
ಬೆಂಗಳೂರು (ಫೆ.8): ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇತರೆ ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಟ್ಟಾ ಬೆಂಬಲಿಗ ಎಚ್.ಎಸ್.ಮಂಜುನಾಥ ಅತೀ ಹೆಚ್ಚು ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಒಟ್ಟು 14 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಸಚಿವರಾದ ಕೆ.ಎನ್.ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿದ್ದ ದೀಪಿಕಾ ರೆಡ್ಡಿ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗ ಅಭ್ಯರ್ಥಿ ಎಚ್.ಎಸ್.ಮಂಜುನಾಥ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಚುನಾವಣೆಯಲ್ಲಿ ಮಂಜುನಾಥ ಅತಿ ಹೆಚ್ಚು 5,67,343 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ದೀಪಿಕಾ ರೆಡ್ಡಿ 2,95,705 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ದೆಹಲಿ ಚುನಾವಣಾ ಫಲಿತಾಂಶದ ನಡುವೆ ಇದನ್ನು ತಿಳಿಯಲೇಬೇಕು,1500 ವರ್ಷಗಳ ಕಾಲ ಇತಿಹಾಸವೇ ಕಾಣೆ!
ಯುವ ಮುಖಂಡ ಮಂಜುನಾಥ ಅವರು ಈ ಹಿಂದೆ ಎರಡು ಬಾರಿ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು. ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿ, ಕಾಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಈ ಹಿಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಸ್ಪರ್ಧಿಸಿದ್ದರು.
ಯುವ ಮತದಾರರಿಗೆ ನಮಿಸುವೆ, ಡಿಕೆಶಿ ಪ್ರೀತಿಗೆ ಋಣಿ:
ತಮ್ಮ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಮಂಜುನಾಥ ಅವರು, ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿರುವ ಎಲ್ಲ ಯುವ ಮತದಾರರಿಗೆ ವಿನಮ್ರವಾಗಿ ನಮಿಸುತ್ತೇನೆ. ಅತ್ಯಂತ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ, ಮಾರ್ಗದರ್ಶನ ನೀಡಿ ಪ್ರತಿ ಹಂತದಲ್ಲೂ ಬೆಳವಣಿಗೆಗೆ ಅಭಯ ಹಸ್ತವಾಗಿ ನಿಂತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರೀತಿಗೆ ನಾನು ಋಣಿ ಎಂದು ಹೇಳಿದ್ದಾರೆ.
ಜಿಮ್ ರಾಜ್ಯದ ಅಭಿವೃದ್ಧಿ ದಿಕ್ಕು ಬದಲಿಸಲಿದೆ: ಮುಖಾಮುಖಿಯಲ್ಲಿ ಸಚಿವ ಎಂ.ಬಿ. ಪಾಟೀಲ್!
ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ಹಾರಿಸ್ ನಲಪಾಡ್ ಸ್ಥಾನಕ್ಕೆ ಮಂಜುನಾಥ ನೇಮಕವಾಗಲಿದ್ದಾರೆ. ಇನ್ನು ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿ ಆಯ್ಕೆಯಾಗಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಮೂಲಕ ಮಗಳು ಪ್ರಿಯಾಂಕಾ ಜಾರಕಿಹೊಳಿಯನ್ನು ರಾಜಕೀಯ ಪ್ರವೇಶಿಸುವಂತೆ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಇದೀಗ ಮಗನನ್ನೂ ರಾಜಕೀಯ ಅಖಾಡಕ್ಕಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.