
ಬೆಂಗಳೂರು (ಫೆ.08): ಸ್ವಾಮಿ ಸಚಿವ ಎನ್.ಚಲುವರಾಯಸ್ವಾಮಿ ಅವರೇ, ಮಾಧ್ಯಮಗಳ ಮುಂದೆ ಬಾಯಿಗೆ ಬದಂತೆ ಬಡಬಡಾಯಿಸುವುದು ಬಿಟ್ಟು ತಮ್ಮ ಖಾತೆ ನಿರ್ವಹಣೆ ಬಗ್ಗೆ ಸ್ವಲ್ಪ ಗಮನ ಕೊಡಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಯಾವ ಬಣಕ್ಕೆ ಸೇರಬೇಕೆಂಬುದು ತಿಳಿಯದೇ ತ್ರಿಶಂಕು ಸ್ಥಿತಿಯಲ್ಲಿರುವ ನಿಮಗೆ ಸಿಎಂ ಬದಲಾದರೆ ಸಚಿವ ಸ್ಥಾನ ಸಿಗುತ್ತದೆ ಇಲ್ಲವೋ ಗೊತ್ತಿಲ್ಲ. ನಿಮ್ಮ ಖಾತೆಯ 20 ತಿಂಗಳ ಸಾಧನೆಯೇನು ತಿಳಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕೆ ಮಾಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ವಾಮಿ ಸಚಿವ ಚಲುವರಾಯಸ್ವಾಮಿ ಅವರೇ, ಮಾಧ್ಯಮಗಳ ಮುಂದೆ ಬಾಯಿಗೆ ಬದಂತೆ ಬಡಬಡಾಯಿಸುವುದು ಬಿಟ್ಟು ತಮ್ಮ ಖಾತೆ ನಿರ್ವಹಣೆ ಬಗ್ಗೆ ಸ್ವಲ್ಪ ಗಮನ ಕೊಡಿ. ಇಷ್ಟಕ್ಕೂ ತಮ್ಮ ಖಾತೆ ಯಾವುದು ಎಂದು ತಮಗೆ ನೆನಪಿದೆಯೇ ಚಲುವರಾಯಸ್ವಾಮಿ ಅವರೇ? ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಇರಬೇಕೋ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಳ್ಳಬೇಕೋ ಎಂಬ ತ್ರಿಶಂಕು ಸ್ಥಿತಿಯಲ್ಲಿರುವ ತಮಗೆ, ಸಂಪುಟ ಪುನಾರಚನೆ ಆದರೆ ಅಥವಾ ಮುಖ್ಯಮಂತ್ರಿ ಬದಲಾದರೆ ತಮ್ಮ ಕುರ್ಚಿ ಉಳಿಯುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಇರುವ ತಮಗೆ ಪಾಪ ತಮ್ಮ ಖಾತೆ, ತಮ್ಮ ಕರ್ತವ್ಯದ ಬಗ್ಗೆ ಹೇಗೆ ನೆನಪಿರಲು ಸಾಧ್ಯ.
ತಾವು ಜವಾಬ್ದಾರಿ ಹೊತ್ತಿರುವ ಖಾತೆ ಎಂತಹದ್ದು, ಅದರ ಪ್ರಾಮುಖ್ಯತೆ ಏನು, ಗಂಭೀರತೆ ಏನು, ಆ ಇಲಾಖೆಯನ್ನ ಈ ಹಿಂದೆ ಎಂತೆಂತಹ ಮುತ್ಸದ್ಧಿ ನಾಯಕರು ನಿರ್ವಹಿಸಿದ್ದರು ಎಂಬ ಕನಿಷ್ಠ ಅರಿವಾದರೂ ತಮಗಿದೆಯೇ? ಇಷ್ಟಕ್ಕೂ ಕಳೆದ 20 ತಿಂಗಳಲ್ಲಿ ಕೃಷಿ ಸಚಿವರಾಗಿ ತಮ್ಮ ಸಾಧನೆಯಾದರೂ ಏನು?
ಇದನ್ನೂ ಓದಿ: Delhi Election 2025 Results Live ಆರಂಭಿಕ ಟ್ರೆಂಡ್‌ನಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಪ್ರಚಂಡ ಮುನ್ನಡೆ
ಇದನ್ನೂ ಓದಿ: ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ: ಸಂಸದ ಶೆಟ್ಟರ್
ಈಗಿರುವ ಕಾನೂನಿನ ಚೌಕಟ್ಟಿನಲ್ಲಿಯೇ ಮೈಕ್ರೋ ಫೈನಾನ್ಸ್ ಕಂಪನಿಗಳ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಅಭಿಪ್ರಾಯದ ಬಗ್ಗೆ ತಮ್ಮ ಸರ್ಕಾರಕ್ಕೆ ತಕರಾರಿದ್ದರೆ ಅವರಿಗೆ ಪತ್ರ ಬರೆದು, ಅವರನ್ನ ಭೇಟಿಯಾಗಿ ಮನವರಿಕೆ ಮಾಡಿಕೊಡಿ. ಅದು ಬಿಟ್ಟು ಸಾಂವಿಧಾನಿಕ ಹುದ್ದೆಯಲ್ಲಿರುವವರ ಮೇಲೆ ರಾಜಕೀಯ ಟೀಕೆ ಮಾಡುವುದು, ಬಿಜೆಪಿ ವಕ್ತಾರರು ಎಂದು ಆಪಾದನೆ ಮಾಡುವುದು ಎಷ್ಟು ಸರಿ?
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದಾಗ ಯಾವ್ಯಾವ ರಾಜ್ಯದ ರಾಜ್ಯಪಾಲರು ಹೇಗೆ ನಡೆದುಕೊಂಡಿದ್ದಾರೆ ಎಂಬ ಇತಿಹಾಸ ಇಡೀ ದೇಶದ ಜನತೆಗೆ ಚೆನ್ನಾಗಿ ಗೊತ್ತಿದೆ. ಈ ರೀತಿ ಅನಾವಶ್ಯಕ ಹೇಳಿಕೆಗಳನ್ನು ಕೊಟ್ಟು ಟೈಂಪಾಸ್ ಮಾಡುವ ಬದಲು ತಮ್ಮ ಇಲಾಖೆಯ ಕೆಲಸ ನಿರ್ವಹಣೆ ಮಾಡುವ ಕಡೆ ಗಮನ ಕೊಡಿ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ಕರ್ತವ್ಯ ಪಾಲಿಸಿ ಮತದಾರರ ಋಣ ತೀರಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.