ಮಳೆ ಕೈಕೊಟ್ಟ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲು ಮೇಕೆದಾಟು ಯೋಜನೆ ನೆರವಾಗಲಿದ್ದು, ಈ ಯೋಜನೆ ಜಾರಿಗೆ ತಮಿಳುನಾಡು ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಬೆಂಗಳೂರು (ಆ.16): ಮಳೆ ಕೈಕೊಟ್ಟ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲು ಮೇಕೆದಾಟು ಯೋಜನೆ ನೆರವಾಗಲಿದ್ದು, ಈ ಯೋಜನೆ ಜಾರಿಗೆ ತಮಿಳುನಾಡು ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ 10 ಟಿಎಂಸಿ ನೀರನ್ನು ನೀಡಲು ತಯಾರಿದ್ದೇವೆ. ಈಗ ಎಷ್ಟುನೀರು ಲಭ್ಯವಿದೆಯೊ ಅಷ್ಟು ನೀರನ್ನು ಕೊಟ್ಟಿದ್ದೇವೆ. ನಮ್ಮ ರೈತರಿಗೂ ನೀರನ್ನು ಕೊಟ್ಟಿದ್ದೇವೆ.
ನೀರು ಹಂಚಿಕೆ ವಿಚಾರವಾಗಿ ಯಾವುದೇ ಗದ್ದಲ ಬೇಡ, ಮಳೆ ಬಂದರೆ ಖಂಡಿತವಾಗಿ ನೀರನ್ನು ಕೊಡುತ್ತೇವೆ. ಕಳೆದ ಬಾರಿ 400 ಟಿಎಂಸಿ ನೀರನ್ನು ಸಮುದ್ರಕ್ಕೆ ಸೇರಿದೆ, ಗೊಂದಲಕ್ಕೆ ಅವಕಾಶ ಬೇಡ ಎಂದು ತಮಿಳುನಾಡಿನ ಬಳಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಮೇಕೆದಾಟು ಯೋಜನೆ ಜಾರಿ ವಿಚಾರಕ್ಕೂ ತಮಿಳುನಾಡು ಸಹಕಾರ ನೀಡುತ್ತಿಲ್ಲ. ಈ ರೀತಿಯ ಸಂಕಷ್ಟದ ಕಾಲದಲ್ಲಿ ಮೇಕೆದಾಟು ಯೋಜನೆ ನಿಮ್ಮ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.
ಸಚಿವ ಖೂಬಾ ನನ್ನನ್ನು ಲಂಬಾಣಿ ಚೋರ್ ಅಂತ ಕರೀತಾರೆ: ಪ್ರಭು ಚವ್ಹಾಣ್
ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಅಗತ್ಯ: ಅಹಿಂಸೆ, ಶಾಂತಿ, ಸೌಹಾರ್ದತೆ, ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಈ ದೇಶದಲ್ಲಿ ಧರ್ಮ, ಜಾತಿ, ವರ್ಣದ ವಿಷ ಬೀಜ ಬಿತ್ತಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಂದಿನ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ಧ ನಡೆದಿತ್ತು, ಇಂದಿನ ಸಂಗ್ರಾಮ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯಬೇಕು. ಅಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶವೇ ಒಂದಾಗಿತ್ತು. ಇಂದು ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯಾ’ ಒಂದಾಗಿದೆ ಎಂದರು.
ಕೋಮುವಾದಿ ಹಾಗೂ ಸರ್ವಾಧಿಕಾರಿ ಮನಸ್ಥಿತಿ ದೇಶದ ಅಧಿಕಾರದ ಗದ್ದುಗೆಯಲ್ಲಿದ್ದು, ಈ ದುಷ್ಟಶಕ್ತಿಗಳು ಕೇವಲ ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿಲ್ಲ. ಅವರು ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಸ್ವಾತಂತ್ರ್ಯೋತ್ಸವದಂದು ಕೇವಲ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದರೆ ಸಾಲದು. ದೇಶದ ಸ್ವಾತಂತ್ರ್ಯ ಏನಾಗಿದೆ ಎಂಬುದನ್ನು ಅರಿತು ಜಾಗೃತರಾಗಬೇಕಿದೆ. ಮಣಿಪುರದಲ್ಲಿ ಮಾರಣ ಹೋಮ, ಹರ್ಯಾಣದ ಗಲಭೆ, ಉತ್ತರ ಪ್ರದೇಶದ ಘಟನೆಗಳನ್ನು ನೋಡಿದರೆ ದೇಶದ ಸ್ವಾತಂತ್ರ್ಯ ಏನಾಗಿದೆ. ಅದು ಯಾರ ಕೈಯಲ್ಲಿ ನಲುಗುತ್ತಿದೆ ಎಂದು ತಿಳಿಯುತ್ತದೆ ಎಂದರು. ಸ್ವಾತಂತ್ರ್ಯದ ಮೂಲ ಗುರಿಯಾದ ಐಕ್ಯತೆ, ಸಮಗ್ರತೆ, ಸಹಬಾಳ್ವೆ, ಕೋಮು ಸೌಹಾರ್ದತೆ ಪ್ರಸ್ತುತವಾಗಿ ದಿಕ್ಕಾಪಾಲಾಗಿದೆ. ಬಿಜೆಪಿಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ. ಏಕೆಂದರೆ ಆ ಪಕ್ಷಕ್ಕೆ ಹೋರಾಟದ ಇತಿಹಾಸವಿಲ್ಲ ಎಂದರು.
ನನ್ನನ್ನು ಟಾರ್ಗೆಟ್ ಮಾಡಿದರೆ ಡಿಕೆಶಿ ಸಿಎಂ ಆಗಲ್ಲ: ಸಿ.ಟಿ.ರವಿ
ಸ್ವಾತಂತ್ರ್ಯ ದಿನ ಎಂದರೆ ನಮ್ಮ ಸಾಧನೆಯ ಇತಿಹಾಸ ನೆನಪಿಸಿಕೊಳ್ಳುವ ದಿನವಾಗಿದೆ. ವರ್ತಮಾನದಲ್ಲಿ ನಾವು ಹೇಗಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳಬೇಕು. ಜತೆಗೆ ಯುವ ಜನತೆಗೆ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ನಾವು ಎಡವಿದ ಪರಿಣಾಮ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಗುಲಾಮರಾದವರನ್ನು ದೇಶಭಕ್ತ ಎಂದು ಪೂಜಿಸಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಿಟ್ಟಗಾಂಧೀಜಿ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.