ಯವಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ. ಬಿಜೆಪಿ ಸರ್ಕಾರ ಇಲ್ಲದ ಎಲ್ಲಾ ರಾಜ್ಯದ ಪರಿಸ್ಥಿತಿಯೂ ಇದೇ ಆಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೇಳುವ ಧೈರ್ಯವಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೇ ಕೆಲಸವನ್ನು ಮೋದಿ ಮುಂದೆ ಮಾಡಿದ್ದರೆ ಪ್ರತಿಭಟನೆ ಮಾಡುವ ಅವಶ್ಯಕತೆಯೇ ಇರಲಿಲ್ಲ.
- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು