* ಬಿಜೆಪಿಯ 3 ಜನರಿಂದ ನನ್ನ ಬೆನ್ನಿಗೆ ಚೂರಿ,
* ಅವರಿಗೆ ಪಾಠ ಕಲಿಸುವೆ: ರಮೇಶ್ ಗುಡುಗು
* ರಾತ್ರಿ 2 ಗಂಟೆಗೆ ಫೋನ್ ಬಂತು, ದಿಲ್ಲಿಗೆ ಬಂದೆ
* ವಿಡಿಯೋ ಬಿಡುಗಡೆ ಮಾಡುವೆ
ನವದೆಹಲಿ(ಜೂ.30): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನನಗೆ ಅನ್ಯಾಯ ಆಗಿಲ್ಲ. ಆದರೆ, ಪಕ್ಷದ ಮೂವರು ನಾಯಕರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಬಳಿ ಆಕ್ರೋಶ ಹೊರಹಾಕಿದ್ದಾರೆ.
ಮಂಗಳವಾರ ದಿಢೀರ್ ದೆಹಲಿಗೆ ತೆರಳಿದ ರಮೇಶ್ ಜಾರಕಿಹೊಳಿ ‘ದೆಹಲಿಯಿಂದ ರಾತ್ರಿ 2 ಗಂಟೆಗೆ ಕರೆ ಬಂದಿದ್ದರಿಂದ ಇಲ್ಲಿಗೆ ಆಗಮಿಸಿದ್ದೇನೆ. ವೈಯಕ್ತಿಕ ಕಾರಣಕ್ಕಾಗಿ ಬಂದಿದ್ದೇನೆ. ಬುಧವಾರ ಎಲ್ಲವನ್ನೂ ವಿವರಿಸುವೆ’ ಎಂದು ನಿಗೂಢವಾಗಿ ಹೇಳಿದರು.
ತಮ್ಮ ಆಪ್ತರ ಬಳಿ ಮಾತನಾಡುವ ವೇಳೆ ಪಕ್ಷದ ಮೂವರು ನಾಯಕರು ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದರು ಎಂಬ ವಿಷಯ ತಿಳಿಸಿರುವ ರಮೇಶ್ ಜಾರಕಿಹೊಳಿ, ಅವರಿಗೆ ತಕ್ಕ ಪಾಠ ಕಲಿಸುವೆ ಎಂದೂ ಹೇಳಿದ್ದಾರೆ. ಬಹುತೇಕ ಬುಧವಾರ ಜಾರಕಿಹೊಳಿ ಅವರು ಷಡ್ಯಂತ್ರದ ಕುರಿತ ಸಾಕ್ಷ್ಯ ಎನ್ನಲಾದ ವೀಡಿಯೋವೊಂದನ್ನು ದೆಹಲಿಯಿಂದಲೇ ಬಿಡುಗಡೆ ಮಾಡುವ ಸಂಭವವಿದೆ ಎನ್ನಲಾಗುತ್ತಿದೆ.
ತಮ್ಮ ಸ್ವಕ್ಷೇತ್ರ ಗೋಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದರು. ಕಟೀಲ್ ಅವರ ಸಹೋದರ ನಿಧನವಾಗಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಇನ್ನು ಯಡಿಯೂರಪ್ಪ ಅವರು ನಗರದಲ್ಲೇ ಇದ್ದರೂ ಅವರನ್ನು ಭೇಟಿ ಮಾಡದೆ ಜಾರಕಿಹೊಳಿ ದಿಢೀರನೆ ದೆಹಲಿಗೆ ಹಾರಿದರು.