ಬೆಂಗಳೂರು (ಜೂ.30): ಕೆಪಿಸಿಸಿ ಅಧ್ಯಕ್ಷರು ಹಾಗೂ ನನ್ನ ನಡುವೆ ಸಮನ್ವಯತೆ ಕೊರತೆ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ. ನಮ್ಮಿಬ್ಬರ ನಡುವೆ ಸಮನ್ವಯ ಸಮಿತಿ ರಚನೆಯಾಗುತ್ತದೆ ಎಂಬುದು ಶುದ್ದ ಸುಳ್ಳು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
- ಇದೇ ವೇಳೆ ಸದ್ಯಕ್ಕೆ ದೆಹಲಿಗೆ ಹೋಗುತ್ತಿಲ್ಲ. ಜುಲೈ 1 ರಿಂದ ಜನ ಸಂಪರ್ಕ ಅಭಿಯಾನ ಶುರುವಾಗಲಿದೆ. ಕೊರೋನಾ ಸಂಕಷ್ಟದಲ್ಲಿರುವವರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಜುಲೈ ತಿಂಗಳು ಪೂರ್ತಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.
undefined
'ಕಾಂಗ್ರೆಸ್‌ನವರೇ 5 ಶಾಸಕರನ್ನು ಬಿಜೆಪಿಗೆ ಕಳಿಸಿದ್ದರು'
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಪಕ್ಷದ ಅಧ್ಯಕ್ಷರ ನಡುವೆ ಸಮನ್ವಯ ಸಮಿತಿ ರಚನೆ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹುಟ್ಟು ಹಾಕಿದ್ದಾರೆ. ಇದನ್ನು ಹೇಳಿದವರು ಯಾರು? ನಮ್ಮಲ್ಲಿ ಸಮನ್ವಯ ಕೊರತೆ ಇಲ್ಲ. ಮುಂದೆ ಈ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿರ್ಧಾರದಿಂದ ನಿಮಗೇ ಎಲ್ಲವೂ ಗೊತ್ತಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಪದಾಧಿಕಾರಿಗಳ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವಿಚಾರ ಪಕ್ಷದ ವೇದಿಕೆಯಲ್ಲಿಯೇ ಚರ್ಚೆ ಮಾಡುತ್ತೇನೆ. ಪದಾಧಿಕಾರಿಗಳ ನೇಮಕ ವಿಚಾರವನ್ನು ಮಾಧ್ಯಮಗಳ ಮುಂದೆ ಚರ್ಚಿಸಲು ಆಗುವುದಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಐದು ಮಂದಿ ಕಾರ್ಯಾಧ್ಯಕ್ಷರು ಈ ಬಗ್ಗೆ ಪ್ರಕ್ರಿಯೆ ನಡೆಸುತ್ತಾರೆ ಎಂದರು.
ಪಕ್ಷದಲ್ಲಿನ ದಲಿತ ಮುಖ್ಯಮಂತ್ರಿ ಕುರಿತ ಬೆಳವಣಿಗೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನನಗೇನೂ ಗೊತ್ತಿಲ್ಲ. ನಾನೇನು ಸರ್ವಜ್ಞನಾ? ಎಂದು ಪ್ರಶ್ನಿಸಿದರು.