* ಯುಟರ್ನ್ ಹೊಡೆದ್ರಾ ಸಚಿವ ಸಿ.ಪಿ.ಯೋಗೇಶ್ವರ್..?
* ಬಿಎಸ್ ಯಿಡಯೂರಪ್ಪನವರ ವಿಚಾರದಲ್ಲಿ ಅಚ್ಚರಿ ಹೇಳಿಕೆ ಕೊಟ್ಟ ಸಿಪಿವೈ
* ಕುತೂಹಲ ಮೂಡಿಸಿದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್
ಕೊಪ್ಪಳ, (ಜೂನ್.30): ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರು ಅಚ್ಚರಿ ಹೇಳಿಕೆ ನೀಡಿದರು.
ಇಂದು (ಬುಧವಾರ) ಕೊಪ್ಪಳದ ಅಂಜನಾದ್ರಿ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವು ಟಾರ್ಗೇಟ್ ಮಾಡಲ್ಲ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ ವಿಚಾರ, ನಮ್ಮಲ್ಲಿ ಆಂತರಿಕ ಸಮಸ್ಯೆಗಳು ಇವೆ. ಹಾಗಾಗಿ ನಾಯಕರ ಮುಂದೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ ವಿನಃ ಬೇರೆ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.
ಅತ್ತ ಜಾರಕಿಹೊಳಿ ದಿಲ್ಲಿಗೆ, ಇತ್ತ ಯೋಗೇಶ್ವರ್-ಯತ್ನಾಳ್ ರಹಸ್ಯ ಮಾತುಕತೆ
ಶಾಸಕ ಯತ್ನಾಳ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರವಾಸೋದ್ಯಮ ಇಲಾಖೆ ಮೂಲಕವೇ ರಾಜ್ಯದಲ್ಲಿ ನಾಲ್ಕು ಕಡೆ ತ್ರಿ ಸ್ಟಾರ್ ಹೋಟಲ್ ಕಟ್ಟಲು ನಿರ್ಧರಿಸಿದ್ದೇವೆ. ಹಾಗಾಗಿ ಕಲಬುರಗಿಯಲ್ಲಿ ಹೋಟೆಲ್ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಸಂಬಂಧ ಭೇಟಿ ಮಾಡಿರುವೆ. ಅವರ ಕ್ಷೇತ್ರದಲ್ಲಿ ತೆರಳುವಾಗ ಭೇಟಿ ಮಾಡಿರುವೆ ಅಷ್ಟೇ ಮತ್ತೆ ಬೇರೆ ವಿಚಾರವಿಲ್ಲ. ಯತ್ನಾಳ್ ಹಾಗೂ ನಾವು ಸಮಕಾಲಿನರು. ಹಾಗಾಗಿ ಅವರನ್ನ ಭೇಟಿ ಮಾಡಿದ್ದೇನೆ. ಮತ್ತೆ ಯಾವ ವಿಚಾರವೂ ಇಲ್ಲ ಎಂದರು.
ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಯಾವಾಗ ಬರುತ್ತೆ ಎಂದು ನೋಡೋಣ. ಪಕ್ಷದ ಹಿರಿಯರು ಯಾವಾಗ ತೀರ್ಮಾನ ಮಾಡ್ತಾರೋ ಆವಾಗ ಬರುತ್ತೆ ಎಂದರು. ರಮೇಶ ಜಾರಕಿಹೊಳಿ ಅವರು ಬಿಜೆಪಿಯ ಮೂವರಿಂದ ಅನ್ಯಾಯವಾಗಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅವರ ದೆಹಲಿ ಭೇಟಿ ವಿಷಯವೂ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.